ಶ್ರೀರಂಗಪಟ್ಟಣ: ಶಾಂತಿ, ಸೌಹಾರ್ದತೆ ಹಾಗೂ ಸಹಬಾಳ್ವೆ ಜತೆಗೆ ರೈತ ದನಿ ಮೊಳಗಿಸಿದ ಪುಣ್ಯಭೂಮಿ ಮಂಡ್ಯ ಜಿಲ್ಲೆಯಲ್ಲಿ ಧರ್ಮದ ಹೋರಾಟ ಮೇಲಾಗುತ್ತಿರುವುದು ಪ್ರಜಾತಂತ್ರ ವ್ಯವಸ್ಥೆಗೆ ಮಾರಕ ಎಂದು ಕೃಷಿ ಕೂಲಿಕಾರರ ಸಂಘದ ಆಧ್ಯಕ್ಷ ಜಿ.ಎ.ನಾಗರಾಜು ಆತಂಕ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಮಂಗಳವಾರ ಮಹಾತ್ಮ ಗಾಂಧೀಜಿ ಪುಣ್ಯತಿಥಿಯ ಹುತಾತ್ಮ ದಿನಾಚರಣೆ ಪ್ರಯುಕ್ತ ವಿವಿಧ ಪ್ರಗತಿಪರ ಸಂಘಟನೆಗಳು ಕರೆ ನೀಡಿದ್ದ ಸರ್ವಧರ್ಮದ ಸೌಹಾರ್ದತೆಗಾಗಿ ಮಾನವ ಸರಪಳಿ ನಿರ್ಮಾಣ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.
ಕೃಷಿ ಪ್ರಾತಿನಿಧ್ಯ ವಹಿಸಿರುವ ಶ್ರಮಿಕರ ನೆಲ ಮಂಡ್ಯ ಜಿಲ್ಲೆ. ಅಪ್ರತಿಮ ಹೋರಾಟಗಾರರು, ಮೇರು ನಾಯಕರು ಹಾಗೂ ರಾಜಕೀಯ ದಿಗ್ಗಜರನ್ನು ನಾಡಿಗೆ ಕೊಡುಗೆಯಾಗಿ ನೀಡಿರುವ ಈ ನಾಡಿನಲ್ಲಿ ಧರ್ಮದ ವಿಚಾರದಲ್ಲಿ ಸಮಾಜದ ಸ್ವಾಸ್ಥ್ಯ ಕದಡುತ್ತಿರುವುದು ಪ್ರಜಾತಂತ್ರ ವ್ಯವಸ್ಥೆಗೆ ಮಾರಕ. ಭಾರತದ ಸ್ವಾತಂತ್ರ್ಯಕ್ಕೆ ಹಿಂದು, ಮುಸ್ಲಿಂ, ಸಿಖ್, ಕ್ರಿಶ್ಚಿಯನ್ನರು, ಜೈನ, ಬೌದ್ಧ ಎಂಬ ಜಾತಿ ಧರ್ಮದ ತಾರತಮ್ಯವಿಲ್ಲದೆ ನಾವೆಲ್ಲರು ಭಾರತೀಯರು ಎಂಬ ಮನಸ್ಥಿತಿಯಿಂದಲೇ ಬ್ರಿಟಿಷರ ವಿರುದ್ಧ ಹೋರಾಡಿದ್ದು, ಪ್ರತಿಯೊಬ್ಬರು ಈ ದೇಶದಲ್ಲಿ ಹೆಮ್ಮೆಯ ಭಾರತೀಯನಾಗಿ ಬದುಕಲು ಹಕ್ಕು ಹೊಂದಿದ್ದಾರೆ. ಆದರೆ ರಾಜಕೀಯ ಲಾಭದ ಉದ್ದೇಶಕ್ಕೆ ಸಮಾಜದ ಜನರಲ್ಲಿ ಕೋಮುದ್ವೇಷ ಹರಡಿ ಶಾಂತಿ ಕದಡುತ್ತಿರುವುದು ಆತಂಕಕಾರಿ ಎಂದರು.
ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಭಾರತ ವೈವಿಧ್ಯಮಯ ಸಂಸ್ಕೃತಿ, ಧರ್ಮ, ನಡೆ-ನುಡಿ ಜನರಿಂದ ಕೂಡಿದ್ದು, ಧರ್ಮ ನಿರಪೇಕ್ಷತೆಯಿಂದ ಸಂವಿಧಾನದ ರಚಿಸಿಕೊಂಡು ಏಕತೆಯ ರಾಷ್ಟ್ರೀಯತೆಯಡಿ ಜೀವಿಸುತ್ತಿದ್ದೇವೆ. ಈ ದೇಶದಲ್ಲಿ ಎಲ್ಲ ಧರ್ಮಗಳಿಗೂ ಧಾರ್ಮಿಕ ಸ್ವಾತಂತ್ರ್ಯ ನೀಡಲಾಗಿದೆ. ಆದರೆ ಧರ್ಮ ರಾಜ್ಯದಲ್ಲಿ ಧರ್ಮವೇ ಬೀದಿಗೆ ಬಂದು ರಾಜ್ಯಭಾರ ಆಡಳಿತ ನಡೆಸಿದರೆ ಅದು ಅಪಾಯಕಾರಿ. ದೇಶದಲ್ಲಿ ಬಿಜೆಪಿ ಹಾಗೂ ಆರ್‌ಎಸ್‌ಎಸ್ ಆಡಳಿತ ವ್ಯವಸ್ಥೆಯಲ್ಲಿ ಒಂದೇ ರೀತಿಯ ಸಂಸ್ಕೃತಿ, ಉಡುಗೆ-ತೊಡುಗೆ, ಆಹಾರ ಸೇರಿದಂತೆ ಇನ್ನಿತರ ವಿಷಯಗಳಲ್ಲಿ ಬಲವಂತದ ಹೇರಿಕೆ ಜನಗಳ ಮೂಲ ಸಂಸ್ಕೃತಿ ಮೇಲೆ ಬಲತ್ಕಾರ, ಸಾಧು, ಸಂತರು, ಸೂಫಿಗಳು ತತ್ವಪದ ದಾರ್ಶನಿಕರು ಓಡಾಡಿದ ಹಾಗೂ ಸಾಂಸ್ಕೃತಿಕ ನಾಯಕ ಕುವೆಂಪು ಉಸಿರಾಡಿದ ಮಂಡ್ಯ ನೆಲದ ಹೃದಯವಂತರಲ್ಲಿ ಕೋಮುವಾದ ಸೃಷ್ಟಿಸುತ್ತಿರುವುದು ಮಾರಕ. ಇಲ್ಲಿನ ಯುವಜನರಲ್ಲಿ ಧಾರ್ಮಿಕ ಸೂಕ್ಷ್ಮತೆ ವಿಚಾರ ಮುಂದಿಟ್ಟು ರಾಜಕೀಯ ನಡೆಸಲು ಹೊರಟಿರುವುದು ದೇಶದ ಆತ್ಮವನ್ನು ಛಿದ್ರ ಮಾಡಿದಂತೆ ಎಂದರು.
ಇದಕ್ಕೂ ಮೊದಲು ಶ್ರೀರಂಗನಾಥಸ್ವಾಮಿ ದೇವಾಲಯದ ಮುಂದೆ ಜಮಾಯಿಸಿದ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ಪಟ್ಟಣದ ಮುಖ್ಯರಸ್ತೆ ಮಾರ್ಗವಾಗಿ ಬಂಡಿಸಿದ್ದೇಗೌಡ ವೃತ್ತದವರೆಗೂ ಕೈ ಕೈ ಹಿಡಿದು ಘೋಷಣೆ ಕೂಗಿ ಬೃಹತ್ ಮೆರವಣಿಗೆ ನಡೆಸಿದರು.
ಹಿರಿಯ ನಾಟಕಕಾರ ಹಾಗೂ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ, ಸಾಹಿತಿಗಳಾದ ಹುಲ್ಕೆರೆ ಮಹದೇವು, ಸಾವೇರ ಸ್ವಾಮಿ, ಸಿಪಿಎಂ ಪಕ್ಷದ ಕಾರ್ಯದರ್ಶಿ ಕೃಷ್ಣೇಗೌಡ, ಸಿಐಟಿಯು ಸಂಘಟನೆ ಮುಖ್ಯಸ್ಥೆ ಕುಮಾರಿ, ಜನವಾದಿ ಮಹಿಳಾ ಸಂಘಟನೆ ರಾಜ್ಯಾಧ್ಯಕ್ಷೆ ದೇವಿ, ದಸಂಸ ಮುಖಂಡ ವೆಂಕಟಗಿರಿಯಯ್ಯ, ಸಮಾನ ಮನಸ್ಕರ ವೇದಿಕೆ ಮುಖ್ಯಸ್ಥ ಚೀರನಹಳ್ಳಿ ಲಕ್ಷ್ಮಣ್, ರೈತ ಸಂಘದ ಜಿಲ್ಲಾಧ್ಯಕ್ಷ ಕೆಂಪೂಗೌಡ, ಅಂಬೇಡ್ಕರ್ ಒಕ್ಕೂಟಗಳ ಅಧ್ಯಕ್ಷ ಗಂಜಾಂ ರವಿಚಂದ್ರು, ಪಾಂಡು, ಪ್ರಜ್ಞಾವಂತವರ ವೇದಿಕೆ ಮುಖ್ಯಸ್ಥ ವೆಂಕಟೇಶ್,ಮುಸ್ಲಿಂ ಸೌಹಾರ್ದ ವೇದಿಕೆ ಮುಖ್ಯಸ್ಥೆ ಅಮ್ರಿನ್‌ತಾಜ್, ವಿಶ್ವದಲಿತ ಮಹಾಸಭಾದ ಪೂರ್ಣಚಂದ್ರ, ಚಲವಾದಿ ಮಹಾಸಭಾ ಮುಖ್ಯಸ್ಥ ಹರೀಶ್ ಕುಮಾರ್, ಮುಖಂಡರಾದ ಮರಳಗಾಲ ಕೃಷ್ಣೇಗೌಡ, ಚಿಕ್ಕತಮ್ಮೇಗೌಡ, ಕೆ.ಶೆಟ್ಟಹಳ್ಳಿ, ಅಪ್ಪಾಜಿ, ಅಫ್ಸರ್ ಪಾಷ, ಸುಕೂರ್, ಜೈಶಂಕರ್ ಇತರರು ಇದ್ದರು.