ಮೈಸೂರು: ನಗರ ಹೊರವಲಯದ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿರುವ ಸಿದ್ದಲಿಂಗಪುರದ ಪುರಾತನ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯದ ಕಲ್ಯಾಣಿಯನ್ನು ಪುನರುಜ್ಜೀವನಗೊಳಿಸಲಾಗುತ್ತಿದೆ.
ಅನೇಕ ವರ್ಷಗಳಿಂದ ನಿರ್ವಹಣೆ ಮಾಡದ ಕಾರಣ ದೇವಸ್ಥಾನಕ್ಕೆ ಹೊಂದಿಕೊಂಡಂತಿರುವ ಕಲ್ಯಾಣಿಯಲ್ಲಿ ಹೂಳು ತುಂಬಿಕೊಂಡು ಗಿಡಗಂಟಿ ಬೆಳೆದು ಸಂಪೂರ್ಣವಾಗಿ ಮುಚ್ಚಿ ಹೋಗಿತ್ತು. ಅದನ್ನು ಸ್ವಚ್ಛಗೊಳಿಸಲು ಮುಂದಾಗಿದ್ದ ದೇವಸ್ಥಾನದ ಪ್ರಧಾನ ಅರ್ಚಕರು ಸಹಾಯಕ್ಕಾಗಿ ಪಕ್ಕದ ಜಾಗದಲ್ಲಿ ಕಾಮಗಾರಿ ನಡೆಸುತ್ತಿದ್ದ ಹಿಟಾಚಿ ಚಾಲಕನನ್ನು ಕೇಳಿಕೊಂಡಿದ್ದಾರೆ. ವಿಷಯ ತಿಳಿದ ಡಿಕೆ ಕನ್‌ಸ್ಟ್ರಕ್ಷನ್ಸ್ ಮಾಲೀಕ ಹಾಗೂ ನಮ್ಮ ಮೈಸೂರು ಫೌಂಡೇಷನ್ ವ್ಯವಸ್ಥಾಪಕ ಟ್ರಸ್ಟಿ ದಶರಥ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಕಲ್ಯಾಣಿಯನ್ನು ಎನ್‌ಎಫ್ ವತಿಯಿಂದ ಸಂಪೂರ್ಣವಾಗಿ ಪುನರುಜ್ಜೀವನಗೊಳಿಸಲು ಮುಂದಾಗಿದ್ದಾರೆ.
12 ಮೆಟ್ಟಿಲುಗಳನ್ನು ಹೊಂದಿರುವ ಕಲ್ಯಾಣಿಯಲ್ಲಿ ಮಣ್ಣು ತುಂಬಿ, ಗಿಡಗಂಟಿಗಳು ಬೆಳೆದಿದ್ದರಿಂದ ಅವುಗಳನ್ನು ತೆರವುಗೊಳಿಸಿ ಹೂಳು ತೆಗೆಯುವ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ. ಎರಡು ಹಿಟಾಚಿ ಮೂಲಕ ಮಣ್ಣು ತೆಗೆಯಲಾಗಿದ್ದು, ಸ್ವಚ್ಛತೆ ಮಾಡಬೇಕಿದೆ. ಕಲ್ಯಾಣಿಯನ್ನು ಪುನರುಜ್ಜೀವನಗೊಳಿಸುವುದಾಗಿ ಎನ್‌ಎಂಎಫ್ ವ್ಯವಸ್ಥಾಪಕ ಟ್ರಸ್ಟಿ ದಶರಥ ತಿಳಿಸಿದ್ದಾರೆ.
ಅದೇ ರೀತಿ ಸುತ್ತ ಕಾಂಪೌಂಡ್ ನಿರ್ಮಿಸಿ ಗೇಟ್ ಅಳವಡಿಸುವ ಜತೆಗೆ ಕಲ್ಯಾಣಿಗೆ ಹೊಂದಿಕೊಂಡಂತಿರುವ ದೇವಸ್ಥಾನವನ್ನು ಅಭಿವೃದ್ಧಿಪಡಿಸುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡುವುದಾಗಿ ತಿಳಿಸಿದ್ದಾರೆ.
ಕಲ್ಯಾಣಿ ಸಂಪೂರ್ಣವಾಗಿ ಮುಚ್ಚಿ ಹೋಗಿದ್ದರಿಂದ ಅಲ್ಲಿ ಕೆಲವರು ಅಕ್ರಮ ಚಟುವಟಿಕೆ ನಡೆಸುತ್ತಿದ್ದರು. ದೇವರ ಸನ್ನಿಧಿಯನ್ನು ಸ್ವಚ್ಛವಾಗಿರಿಸಲು ನಾನು ಮುಂದಾದಾಗ ನಮ್ಮ ಮೈಸೂರು ಫೌಂಡೇಷನ್‌ನವರು ತಾವೇ ಸಂಪೂರ್ಣ ಪುನರುಜ್ಜೀವನಗೊಳಿಸುವ ಕಾರ್ಯ ಕೈಗೊಂಡಿರುವುದರಿಂದ ದೇವಸ್ಥಾನ ಅಭಿವೃದ್ಧಿಗೊಳ್ಳಲಿದೆ ಎಂದು ಪ್ರಧಾನ ಅರ್ಚಕ ಸುಬ್ರಹ್ಮಣ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿಜೃಂಭಣೆಯಿಂದ ನಡೆಯುವ ಷಷ್ಠಿ ಜಾತ್ರೆ: ಇಲ್ಲಿ ಪ್ರತಿವರ್ಷ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾ ಭಕ್ತಿಯೊಂದಿಗೆ ವಿಜೃಂಭಣೆಯಿಂದ ಷಷ್ಠಿ ಜಾತ್ರೆ ಜರುಗುತ್ತದೆ.
ಆ ವೇಳೆ ಮಧ್ಯರಾತ್ರಿಯಿಂದಲೇ ಭಕ್ತರ ದಂಡು ದೇವಸ್ಥಾನದ ಕಡೆಗೆ ಹರಿದು ಬಂರುತ್ತದೆ. ನಾಡಿನ ಮೂಲೆ ಮೂಲೆಗಳಿಂದ ಭಕ್ತರು ತಂಡೋಪತಂಡವಾಗಿ ಆಗಮಿಸಿ ದೇವರ ದರ್ಶನ ಪಡೆಯುತ್ತಾರೆ. ಸರ್ಪದೋಷ ಹೊಂದಿರುವವರು ಹುತ್ತಕ್ಕೆ ಹಾಲೆರೆದು ಬೆಳ್ಳಿ ನಾಗರವನ್ನು ಅರ್ಪಿಸಿ ಹರಕೆ ತೀರಿಸುವುದು ಹಾಗೂ ಸಂತಾನ ಭಾಗ್ಯಕ್ಕಾಗಿ ದಂಪತಿ, ವಿವಾಹ ಮಹೋತ್ಸವ ನೆರವೇರಲು ಹರಕೆ ಹೊತ್ತ ಯುವಕ-ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಬಂದು ದೇವಸ್ಥಾನದ ಸುತ್ತಮುತ್ತಲ ಹುತ್ತಕ್ಕೆ ಹಾಲನ್ನು ಎರೆದು, ಬೆಳ್ಳಿ ನಾಗರವನ್ನು ಹಾಕುವುದು ಇಲ್ಲಿನ ವಿಶೇಷವಾಗಿದೆ.
ದೇವಸ್ಥಾನದೊಂದಿಗೆ ಮೈಸೂರು ರಾಜ ಮನೆತನದವರು ಅವಿನಾಭಾವ ಸಂಬಂಧ ಹೊಂದಿದ್ದಾರೆ. ಮೂರು ಶತಮಾನಗಳ ಹಿಂದೆ ಮುಮ್ಮಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ದೇವಸ್ಥಾನಕ್ಕೆ ಬೆಳ್ಳಿಯ ನಾಗಾಭರಣಗಳನ್ನು ಕೊಡುಗೆಯಾಗಿ ನೀಡಿದ್ದರು. ಈಗಲೂ ಅದೇ ನಾಗಾಭರಣಗಳಿಂದ ಅಲಂಕಾರ ಮಾಡಿ ಪೂಜೆ ಮಾಡಲಾಗುತ್ತದೆ.