ಶಿರಸಿ: ಶಿರಸಿ ಪ್ರತ್ಯೇಕ ಜಿಲ್ಲಾ ಹೋರಾಟ ಸಮಿತಿ ಹೋರಾಟವನ್ನು ನಿರಂತರ ನಡೆಸುತ್ತಿದೆ. ಅಧ್ಯಕ್ಷನಾಗಿ ನಾನು ಕಾರ್ಯ ನಿರ್ವಹಿಸುತ್ತಿದ್ದು, ಹೋರಾಟದ ಜವಾಬ್ದಾರಿಯನ್ನು ಬೇರೆಯವರಿಗೆ ವಹಿಸಿಲ್ಲ. ಅನಂತಮೂರ್ತಿ ಹೆಗಡೆ ಅವರೂ ಪ್ರತ್ಯೇಕ ಜಿಲ್ಲೆಗೆ ಹೋರಾಟ ನಡೆಸುತ್ತಿದ್ದಾರೆ. ಶಿರಸಿ ಪ್ರತ್ಯೇಕ ಜಿಲ್ಲಾ ಹೋರಾಟ ಸಮಿತಿಯಿಂದ ಅವರಿಗೆ ಸಂಪೂರ್ಣ ಬೆಂಬಲ ನೀಡಲಿದ್ದೇನೆ ಎಂದು ಸಮಿತಿ ಅಧ್ಯಕ್ಷ ಉಪೇಂದ್ರ ಪೈ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಅವರು ಮಾತನಾಡಿದರು. ಪ್ರತ್ಯೇಕ ಜಿಲ್ಲಾ ಹೋರಾಟ ಸಮಿತಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ, ಹೋರಾಟದ ಜವಾಬ್ದಾರಿಯನ್ನೂ ಬೇರೆಯವರಿಗೆ ವಹಿಸಿಲ್ಲ. ಪ್ರತ್ಯೇಕ ಜಿಲ್ಲಾ ಹೋರಾಟ ಸಮಿತಿ ಭದ್ರವಾಗಿದ್ದು, ಹೋರಾಟ ಮುಂದುವರಿಸಿದ್ದೇವೆ ಎಂದರು.
ಪ್ರತ್ಯೇಕ ಜಿಲ್ಲೆ ಹೋರಾಟದ ಕುರಿತಂತೆ ಅನಂತಮೂರ್ತಿ ಹೆಗಡೆ ಅವರು ನನ್ನನ್ನು ಸಂರ್ಪಸಿ ಹೋರಾಟದ ರೂಪುರೇಷೆಯ ಬಗ್ಗೆ ಚರ್ಚೆ ನಡೆಸಿದ್ದರು. ಹೋರಾಟ ಸಮಿತಿ ಸದಸ್ಯರ ಸಭೆ ಕರೆದು, ಸಮಿತಿಯಲ್ಲಿ ಅನಂತಮೂರ್ತಿ ಅವರಿಗೆ ಸೂಕ್ತ ಸ್ಥಾನ ನೀಡುವ ಬಗ್ಗೆ ಸಹ ಚರ್ಚೆ ಆಗಿದೆ. ಆದರೆ, ಈಗ ಅವರು ನಡೆಸಿರುವ ಹೋರಾಟ ಅವರ ವೈಯಕ್ತಿಕ ಹೊರತೂ ಪ್ರತ್ಯೇಕ ಜಿಲ್ಲಾ ಹೋರಾಟ ಸಮಿತಿಯದ್ದಲ್ಲ. ಆದರೂ, ಉದ್ದೇಶ ಒಂದೇ ಆಗಿರುವ ಕಾರಣ ನಾವು ಅವರ ಹೋರಾಟಕ್ಕೆ ಸಂಪೂರ್ಣ ಬೆಂಬಲಿಸುತ್ತಿದ್ದೇವೆ ಎಂದರು.
ಶಿರಸಿ ಪ್ರತ್ಯೇಕ ಜಿಲ್ಲಾ ಹೋರಾಟ ಸಮಿತಿ ಕಳೆದ ಒಂದೂವರೆ ವರ್ಷದಿಂದ ಬಹಿರಂಗವಾಗಿ ಪ್ರತಿಭಟನೆ ನಡೆಸದೇ ಇರಬಹುದು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕಂದಾಯ ಇಲಾಖೆ ಸಚಿವರೊಂದಿಗೆ ಸತತ ಸಂಪರ್ಕದಲ್ಲಿದ್ದು, ಪತ್ರ ವ್ಯವಹಾರವನ್ನೂ ಮಾಡುವ ಮೂಲಕ ಹೋರಾಟ ನಡೆಸುತ್ತಿದೆ. ಬನವಾಸಿ ಪ್ರತ್ಯೇಕ ತಾಲೂಕು ರಚನೆಯ ಮೂಲಕ ಘಟ್ಟದ ಮೇಲಿನ ತಾಲೂಕುಗಳನ್ನು ಒಳಗೊಂಡು ಪ್ರತ್ಯೇಕ ಜಿಲ್ಲೆ ಆಗಬೇಕು ಎಂದು ಹಲವಾರು ಬಾರಿ ವಿನಂತಿಸಿದ್ದೇವೆ. ಅಲ್ಲದೆ, ಜಿಲ್ಲೆಯ ಘಟ್ಟದ ಮೇಲಿನ ಶಾಸಕರಾದ ಭೀಮಣ್ಣ ನಾಯ್ಕ, ಆರ್.ವಿ. ದೇಶಪಾಂಡೆ ಮತ್ತು ಶಿವರಾಮ ಹೆಬ್ಬಾರ್ ಸದನದಲ್ಲಿ ಪ್ರತ್ಯೇಕ ಜಿಲ್ಲೆಯ ಅಗತ್ಯತೆ ಬಗ್ಗೆ ಪ್ರಬಲವಾಗಿ ವಾದ ಮಂಡಿಸಬೇಕು. ಹೀಗಾಗಿ, ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ಪಡೆದುಕೊಂಡೇ ಹೋರಾಟ ನಡೆಸಬೇಕಿದೆ ಎಂದರು. </p><p>ಕುಮಾರಸ್ವಾಮಿ ಅವರು ಶಿರಸಿಗೆ ಬಂದಾಗ ಶಿರಸಿ ಪ್ರತ್ಯೇಕ ಜಿಲ್ಲೆ ಘೊಷಿಸುವ ಬಗ್ಗೆ ಪ್ರಸ್ತಾಪಿಸಿದ್ದರು. ಪ್ರತ್ಯೇಕ ಜಿಲ್ಲಾ ಹೋರಾಟ ಸಮಿತಿ ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಭಾವಶಾಲಿಯಾಗಿ ಪ್ರಯತ್ನಿಸಿ, ಪ್ರತ್ಯೇಕ ಜಿಲ್ಲೆ ಘೊಷಣೆಗೆ ಯತ್ನಿಸಲಿದೆ ಎಂದರು.
ವಿಶ್ವೇಶ್ವರ ಹೆಗಡೆ ಕಾಗೇರಿಯವರು ವಿಧಾನಸಭಾಧ್ಯಕ್ಷರಾಗಿದ್ದಾಗ ಶಿರಸಿ ಪ್ರತ್ಯೇಕ ಜಿಲ್ಲೆ ಘೊಷಣೆಯ ಅಂತಿಮ ಹಂತಕ್ಕೆ ಬಂದಿತ್ತು. ಅವರ ಮನವಿಗೆ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹಮತ ವ್ಯಕ್ತಪಡಿಸಿ, ಶಿರಸಿಗೆ ಆಗಮಿಸಿ ಪ್ರತ್ಯೇಕ ಜಿಲ್ಲೆ ಘೊಷಿಸಲಿದ್ದಾರೆ ಎನ್ನಲಾಗಿತ್ತು. ಆದರೆ, ಚುನಾವಣೆ ಎದುರಿಗಿದ್ದ ಕಾರಣ ಈ ಘೊಷಣೆ ಆಗದಿರುವ ಸಾಧ್ಯತೆ ಇದೆ. ನಾವು ನಮ್ಮ ಹೋರಾಟ ಮುಂದುವರಿಸುತ್ತೇವೆ.
| ಉಪೇಂದ್ರ ಪೈ, ಶಿರಸಿ ಪ್ರತ್ಯೇಕ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ