ದೇವದುರ್ಗ: ಪಟ್ಟಣ ಸೇರಿ ತಾಲೂಕಿನ ವಿವಿಧ ಭಾಗದಲ್ಲಿ ಎರಡ್ಮೂರು ದಿನಗಳಿಂದ ಸುರಿಯುತ್ತಿರುವ ಚಿತ್ತಿ ಮಳೆ ಹಲವು ಅವಾಂತರ ಸೃಷ್ಟಿಸಿದೆ. ಜಾಲಹಳ್ಳಿ ಹೋಬಳಿ ಸೇರಿ ವಿವಿಧೆಡೆ ಭತ್ತದ ಬೆಳೆ ಧರೆಗುರುಳಿವೆ.
ಜಾಲಹಳ್ಳಿ, ಹೊಸೂರು ಸಿದ್ದಾಪುರ, ಕಮಲದಿನ್ನಿ, ಕಕ್ಕಲದೊಡ್ಡಿ, ಚಿಂಚೋಡಿ, ಲಿಂಗದಹಳ್ಳಿ, ಗಾಣಧಾಳ, ಸೋಮನಮರಡಿ, ಭೂಮನಗುಂಡ, ಕರಡಿಗುಡ್ಡ ಸೇರಿ ವಿವಿಧೆಡೆ ಬುಧವಾರ ತಡರಾತ್ರಿ, ಗುರುವಾರ ಸಂಜೆ ಮಳೆಯಾಗಿದೆ. ಬಿರುಗಾಳಿಗೆ ಹೊಸೂರು ಸಿದ್ದಾಪುರ, ಗಲಗ, ಮುಂಡರಗಿ, ಗಾಣಧಾಳ, ಪಲಕನಮರಡಿ, ಊಟಿ, ಸೋಮನಮರಡಿ, ಹೊರಟ್ಟಿ ಸೇರಿ ವಿವಿಧಡೆ ರಾಶಿಗೆ ಬಂದಿದ್ದ ಭತ್ತ ನೆಲಕ್ಕುರುಳಿದೆ. ಅಲ್ಲದೆ ಜಾಲಹಳ್ಳಿ, ಕರಡಿಗುಡ್ಡ ಸೇರಿ ವಿವಿಧಡೆ ಹತ್ತಿ ಬಿಡಿಸಿ ಹೊಲದಲ್ಲಿ ರಾಶಿ ಹಾಕಿದ್ದು ಮಳೆಗೆ ತೋಯ್ದು ಸಮಸ್ಯೆಯಾಗಿದೆ.
ಕಳೆದ ಎರಡ್ಮೂರು ದಿನಗಳಿಂದ ರಾತ್ರಿ ವೇಳೆ ಮಳೆ ಬರುತ್ತಿದ್ದು, ರೈತರಲ್ಲಿ ಆತಂಕ ಮನೆಮಾಡಿದೆ. ಒಂದೆಡೆ ಚಿತ್ತಿ ಮಳೆ ಹಾಗೂ ಗಾಳಿಯಿಂದ ಭತ್ತ ಧರೆಗುಳಿದ್ದರೆ, ಇನ್ನೊಂದೆಡೆ ತೇವಾಂಶ ಹೆಚ್ಚಾಗಿ ಹತ್ತಿ, ತೊಗರಿ, ಮೆಣಸಿನಕಾಯಿ ಬೆಳೆಗೆ ರೋಗ ಕಾಟ ಹೆಚ್ಚಾಗಿದೆ.