ಜಿಲ್ಲೆ

ದೇಶದಲ್ಲಿ ಹೆದ್ದಾರಿ ಅಭಿವೃದ್ಧಿಯ ಕ್ರಾಂತಿ

ಹುಬ್ಬಳ್ಳಿ: ದೇಶದಾದ್ಯಂತ ಕಳೆದ 60 ವರ್ಷಗಳಲ್ಲಿ ಆಗದಷ್ಟು ಹೆದ್ದಾರಿ ಅಭಿವೃದ್ಧಿ ಕೇವಲ 6 ವರ್ಷಗಳಲ್ಲಿ ಆಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ನಗರದ ಚನ್ನಮ್ಮ ವೃತ್ತದ ಫ್ಲೈ ಓವರ್ ನಿರ್ವಣಕ್ಕೆ ವಿಡಿಯೋ ಕಾನ್ಪರೆನ್ಸ್ ಮೂಲಕ ಶಿಲಾನ್ಯಾಸ ನೆರವೇರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 6 ವರ್ಷದಲ್ಲಿ ರಾಜ್ಯದ 7,650 ಕಿ.ಮೀ.ಗೂ ಹೆಚ್ಚು ಹೆದ್ದಾರಿ ಅಭಿವೃದ್ಧಿಯಾಗಿದೆ. ಇಡೀ ದೇಶದಲ್ಲಿ ರಸ್ತೆ ಹಾಗೂ ಹೆದ್ದಾರಿ ನಿರ್ವಣದ ಕ್ರಾಂತಿ ಉಂಟಾಗಿದೆ ಎಂದರು.

ಕೆಲವೆಡೆ ಹೆದ್ದಾರಿ ಅಭಿವೃದ್ಧಿಗೆ ಬೇಕಾಗುವ ಭೂಮಿ ವಶಪಡಿಸಿಕೊಳ್ಳಲು ಉಂಟಾಗಿರುವ ಅಡಚಣೆಯನ್ನು ರಾಜ್ಯ ಸರ್ಕಾರ ನಿವಾರಿಸಬೇಕು ಎಂದು ಮನವಿ ಮಾಡಿದರು.

ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಮಾತನಾಡಿ, ರಾಜ್ಯದಲ್ಲಿ ದ್ವಿತೀಯ ಸ್ತರದ ನಗರಗಳು ವೇಗವಾಗಿ ಬೆಳೆಯುತ್ತಿವೆ. ಈ ನಗರಗಳಲ್ಲಿ ಅಗತ್ಯ ಸೌಲಭ್ಯ ಒದಗಿಸಲು ರಾಜ್ಯ ಸರ್ಕಾರ ಮುಂದಾಗಬೇಕು ಎಂದರು.

ಹೆದ್ದಾರಿ ಅಭಿವೃದ್ಧಿ ವಿಷಯದಲ್ಲಿ ಯುಪಿಎ ಹಾಗೂ ಎನ್​ಡಿಎ ಸರ್ಕಾರಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಎನ್​ಡಿಎ ಸರ್ಕಾರದಲ್ಲಿ ಎರಡು ಪಟ್ಟು ವೇಗದಲ್ಲಿ ಹೆದ್ದಾರಿ ಅಭಿವೃದ್ಧಿಯಾಗುತ್ತಿವೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಇತರ ಜನಪ್ರತಿನಿಧಿಗಳಿಗೆ ಮಾದರಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಮಾತನಾಡಿ, ರಾಜ್ಯದ ಹೆದ್ದಾರಿಗಳ ಅಭಿವೃದ್ಧಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ವಿಶೇಷ ಆಸಕ್ತಿ ವಹಿಸಿದ್ದಾರೆ, ಇದೇ ರೀತಿ ಚನ್ನಮ್ಮ ವೃತ್ತದ ಫ್ಲೈಓವರ್​ನ ಉಳಿದ ಕಾಮಗಾರಿಗೂ ಅಗತ್ಯ ಅನುದಾನ ಮಂಜೂರು ಮಾಡಬೇಕೆಂದು ಮನವಿ ಮಾಡಿದರು.

ಕೇಂದ್ರ ಭೂ ಸಾರಿಗೆ ರಾಜ್ಯ ಸಚಿವ ಜನರಲ್ ವಿ.ಕೆ. ಸಿಂಗ್ ಮಾತನಾಡಿ, ಕೇಂದ್ರದ ಅನುದಾನದಲ್ಲಿ ಬಹಳಷ್ಟು ರಸ್ತೆಗಳು ಅಭಿವೃದ್ಧಿಯಾಗುತ್ತಿದ್ದು, ಉತ್ತಮ ಸಂಪರ್ಕದಿಂದಾಗಿ ಸಂಚಾರ ನಿರ್ವಹಣೆ ಸುಲಭವಾಗುತ್ತಿದೆ. ಕರ್ನಾಟಕದಲ್ಲೂ ಹಲವು ಯೋಜನೆಗಳು ಜಾರಿಯಾಗುತ್ತಿವೆ ಎಂದರು.

ಹು-ಧಾ ಬೈಪಾಸ್ ಷಟ್ಪಥವಾಗಲಿ

ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಮಾತನಾಡಿ, ಬಹಳ ವರ್ಷಗಳಿಂದ ಬಾಕಿ ಉಳಿದಿರುವ ಹುಬ್ಬಳ್ಳಿ-ಧಾರವಾಡ ಬೈಪಾಸ್ ಅನ್ನು ಷಟ್​ಪಥವನ್ನಾಗಿಸುವ ಕಾಮಗಾರಿಗೆ ಶೀಘ್ರ ಚಾಲನೆ ನೀಡಬೇಕು. ಈ ಬೈಪಾಸ್ ಇಕ್ಕಟ್ಟಾಗಿರುವುದರಿಂದ ಅಪಘಾತಗಳು ಹೆಚ್ಚಾಗಿವೆ ಎಂದರು. ಫ್ಲೈಓವರ್ ನಿರ್ಮಾಣ ಕುರಿತು 20 ವರ್ಷದಿಂದ ಚರ್ಚೆ ನಡೆಯುತ್ತಿತ್ತು. ಅದಕ್ಕೆ ನಿತಿನ್ ಗಡ್ಕರಿ ಅವರೇ ಮುಕ್ತಿ ನೀಡಿದ್ದಾರೆ. ಇದೇ ರೀತಿ ಕರೊನಾ ಸಂದರ್ಭದಲ್ಲಿ ಸ್ಥಗಿತಗೊಂಡಿರುವ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ನೀಡಬೇಕು. ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಗಡ್ಕರಿ ಅವರಿಗೆ ಕೋರಿದರು.

ಸಾಲಪಡೆದು ಗುತ್ತಿಗೆದಾರರಿಗೆ ನೀಡಿ

ಬ್ಯಾಂಕ್​ಗಳಿಂದ ಸಾಲ ಪಡೆದಾದರೂ ಸಿಆರ್​ಎಫ್ ಅಡಿ ರಸ್ತೆ ನಿರ್ವಿುಸುತ್ತಿರುವ ಗುತ್ತಿಗೆದಾರರಿಗೆ ಹಣ ಪಾವತಿಸುವಂತೆ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಮಾಡಿದರು.

ಸಿಆರ್​ಎಫ್ ನಿಧಿ ಬಳಕೆ ಕುರಿತು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ಗಡ್ಕರಿ, ಸದ್ಯಕ್ಕೆ ರಾಜ್ಯ ಸರ್ಕಾರ ಸಾಲ ಪಡೆದು ಗುತ್ತಿಗೆದಾರರಿಗೆ ಪಾವತಿಸಲಿ, ಅನುದಾನ ನೀಡಿದ ನಂತರ ಬ್ಯಾಂಕ್​ಗಳಿಗೆ ಮರುಪಾವತಿಸಬಹುದು ಎಂದು ಹೇಳಿದರು.