ಜಿಲ್ಲೆ

ಪರ ಊರಿನವರಿಗೂ ಕಾಡಿದೆ ರಿಸಲ್ಟ್​

* ಎಲ್ಲೆಡೆ ಚನ್ನಪಟ್ಟಣದ್ದೇ ಚರ್ಚೆ

* ತಾಲೂಕಿನ ಹಳ್ಳಿಗಳಲ್ಲಿ ಸುತ್ತಾಡಿ ಮಾಹಿತಿ ಸಂಗ್ರಹ

ಅಭಿಲಾಷ್​ ತಿಟ್ಟಮಾರನಹಳ್ಳಿ ಚನ್ನಪಟ್ಟಣ

ಅಣ್ಣ ನಿಮ್​ ಕಡೆ ಹೇಗಾಗಿದೆ, ಯಾರಿಗೆ ಲೀಡು?, ಯಾರ್​ ಗೆಲ್ಲಬಹುದು? ನಿಮ್ಮೂರಲ್ಲಿ ಯಾರಿಗೆ ಎಷ್ಟು ವೋಟು?.. ಕ್ಷೇತ್ರದೆಲ್ಲೆಡೆ ಇಂತಹ ಮಾತುಗಳೇ ಹೆಚ್ಚಾಗಿ ಕೇಳ ಸಿಗುತ್ತಿವೆ.

ಹೌದು.., ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆ ರಾಜ್ಯವಲ್ಲದೇ ರಾಷ್ಟ್ರದ ಗಮನಸೆಳೆದದ್ದು ಎಲ್ಲರಿಗೂ ತಿಳಿದ ವಿಚಾರ. ಕೇಂದ್ರ ಸಚಿವ ಎಚ್​.ಡಿ. ಕುಮಾರಸ್ವಾಮಿ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ ನಡುವಿನ ಪ್ರತಿಷ್ಠೆಯ ಕದನ ಎಂದೇ ಬಣ್ಣಿಸಲಾದ ಈ ಉಪಚುನಾವಣೆ ಸಾಕಷ್ಟು ಸದ್ದು ಮಾಡಿತ್ತು. ಮಳೆ ನಿಂತರೂ ಮಳೆಹನಿ ನಿಲ್ಲದು ಎಂಬ ಮಾತಿನಂತೆ ಚುನಾವಣೆ ಮುಗಿದರೂ ಕ್ಷೇತ್ರದಲ್ಲಿ ಚುನಾವಣಾ ಗುಂಗು ಸ್ವಲ್ಪವೂ ಕಡಿಮೆಯಾಗಿಲ್ಲ. ಎಲ್ಲೆಡೆ ಫಲಿತಾಂಶದ ಬಗ್ಗೆ ಚರ್ಚೆ ಸಾಮಾನ್ಯವಾಗಿದೆ.

ಇದರ ನಡುವೆ ಈ ಉಪಚುನಾವಣೆ ಫಲಿತಾಂಶದ ಬಗ್ಗೆ ಕ್ಷೇತ್ರದ ಜನತೆಗಿಂತ ಪರವೂರಿನವರಿಗೆ ಚಿಂತೆ ಹೆಚ್ಚಿಸಿದೆ. ಪಕ್ಕದ ಮಂಡ್ಯದವರಂತೂ ಕಾರು ಹಾಗೂ ಮೋಟಾರ್​ ಬೈಕ್​ ಏರಿ ತಾಲೂಕಿನ ಹಳ್ಳಿಗಳಲ್ಲಿ ಸುತ್ತಾಟ ನಡೆಸಿ, ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಹಲವು ಕಡೆಗಳಿಂದ ಕ್ಷೇತ್ರದ ಮತದಾರರನ್ನು ಸಂಪರ್ಕಿಸಿ ಮಾಹಿತಿ ಪಡೆಯುವ ಕೆಲಸವಾಗುತ್ತಿದೆ. ಒಟ್ಟಾರೆ, ತೀವ್ರ ಜಿದ್ದಾಜಿದ್ದಿನ ಚುನಾವಣೆಯ ಫಲಿತಾಂಶದ ಬಗ್ಗೆ ವಿಪರೀತ ಕುತೂಹಲ ಎಲ್ಲೆಡೆ ಇರುವುದಂತೂ ಸತ್ಯ.

ಎಲ್ಲಿ ನೋಡಿದರೂ ಬರೀ ಲೆಕ್ಕಾಚಾರ!!

ಎನ್​ಡಿಎ ಅಭ್ಯರ್ಥಿ ನಿಖಿಲ್​ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್​ ಅಭ್ಯರ್ಥಿ ಸಿ.ಪಿ.ಯೋಗೇಶ್ವರ ನಡುವೆ ನೇರ ಸೆಣಸಾಟ ನಡೆದಿದ್ದು, ಈ ಚುನಾವಣೆಯಲ್ಲಿ ವಿಜಯಮಾಲೆ ಯಾರ ಕೊರಳಿಗೆ ಬೀಳಲಿದೆ ಎಂಬುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ತಾಲೂಕಿನ ಹಳ್ಳಿ ಹಳ್ಳಿಗಳಲ್ಲಿ ಹಾಗೂ ನಗರದ ಗಲ್ಲಿಗಲ್ಲಿಗಳಲ್ಲಿ ಫಲಿತಾಂಶದ ಬಗ್ಗೆಯೇ ಚರ್ಚೆ ಹಾಗೂ ಲೆಕ್ಕಾಚಾರಗಳು ಸಾಮಾನ್ಯ ಎನಿಸಿವೆ. ಪಗಳ ಮುಖಂಡರು ಹಾಗೂ ಕಾರ್ಯಕರ್ತರ ಮೊಬೈಲ್​ ಗಳು ನಿರಂತರವಾಗಿ ರಿಂಗಣಿಸುತ್ತಿದ್ದು, ಬಹುತೇಕ ಕರೆಗಳ ಒಂದೇ ಪ್ರಶ್ನೆ & "ನಿಮ್​ ಕಡೆ ಹೇಗಾಗಿದೆ? ಯಾರ್​ ಗೆಲ್ಲಬಹುದು'!

ಬೂತ್​ ವಾರು ಮತಗಳಿಕೆ ಹಾಗೂ ಯಾರಿಗೂ ಎಷ್ಟು ಮತವಾಗಿರಬಹುದು ಎಂಬ ಲೆಕ್ಕಾಚಾರಗಳು ಜೋರಾಗಿ ನಡೆಯುತ್ತಿವೆ. ಫಲಿತಾಂಶದ ಕುತೂಹಲ ಒಂದೆಡೆಯಾದರೆ, ಬಾಜಿ ಕಟ್ಟುವ ಉತ್ಸಾಹ ಮತ್ತೊಂದೆಡೆಯಾಗಿದೆ. ಈ ಹಿನ್ನೆಲೆಯಲ್ಲಿ ಜಾತಿವಾರು ಸೇರಿ ನಾನಾ ಲೆಕ್ಕಾಚಾರಗಳು ಎಲ್ಲೆಡೆ ಸಾಮಾನ್ಯ ಎನಿಸಿವೆ. ಪತ್ರಕರ್ತರು ಹಾಗೂ ಪೊಲೀಸ್​ ಇಲಾಖೆಯಲ್ಲಿನ ಪರಿಚಯಸ್ಥ ಸಿಬ್ಬಂದಿ ಫೋನ್​ ಗಳಿಗೂ ಫಲಿತಾಂಶ ಕುರಿತಾದ ಕರೆಗಳು ಜೋರಾಗಿರುವುದು ಫಲಿತಾಂಶದ ಬಗೆಗಿನ ತವಕಕ್ಕೆ ಸಾ ಎನ್ನಬಹುದಾಗಿದೆ.