ಜಿಲ್ಲೆ

ನವಲಗುಂದ ಕ್ಷೇತ್ರದಲ್ಲಿ ಜೋಡೆತ್ತಿನ ದುಡಿಮೆ ತಂದ ಫಲ

ನವಲಗುಂದ: ನವಲಗುಂದದಲ್ಲಿ ಜೋಡೆತ್ತಿನ ದುಡಿಮೆಗೆ ಫಲ ದೊರಕಿದೆ.

ವಿಧಾನಸಭಾ ಚುನವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದ ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ ಹಾಗೂ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿನೋದ ಅಸೂಟಿ ಅವರು ಜೋಡೆತ್ತುಗಳಂತೆ ಪರಸ್ಪರ ಸಮನ್ವಯದಿಂದ ನಡೆಸಿದ ಪ್ರಚಾರಕ್ಕೆ ಮನ ಸೋತ ಮತದಾರರು, ಕೈ ಪಕ್ಷವನ್ನು ಗೆಲ್ಲಿಸುವ ಮೂಲಕ ಬದಲಾವಣೆ ಬಯಸಿರುವುದನ್ನು ಸಾಬೀತುಪಡಿಸಿದ್ದಾರೆ.


2018ರಲ್ಲಿ ವಿಜಯಶಾಲಿಯಾಗಿದ್ದ ಶಂಕರ ಪಾಟೀಲ ಮುನೇನಕೊಪ್ಪ ಮಂತ್ರಿಯಾಗಿದ್ದರು. ಬಿಜೆಪಿ ಸರ್ಕಾರ ಗುಜರಾತ ಮಾದರಿ ಅನುಸರಿಸುವ ಉದ್ದೇಶದಿಂದ ಮುನೇನಕೊಪ್ಪ ಅವರಿಗೆ ಸ್ವಂತ ಜಿಲ್ಲೆಯ ಉಸ್ತುವಾರಿಯನ್ನು ತಪ್ಪಿಸಲಾಗಿತ್ತು. ಬೀದರ್ ಹಾಗೂ ರಾಯಚೂರು ಜಿಲ್ಲೆ ಉಸ್ತುವಾರಿ ನೀಡಲಾಗಿತ್ತು. ಮಂತ್ರಿಯಾಗಿದ್ದರಿಂದ ಅವರು ರಾಜಧಾನಿ ಹಾಗೂ ಬೇರೆ ಬೇರೆ ಜಿಲ್ಲೆಗಳ ಪ್ರವಾಸ ಹಮ್ಮಿಕೊಳ್ಳುವುದು ಅನಿವಾರ್ಯವಾಗಿತ್ತು. ಹೀಗಾಗಿ, ಕ್ಷೇತ್ರದ ಕಡೆಗೆ ಮೊದಲಿನಷ್ಟು ಗಮನ ಹರಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ ಎಂಬ ಅಭಿಪ್ರಾಯ ಕೇಳಿಬರತೊಡಗಿತ್ತು.


ಒಂದೂವರೆ ವರ್ಷದ ಹಿಂದಷ್ಟೇ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದ ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ, 2018ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ವಿನೋದ ಅಸೂಟಿ ಅವರೊಂದಿಗೆ ಇದ್ದ ಭಿನ್ನಮತ ಹೋಗಲಾಡಿಸಿಕೊಂಡರು. ಪಕ್ಷ ಮೊದಲು ಎಂಬ ಉದ್ದೇಶದಿಂದ ಇಬ್ಬರೂ ಒಟ್ಟಾಗಿ ಕೆಲಸ ಮಾಡಲು ನಿರ್ಧರಿಸಿದರು. ಅಸೂಟಿ ಕಳೆದ ಸಲ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಜಿತರಾಗಿದ್ದರೂ ಕ್ಷೇತ್ರದ ಎಲ್ಲ ಭಾಗದ ಜನರೊಂದಿಗೆ ಉತ್ತಮ ಬಾಂಧವ್ಯವನ್ನು ಕಾಪಾಡಿಕೊಂಡಿದ್ದಾರೆ. ಪ್ರಚಾರದ ವೇಳೆ ಅದು ಬಹಳ ಪ್ರಯೋಜನವಾಯಿತು.


ತಮ್ಮ ಪಾಳಯದಲ್ಲಿ ಒಗ್ಗಟ್ಟು ಕಾಪಾಡಿಕೊಳ್ಳುವುದು, ಎದುರಾಳಿಯನ್ನು ಹಗುರವಾಗಿ ಪರಿಗಣಿಸದಿರುವುದು, ಯೋಜನಾಬದ್ಧವಾಗಿ ಕೆಲಸ ಮಾಡುವುದು, ನಿಗದಿತ ಸಮಯ ಸಮೀಪಿಸಿದಾಗ ಹೆಚ್ಚು ಉತ್ಸಾಹದಿಂದ ದುಡಿಯುವುದು, ಪರಿಸ್ಥಿತಿಯನ್ನು ಬಳಸಿಕೊಳ್ಳುವುದು ಮತ್ತು ತಮ್ಮ ಪರವಾಗಿ ಪರಿವರ್ತಿಸಿಕೊಳ್ಳುವುದು… ಇವೆಲ್ಲ ಯುದ್ಧದ ಸಿದ್ಧ ಸೂತ್ರಗಳು.
ಕೋನರಡ್ಡಿಯವರಿಗೆ ಗೆಲ್ಲಲೇಬೇಕಿತ್ತು. ಅವರನ್ನು ಗೆಲ್ಲಿಸಲು ತನ್ನಿಂದ ಏನು ಸಾಧ್ಯವೋ ಅದನ್ನು ಮಾಡಲೇಬೇಕು ಎಂದು ವಿನೋದ ಅಸೂಟಿ ನಿರ್ಧರಿಸಿದ್ದರು. ಅದರಂತೆಯೇ ನಡೆದುಕೊಂಡರು. ಹೀಗಾಗಿ ಕ್ಷೇತ್ರದ ಜನ ಇವರಿಬ್ಬರನ್ನು ಜೋಡೆತ್ತುಗಳು ಎಂದೇ ಕರೆದರು. ಅಂತಿಮ ಹಣಾಹಣಿಯಲ್ಲಿ ಈ ಜೋಡೆತ್ತುಗಳ ಪರಿಶ್ರಮ ಫಲ ನೀಡಿದೆ.


ಕೋನರಡ್ಡಿ ಮತ್ತೆ ಶಾಸಕರಾಗಿದ್ದಾರೆ. ಸರ್ಕಾರವು ನಿಗಮ ಮಂಡಳಿಗಳಿಗೆ ನೇಮಕ ಮಾಡುವ ಸಂದರ್ಭದಲ್ಲಿ ಯುವ ಜನರು, ಹೊಸ ಮುಖಗಳಿಗೆ ಅವಕಾಶ ನೀಡಲು ನಿರ್ಧರಿಸಿದರೆ, ವಿನೋದ ಅಸೂಟಿಗೆ ಅವಕಾಶ ಸಿಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.