ಜಿಲ್ಲೆ

ರಸ್ತೆ ಧೂಳುಮಯ.. ಅಯೋಮಯ..

ರೇಷ್ಮೆ ನಗರ ಡೆಸ್ಕ್

ಮಾಗಡಿ: ಇಲ್ಲಿನ ಕೆಂಪೇಗೌಡ ವೃತ್ತದಿಂದ ಗಾಂಧಿವೃತ್ತದವರೆಗಿನ ರಸ್ತೆಯ ಆಮೆಗತಿ ಕಾಮಗಾರಿಯು ಪಟ್ಟಣವಾಸಿಗಳು ಧೂಳಿನ ಗೋಳಿಗೆ ಸಿಲುಕಿಸಿದೆ.

ಹೌದು..! ಪಟ್ಟಣದ ಕೆಂಪೇಗೌಡ ವೃತ್ತದಿಂದ&ಗಾಂಧಿನಗರ ವೃತ್ತದವರೆಗಿನ 1 ಕಿಮೀ ರಸ್ತೆ ವಿಸ್ತರಣೆ ಹಾಗೂ ಚರಂಡಿ, ಸೇತುವೆ ನಿರ್ಮಾಣ ಕಾಮಗಾರಿ ವರ್ಷದ ಹಿಂದೆಯೇ ಆರಂಭವಾದರೂ ಅರ್ಧ ಕಾಮಗಾರಿಯೂ ಆಗಿಲ್ಲ. ಎಲ್ಲೆಂದರಲ್ಲಿ ಚರಂಡಿ, ಸೇತುವೆ ನಿರ್ಮಿಸಲು ಗುಂಡಿ ತೆಗೆದಿದ್ದು, ಗೌರಮ್ಮನ ಕೆರೆಯಿಂದ ಆಂಜನೇಯ ದೇವಾಲಯ ಮುಂಭಾಗದವರೆಗೆ ರಸ್ತೆಯನ್ನು ಸಂಪೂರ್ಣ ಕಿತ್ತು ಹಾಕಲಾಗಿದೆ. ಮತ್ತೊಂದೆಡೆ ಹಳೇ ರಸ್ತೆ ಬದಿಯಲ್ಲಿ ನಿರ್ಮಿಸಿರುವ ವಿದ್ಯುತ್​ ಕೇಬಲ್​ ತೆಗೆಯಲು ಅಗೆದ ಗುಂಡಿಗಳನ್ನು ಸಮರ್ಪಕವಾಗಿ ಮುಚ್ಚದಿರುವುದು ಧೂಳುಮಯವಾಗಿಸಿದೆ. ಪರಿಣಾಮ ಪಾದಚಾರಿಗಳು, ಬೈಕ್​ಸವಾರರು, ವಿದ್ಯಾರ್ಥಿಗಳು, ವಯೋವೃದ್ಧರು ಓಡಾಡಲು ತೊಂದರೆಯಾಗಿದ್ದು, ಒಂದು ವೇಳೆ ರಸ್ತೆಗಿಳಿದರೆ ಧೂಳು ಸೇವಿಸುವುದು ಅನಿವಾರ್ಯವಾಗಿದೆ.

ಧೂಳಿನ ಮಜ್ಜನ ರಸ್ತೆಯನ್ನು ಧೂಳು ಆವರಿಸಿಕೊಳ್ಳುವುದರಿಂದ ಎದುರಿಗೆ ಬರುವ ವಾಹನಗಳು ಕಾಣುವುದಿಲ್ಲ. ಇದರಿಂದ ಅಪಘಾತ ಸಂಭವವೂ ಹೆಚ್ಚಿದೆ. ಇನ್ನು ರಸ್ತೆ ಬದಿಯ ಮನೆ, ಆಂಗಡಿ, ಮುಗಟ್ಟುಗಳಿಗೆ ಧೂಳು ಮೆತ್ತಿಕೊಂಡಿದ್ದು, ನಿವಾಸಿಗಳು, ಅಂಗಡಿಕಾರರು ಕೆಮ್ಮು, ನೆಗಡಿ ಸೇರಿ ಅನೇಕ ಕಾಯಿಲೆಗಳಿಂದ ನರಳುತ್ತಿದ್ದಾರೆ. ತಪ್ಪದ ಕಿರಿಕಿರಿ ಕೆಂಪೇಗೌಡ ವೃತ್ತ&ಗಾಂಧಿನಗರ ವೃತ್ತದವರೆಗಿನ ರಸ್ತೆ ಪ್ರಮುಖವಾಗಿದ್ದು, ಈ ಮಾರ್ಗದ ಮೂಲಕವೇ ಶ್ರೀರಂಗನಾಥಸ್ವಾಮಿ ದೇವಾಲಯ, ರಾವೇಂದ್ರ ದೇವಾಲಯ, ಬಿಎಂಆರ್​ಡಿಎ, ಪ್ರಥಮ ದರ್ಜೆ ಕಾಲೇಜು, ಪದವಿ ಪೂರ್ವ ಕಾಲೇಜು, ತಾಲೂಕು ಪಂಚಾಯಿತಿ, ಅರಣ್ಯ ಇಲಾಖೆ, ತೋಟಗಾರಿಕೆ, ಸಿಡಿಪಿಒ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಪ್ರವಾಸಿ ಮಂದಿರ, ಎಸ್​ಬಿಎಸ್​ ಶಾಲೆ, ಕೆಂಪೇಗೌಡ ಶಾಲೆ, ಉಪನೋಂದಣಾಧಿಕಾರಿಗಳ ಕಚೇರಿಗಳಿಗೆ ಪ್ರತಿ ನಿತ್ಯ ಸಾವಿರಾರು ಮಂದಿ ಸಂಚರಿಸುತ್ತಾರೆ. ಆದರೆ ಆಮೆಗತಿ ಕಾಮಗಾರಿ ಎಲ್ಲರಿಗೂ ಕಿರಿಕಿರಿಯನ್ನುಂಟು ಮಾಡುತ್ತಿದೆ. ಅಧಿಕಾರಿಗಳ ರ್ನಿಲಕ್ಷ್ಯ   ಧೂಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿನಲ್ಲಿ ಕಾಮಗಾರಿ ವೇಳೆ ನೀರು ಸಿಂಪಡಿಸಲು ಅಧಿಕಾರಿಗಳು ಮುಂದಾಗುತ್ತಿಲ್ಲ. ಅಲ್ಲದೆ ರಸ್ತೆ, ಸೇತುವೆ, ಚರಂಡಿ ಕಾಮಗಾರಿ ನಿರ್ಮಾಣದ ಸ್ಥಳದಲ್ಲಿ ಮುನ್ನೆಚ್ಚರಿಕೆ ಅನುಸರಿಸುತ್ತಿಲ್ಲ. ಬೃಹತ್​ ಗಾತ್ರದ ಸೇತುವೆಯ ಕಾಮಗಾರಿಯನ್ನು ಅರ್ಧದಷ್ಟು ಮಾಡಿ, ತಡೆಗೋಡೆ ನಿರ್ಮಿಸದೆ ಹಾಗೇ ಬಿಡಲಾಗಿದೆ. ಸಮಸ್ಯೆಗಳ ಬಗ್ಗೆ ಲೋಕೋಪಯೋಗಿ ಇಲಾಖೆ ಗಮನಕ್ಕೆ ತಂದರೂ ಅಧಿಕಾರಿಗಳು ಕಾಟಾಚಾರಕ್ಕೆ ಸ್ಥಳಕ್ಕೆ ಭೇಟಿ ನೀಡಿ, ಹೋಗುತ್ತಾರೆ. ಆದರೆ ಸಮಸ್ಯೆ ಬಗೆಹರಿಸಲು ಮುಂದಾಗುತ್ತಿಲ್ಲ ಎಂದು ಪಟ್ಟಣವಾಸಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಾಮಗಾರಿಗೆ ವೇಗ ನೀಡಲಿ ರಸ್ತೆಯಲ್ಲಿ ಎಲ್ಲೆಂದರಲ್ಲಿ ಜೆಸಿಬಿ, ಹಿಟಾಚಿ ಸದ್ದು ಕೇಳುತ್ತದೆ. ಆದರೆ ಕಾಮಗಾರಿ ಮಾತ್ರ ಪೂರ್ಣಗೊಳ್ಳುತ್ತಿಲ್ಲ. ರಸ್ತೆಯ ಅರ್ಧ ಭಾಗ ಕಿತ್ತು, ಇನ್ನರ್ಧ ಭಾಗದಲ್ಲಿ ಸಂಚಾರಕ್ಕೆ ಅನುಕೂಲ ಕಲ್ಪಿಸದೆ ಸಂಪೂರ್ಣ ರಸ್ತೆ ಕಿತ್ತು ಹಾಕಿರುವುದು ಸಮಸ್ಯೆಗೆ ಮೂಲ ಕಾರಣ ಎನ್ನಲಾಗಿದೆ. ಕ್ಷೇತ್ರದ ಶಾಸಕ ಎಚ್​.ಸಿ.ಬಾಲಕೃಷ್ಣ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದು, ಅವರ  ಕ್ಷೇತ್ರದಲ್ಲೇ ಕಾಮಗಾರಿ ಆಮೆಗತಿಯಲ್ಲಿರುವುದು ನಾಗರಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಇನ್ನಾದರೂ ಕಾಮಗಾರಿಗೆ ವೇಗ ನೀಡಲು ಅಧಿಕಾರಿಗಳಿಗೆ ಶಾಸಕ ಬಾಲಕೃಷ್ಣ ಸೂಚಿಸಬೇಕಿದೆ.

ಕೆಂಪೇಗೌಡ ವೃತ್ತದಿಂದ ಗಾಂಧಿವೃತ್ತದವರೆಗಿನ ರಸ್ತೆ ಕಾಮಗಾರಿ ವರ್ಷಕಳೆದರೂ ಪೂರ್ಣಗೊಳ್ಳದಿರುವುದು ಮಾರ್ಗವನ್ನು ಧೂಳುಮಯವಾಗಿಸಿದೆ. ಎದುರಿಗೆ ಬರುವ ಯಾವುದೇ ವಾಹನ ಕಾಣಿಸುವುದಿಲ್ಲ. ಕೃಷಿ ಇಲಾಖೆ ಸೇರಿ ಪ್ರಮುಖ ಇಲಾಖೆಗಳು ಈ ಮಾರ್ಗದಲ್ಲೇ ಇದ್ದು, ಬಿತ್ತನೆ ಬೀಜ ಸೇರಿ ಸರ್ಕಾರಿ ಸೌಲಭ್ಯ ಪಡೆಯಲು ಕಚೇರಿಗಳಿಗೆ ತೆರಳಲು ಸಾಧ್ಯವಾಗದ ಪರಿಸ್ಥಿತಿ ಇದೆ. > ಲೋಕೇಶ್​ ತಾಲೂಕು ರೈತಸಂದ ಅಧ್ಯಕ್ಷ