ಕೊಳ್ಳೇಗಾಲ : ಸ್ವಾತಂತ್ರ್ಯ ಹೋರಾಟದಲ್ಲಿ ವೀರ ಮಹಿಳೆಯರ ಪಾತ್ರ ಅಪಾರವಾದದ್ದು ಎಂದು ಮೈಸೂರು ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಇತಿಹಾಸ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಸಹ ಪ್ರಾಧ್ಯಾಪಕ ಡಾ.ವಿ.ಎಂ.ರಮೇಶ್ ಹೇಳಿದರು.
ಪಟ್ಟಣದ ಜೆಎಸ್‌ಎಸ್ ಮಹಿಳಾ ಕಾಲೇಜು ಸಭಾಂಗಣದಲ್ಲಿ ಶುಕ್ರವಾರ ಇತಿಹಾಸ ವಿಭಾಗದ ವತಿಯಿಂದ ಆಯೋಜಿಸಿದ್ದ ವೀರ ಮಹಿಳಾ ಹೋರಾಟಗಾರರು ಎಂಬ ವಿಷಯದ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಣಿ ಅಬ್ಬಕ್ಕ, ಕಿತ್ತೂರು ರಾಣಿ ಚನ್ನಮ್ಮ ಮತ್ತು ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಕಮಲಾದೇವಿ, ಸಿದ್ಧಮ್ಮ ಹಾಗೂ ಸರೋಜಿನಿ ನಾಯ್ಡು ಅವರು ಗಾಂಧೀಜಿ ಅವರ ಜತೆ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದನ್ನು ಸ್ಮರಿಸಬಹುದು. ಅಲ್ಲದೆ ನಮ್ಮ ಭಾರತದ ಸಂಸ್ಕೃತಿ-ಪರಂಪರೆ ಉಳಿಸುವುದರಲ್ಲಿ ಮತ್ತು ಉತ್ತಮ ಶಿಕ್ಷಣ ನೀಡುವುದರಲ್ಲಿ ಜೆಎಸ್‌ಎಸ್ ವಿದ್ಯಾಸಂಸ್ಥೆಗಳ ಪಾತ್ರ ಬಹುಮುಖ್ಯವಾದದ್ದು ಹಾಗೂ ಇಂತಹ ಉತ್ತಮ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ನೀವೇ ಭಾಗ್ಯವಂತರು ಎಂದು ಹೇಳಿದರು.
ಪ್ರಾಂಶುಪಾಲ ಡಾ.ಎಚ್.ಎಸ್. ಕೊಂಗಳಪ್ಪ ಮಾತನಾಡಿ, ನಮ್ಮ ವೀರ ಮಹಿಳೆಯರು ದೇಶದ ಒಂದಲ್ಲ ಒಂದು ಭಾಗದಲ್ಲಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿರುವುದು ಸ್ಫೂರ್ತಿದಾಯಕವಾಗಿದೆ ಎಂದರು.
ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಕೆ.ಎಸ್.ಮಹೇಶ್ ಮಾತನಾಡಿ, ವ್ಯಾಪಾರಕ್ಕೆಂದು ಬಂದು 300 ವರ್ಷಗಳ ಕಾಲ ಆಡಳಿತ ನಡೆಸಿದ ಬ್ರಿಟಿಷರ ವಿರುದ್ಧ ಮನೆ ಮಕ್ಕಳು ಸಂಸಾರದ ಜವಾಬ್ದಾರಿಯನ್ನು ಹೊಂದಿದ್ದ ಮಹಿಳೆಯೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದು ಮಾತ್ರವಲ್ಲದೆ ದೇಶದ ನಿರ್ಮಾಣ ಹಾಗೂ ದೇಶದ ಅಭಿವೃದ್ಧಿಯಲ್ಲಿಯೂ ಅಮೋಘ ಕೊಡುಗೆ ನೀಡಿದ್ದಾರೆ ಎಂದರು.