ದೇವನಹಳ್ಳಿ : ಸಾವಕನಹಳ್ಳಿ ಬಳಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 648 (ಹಳೆಯ207ರ) ಹಾಗೂ ಸರ್ವೀಸ್ ರಸ್ತೆ ಅವೈಜ್ಞಾನಿಕವಾಗಿದೆ ಎಂಬ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್, ಎಸ್‌ಪಿ ಸಿ.ಕೆ.ಬಾಬಾ ಹಾಗೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಶನಿವಾರ ಪರಿಶೀಲಿಸಿದರು.
ಹೆದ್ದಾರಿಯಿಂದ ಸರ್ವೀಸ್ ರಸ್ತೆಗೆ ಸಂಪರ್ಕ ಕಲ್ಪಿಸಿ ಸುತ್ತಮುತ್ತಲ ಗ್ರಾಮಸ್ಥರ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಹಾಗೂ ಹೆದ್ದಾರಿ ಪಕ್ಕದಲ್ಲಿ ಮುಚ್ಚಿಹಾಕಿರುವ ರಾಜಕಾಲುವೆ ಅಭಿವೃದ್ಧಿಪಡಿಸಬೇಕು ಎಂದು ಸ್ಥಳೀಯರು ಜಿಲ್ಲಾಧಿಕಾರಿಗೆ ಮನವಿ ನೀಡಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಿಂದ ದೇವನಹಳ್ಳಿ ಮಾರ್ಗವಾಗಿ ನಿರ್ಮಿಸಲಾಗಿರುವ ರಾಷ್ಟ್ರೀಯ ಹೆದ್ದಾರಿ ದಾಬಸ್‌ಪೇಟೆತನಕ ಕಾಮಗಾರಿ ಮುಗಿದು ಲೋಕಾರ್ಪಣೆಗೊಂಡಿದೆ, ಕೆಲವು ಸ್ಥಳಗಳಲ್ಲಿ ಅಪಘಾತ ವಲಯಗಳಿದ್ದು, ಅಲ್ಲಿ ಸರಾಗವಾಗಿ ರಸ್ತೆ ದಾಟಲು ವ್ಯವಸ್ಥೆ, ವೇಗದ ಮಿತಿ ಕಡಿಮೆ ಮಾಡಬೇಕೆಂಬ ವಿಚಾರ, ಸ್ಪೀಡ್ ಕಂಟ್ರೋಲ್ ಕಂಡುಹಿಡಿಯಲು ಎ.ಎಂ.ಪಿ.ಆರ್ ಕ್ಯಾಮರಾ ಅಳವಡಿಕೆ, ಸಾರ್ವಜನಿಕರು ರಸ್ತೆ ದಾಟುವ ವೇಳೆ ಅಪಘಾತ ತಪ್ಪಿಸಲು ಅವಶ್ಯವಿರುವೆಡೆ ಪಾದಚಾರಿ ಮೇಲ್ಸೇತುವೆ ನಿರ್ಮಾಣ ಸೇರಿ ವಿವಿಧ ರೀತಿಯ ಸಂಚಾರ ನಿಯಮ ರೂಪಿಸುವ ಕುರಿತು ಚರ್ಚಿಸಲಾಗುವುದು, ಇದರಲ್ಲಿ ಹೆದ್ದಾರಿ ಅಧಿಕಾರಿಗಳು ಪೋಲಿಸ್, ಹಾಗೂ ಸಾರಿಗೆ ಅಧಿಕಾರಿಗಳು ಸೇರಿ ನಿಯಮ ಮಾಡಲಿದ್ದೇವೆ. ಜನವರಿ ವೇಳೆಗೆ ಉದ್ದೇಶಿತ ಕಾಮಗಾರಿಗಳು ನಡೆಯಲಿವೆ ಎಂದು ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ತಿಳಿಸಿದರು.
ಎನ್.ಎಚ್.ಎ ನ ಯೋಜನಾ ನಿದೇರ್ಶಕ ಜಯಕುಮಾರ್, ಡಿವೈಎಸ್ ಪಿ.ರವಿ, ಕಾರ್ಯಪಾಲಕ ಅಭಿಯಂತರ ಜಯಕುಮಾರ್, ಪೊಲೀಸ್ ಇನ್‌ಸ್ಪೆಕ್ಟರ್ ಕೆ.ಶ್ರೀನಿವಾಸ್, ಗ್ರಾಪಂ ಅಧ್ಯಕ್ಷ ನಾಗರಾಜು, ವಿಮಲ ಪಿಡಿಒ ಸಿದ್ದರಾಜು, ಬಾಬು, ಸುಧಾಕರ್, ಪುರಸಭಾ ಸದಸ್ಯ ಎಸ್.ನಾಗೇಶ್, ವೀರಶೈವ ಸಮಾಜದ ತಾಲುಕು ಅಧ್ಯಕ್ಷ ಎಂ.ಎಸ್ ರಮೇಶ್, ಉದ್ಯಮಿ ಎಂ.ಎಸ್.ಉಮೇಶ್, ಸಾವಕನಹಳ್ಳಿ ಮತ್ತು ಅಕ್ಕಪಕ್ಕದ ಗ್ರಾಮಸ್ಥರು ಇದ್ದರು.
ಕೂಡಲೇ ಸಮಸ್ಯೆ ಬಗೆಹರಿಸಿ
ಹೆದ್ದಾರಿ ಕಾಮಗಾರಿ ಅವೈಜ್ಞಾನಿಕವಾಗಿದೆ. ನಾಮಫಲಕದಲ್ಲಿ ಹಾಕಿರುವ ದಿಕ್ಸೂಚಿಯಂತೆ ಕಾಮಗಾರಿ ಸರಿಯಾಗಿ ಮಾಡಿಲ್ಲ. ಸ್ಥಳೀಯವಾಗಿ ಸುಮಾರು ರೈತರಿಗೆ ಮತ್ತು ಸಾರ್ವಜನಿಕರಿಗೆ ಸಾಕಷ್ಟು ಅನಾನುಕೂಲವಾಗುತ್ತಿದೆ, ಸುತ್ತಿ ಬಳಸಿ ಗ್ರಾಮಗಳಿಗೆ ತೆರಳುವಂತೆ ಆಗುತ್ತಿದೆ ಎಂದು ಸ್ಥಳೀಯ ಕಾಂಗ್ರೆಸ್ ಮುಖಂಡ, ಬಿದಲೂರು ಗ್ರಾ.ಪಂ ಮಾಜಿ ಅಧ್ಯಕ್ಷ ಎಸ್.ಪಿ.ಮುನಿರಾಜ್ ದೂರಿದರು.
ರಾಜಕಾಲುವೆ ಬಂದ್‌ಮಾಡಿ ಪ್ಲೈಓವರ್ ಮಾಡಿರುವುದರಿಂದ ರೈತರಿಗೆ ತೊಂದರೆ ಜತೆಗೆ ಅಪಘಾತಗಳಿಗೂ ಕಾರಣವಾಗುತ್ತಿದೆ, ಅದನ್ನು ಆದಷ್ಟು ಬೇಗ ಸರಿಪಡಿಸಿಕೊಡಬೇಕು, ಇಲ್ಲದಿದ್ದರೆ ಸುತ್ತಮುತ್ತಲ ಗ್ರಮಗಳ ರೈತರು ಉಗ್ರ ಹೋರಾಟ ಮಾಡಲಿದ್ದಾರೆ ಎಂದರು.
ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಹಾಕಲಾಗಿರುವ ಕನ್ನಡ ನಾಮಲಕಗಳಲ್ಲಿ ಕನ್ನಡಕ್ಕೆ ಅವಮಾನ ಮಾಡಲಾಗಿದ್ದು, ಕನ್ನಡ ಬಾರದವರು ಮಾಡಿರುವ ಅಚಾತುರ್ಯ, ಹೆದ್ದಾರಿ ಪ್ರಾಧಿಕಾರ ಆಯಾ ರಾಜ್ಯಗಳ ಸ್ಥಳೀಯ ಭಾಷೆ ನಾಮಲಕ ಅಳವಿಡಿಸುವಾಗ ಭಾಷೆ ತಿಳಿದವರಿಂದ ಫಲಕಗಳನ್ನು ಹಾಕಬೇಕಾಗಿದೆ. - ಎಸ್.ಪಿ.ಮುನಿರಾಜ್ ಬಿದಲೂರು ಗ್ರಾ.ಪಂ ಮಾಜಿ ಅಧ್ಯಕ್ಷ