ಜಿಲ್ಲೆ

ರಸ್ತೆಗೆ ಗಿಡ-ಗಂಟಿ ಮುತ್ತಿಗೆ!

ಗಂಗಾಧರ ಬಿ ವಿ

* ಮೈಮರೆತು ಸಂಚರಿಸಿದರೆ ಅಪಾಯ ಗ್ಯಾರಂಟಿ

* ತೆರವಿಗೆ ಇಲ್ಲ ಅಧಿಕಾರಿಗಳಲ್ಲಿ ಆಸಕ್ತಿ

ಗಂಗಾಧರ್ ಬೈರಾಪಟ್ಟಣ ರಾಮನಗರ

ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಿಗೆ ಸಂಪರ್ಕ ಕಲ್ಪಿಸುವ ಗ್ರಾಮೀಣ ಭಾಗದ ರಸ್ತೆಗಳು ವಾಹನ ಸವಾರರ ಪಾಲಿಗೆ ನರಕದ ದಾರಿಯಾಗಿವೆ. ರಸ್ತೆಯ ಇಕ್ಕೆಲಗಳಲ್ಲಿ ಬೆಳೆದು ನಿಂತಿರುವ ಗಿಡ-ಗಂಟಿಗಳು ಪೂರ್ತಿ ರಸ್ತೆಯನ್ನೇ ಆವರಿಸಿದ್ದು, ವಾಹನ ಸವಾರರು ಜೀವ ಕೈಯಲ್ಲಿಯೇ ಹಿಡಿದು ಪ್ರಯಾಣಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಬಹುತೇಕ ಮಾರ್ಗಗಳದ್ದು ಇದೇ ಕಥೆ

ಜಿಲ್ಲಾ ಕೇಂದ್ರ ರಾಮನಗರದಿಂದ ಕನಕಪುರ, ಮಾಗಡಿ ತಾಲೂಕು ಕೇಂದ್ರಗಳಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಗಳ ಇಕ್ಕೆಲಗಳಲ್ಲಿಯೂ ಗಿಡ ಗಂಟಿಗಳು ಬೆಳೆದು ನಿಂತಿವೆ. ಇಲ್ಲಿ ಪ್ರತಿ ದಿನ ಸಾವಿರಾರು ಮಂದಿ ಓಡಾಟ ನಡೆಸುತ್ತಾರೆ. ಇದಲ್ಲಿ ಬೈಕ್ ಸವಾರರೇ ಹೆಚ್ಚು. ಇದು ಕೇವಲ ತಾಲೂಕು ಕೇಂದ್ರಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ದುಸ್ಥಿತಿ ಮಾತ್ರವಲ್ಲ. ಬಹುತೇಕ ಗ್ರಾಮೀಣ ಭಾಗದ ಎಲ್ಲ ರಸ್ತೆಗಳ ಕಥೆಯೂ ಹೀಗೆಯೇ ಇದೆ. ಕೆಲ ಕಡೆಗಳಲ್ಲಂತೂ ರಸ್ತೆಯ ಅರ್ಧ ಭಾಗವನ್ನು ಗಿಡ ಗಂಟಿಗಳೇ ಆವರಿಸಿ, ವಾಹನ ಸವಾರರು ಓಡಾಡಲು ಕಷ್ಟಪಡುವಂತೆ ಆಗಿದೆ. ಇದರ ಜತೆಗೆ ಗ್ರಾಮೀಣ ಭಾಗದ ಕೆಲ ರಸ್ತೆಗಳಂತೂ ಗುಂಡಿಯಿಂದಲೇ ತುಂಬಿದ್ದು, ಇಲ್ಲಿ ಓಡಾಟ ನಡೆಸುವುದು ಸಾವಿನ ಮನೆಯ ಕದ ತಟ್ಟಿದಂತೆ.

ಪ್ರಾಣಿಗಳ ಕಾಟ

ಜಿಲ್ಲೆಯ ಚನ್ನಪಟ್ಟಣ, ರಾಮನಗರ ಭಾಗದಲ್ಲಿ ಆನೆಗಳು, ಚಿರತೆಗಳ ಕಾಟ ಹೆಚ್ಚಿದ್ದರೆ ಮಾಗಡಿ ಭಾಗದಲ್ಲಿ ಕರಡಿ, ಚಿರತೆಗಳು ಯಾವಾಗ ಮೈಮೇಲೆ ಎರಗುತ್ತವೆ ಎನ್ನುವುದೇ ತಿಳಿಯದು. ಸಾಮಾನ್ಯವಾಗಿ ಗ್ರಾಮೀಣ ಭಾಗದಲ್ಲಿ ರೈತರು ಜಾನುವಾರಗಳೊಂದಿಗೆ ಜಮೀನುಗಳಿಗೆ ಹೋಗುವ ವೇಳೆ ಕಾಡು ಪ್ರಾಣಿಗಳು ದಾಳಿ ನಡೆಸುವ ಆತಂಕದಲ್ಲಿಯೇ ಓಡಾಡುತ್ತಾರೆ. ಕೆಲ ಕಡೆಗಳಲ್ಲಿ ರಾತ್ರಿ ವೇಳೆಯಲ್ಲಿ ಈ ಜಂಗಲ್‌ನಿಂದಾಗಿ ಬೈಕ್ ಸವಾರರು ಬಿದ್ದು ಪೆಟ್ಟು ಮಾಡಿಕೊಂಡಿದ್ದೂ ಉಂಟು.

ಟೆಂಡರ್ ಪ್ರಕ್ರಿಯೆಗೆ ಚಾಲನೆ

ರಸ್ತೆಯ ಇಕ್ಕೆಲಗಳಲ್ಲಿ ಬೆಳೆದಿರುವ ಜಂಗಲ್ ತೆರವುಗೊಳಿಸಿಲ್ಲ ಎನ್ನುವುದನ್ನು ಒಪ್ಪಿಕೊಳ್ಳುವ ಲೊಕೋಪಯೋಗಿ ಇಲಾಖೆ, ‘ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಕೆಲ ಹೆದ್ದಾರಿಗಳಲ್ಲಿ ಬೆಳೆದಿರುವ ಗಿಡ ಗಂಟಿಗಳನ್ನು ತೆರವುಗೊಳಿಸಲಾಗುತ್ತಿದೆ’ ಎಂಬ ಮಾಹಿತಿ ನೀಡುತ್ತಾರೆ. ಈಗಾಗಲೇ ರಸ್ತೆ ಬದಿ ಬೆಳೆದಿರುವ ಗಿಡಗಂಟಿ ತೆರವು ಮಾಡಲು ಅನುದಾನವೂ ಬಿಡುಗಡೆ ಆಗಿದೆ. ಟೆಂಡರ್ ಪ್ರಕ್ರಿಯೆಯೂ ಚಾಲನೆಯಲ್ಲಿದೆ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.

ಕೆಲವರಿಂದ ಒತ್ತುವರಿ

ಇನ್ನು ಕೆಲ ಕಡೆಗಳಲ್ಲಿ ರಸ್ತೆಗಳೇ ಒತ್ತುವರಿಯಾಗಿವೆ. ರೈತರು ರಸ್ತೆ ಪಕ್ಕದವರೆಗೂ ಉಳುಮೆ ಮಾಡಿ ಬೆಳೆ ಹಾಕಿದ್ದಾರೆ. ಇನ್ನೂ ಕೆಲಮಂದಿ ರಸ್ತೆಗೆ ಹೊಂದಿಕೊಂಡಂತೆ ಕಾಂಪೌಂಡ್ ನಿರ್ಮಿಸಿಕೊಂಡಿದ್ದಾರೆ. ಇದರ ಬಗ್ಗೆ ಗಮನ ಹರಿಸಿ, ತೆರವುಗೊಳಿಸಬೇಕಾದ ಲೊಕೋಪಯೋಗಿ ಇಲಾಖೆ ಕೈಕಟ್ಟಿ ಕುಳಿತಿದೆ.

ಜಂಗಲ್ ತೆರವುಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ, ಟೆಂಡರ್ ಪ್ರಕ್ರಿಯೆ ನಡೆದಿದೆ. ಕೆಲವು ರಸ್ತೆಗಳಲ್ಲಿ ಈಗಾಗಲೇ ಕೆಲಸವೂ ಪ್ರಾರಂಭವಾಗಿದೆ.ಶಂಕರ್, ಎಇಇ, ಲೊಕೋಪಯೋಗಿ ಇಲಾಖೆ===

ಅಧ್ಯಕ್ಷ ಜಿಬಿಡಿಎ 

ಗಾಣಕಲ್ ನಟರಾಜ್,

ನಾವು ಅಧಿಕಾರಿಗಳಿಗೆ ಹೇಳಿಹೇಳಿ ಸಾಕಾಯ್ತು. ಅಂತಿಮವಾಗಿ ಸ್ವಂತ ದುಡ್ಡಿನಿಂದ ಜಂಗಲ್ ತೆರವು ಕಾರ್ಯಾಚರಣೆ ಆರಂಭಿಸಲಾಗಿದೆ. ಲೊಕೋಪಯೋಗಿ ಇಲಾಖೆ ಅಧಿಕಾರಿಗಳು ಈಗಲಾದರೂ ಎಚ್ಚೆತ್ತುಕೊಳ್ಳಲಿ.

---

ರಸ್ತೆಯಲ್ಲಿ ರಾತ್ರಿ ವೇಳೆ ಇರಲಿ ಬೆಳಗ್ಗಿನ ಹೊತ್ತಿನಲ್ಲೇ ಓಡಾಟ ನಡೆಸುವುದು ಕಷ್ಟವಾಗಿದೆ. ನಮ್ಮ ಭಾಗದಲ್ಲಿ ಚಿರತೆ ಮತ್ತು ಕರಡಿ ಹಾವಳಿ ಹೆಚ್ಚಿರುವ ಕಾರಣ, ದ್ವಿಚಕ್ರ ವಾಹನ ಸವಾರರ ಮೇಲೆ ಎರಗಿದರೆ ಅಪಾಯ ಖಚಿತ. ಸಂಬಂಧಪಟ್ಟವರು ಗಮನ ಹರಿಸಲಿ.

ಸ್ವಾಮಿ, ಲಕ್ಕೋಜನಹಳ್ಳಿ