ವಿಜಯವಾಣಿ ಸುದ್ದಿಜಾಲ ಧಾರವಾಡ
ಕನ್ನಡ ಭಾಷೆ ಬಗ್ಗೆ ಶ್ರದ್ಧೆ, ಭಕ್ತಿ ಇರಬೇಕು. ಮಾತೃ ಭಾಷೆ ಕನ್ನಡ ಉಳಿಸಿ ಬೆಳೆಸುವ ಜವಾಬ್ದಾರಿ ಯುವಕರ ಮೇಲಿದೆ. ಸರ್ಕಾರ ಕನ್ನಡದ ರಕ್ಷಣೆ ವಿಷಯದಲ್ಲಿ ಬದ್ಧತೆ ತೋರಬೇಕು ಎಂದು ಹಿರಿಯ ಸಾಹಿತಿ ನಾಡೋಜ ಗೊ.ರು ಚನ್ನಬಸಪ್ಪ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಧರೆಗೆ ದೊಡ್ಡವರು ಕಾರ್ಯಕ್ರಮ ನಿಮಿತ್ತ ಬುಧವಾರ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಯುವಕರು ಕನ್ನಡವನ್ನು ಸ್ಪಷ್ಟ, ಶುದ್ಧವಾಗಿ ಮಾತನಾಡುವುದನ್ನು ರೂಢಿಸಿಕೊಳ್ಳಬೇಕು. ಇಂಗ್ಲಿಷ್ ಭ್ರಮೆಯಿಂದ ಹೊರಬಂದರೆ ಕನ್ನಡ ತಾನಾಗಿಯೇ ಬೆಳೆಯುತ್ತದೆ. ನಮ್ಮ ಭಾಷೆ ಸಾಹಿತ್ಯ, ಸಂಸ್ಕೃತಿ ಕುರಿತು ನಾವು ಸದಾ ಕಾಳಜಿ ವಹಿಸಬೇಕು ಎಂದರು.
ಸಾಹಿತಿ ಡಾ. ವೀರಣ್ಣ ರಾಜೂರ ಮಾತನಾಡಿ, ಗೊರುಚ ಮೆಟ್ರಿಕ್ವರೆಗೆ ಮಾತ್ರ ಶಿಕ್ಷಣ ಪಡೆದಿದ್ದರೂ ಪದವಿ ಪಡೆದವರಿಗಿಂತ ಹೆಚ್ಚಿನ ಜ್ಞಾನ ಸಂಪಾದಿಸಿದ್ದಾರೆ. ಜಾನಪದ, ವಚನ ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ಕಾರ್ಯ ಮಾಡಿದ್ದಾರೆ. ಕಾಯಕ ಯೋಗಿಯಂತೆ ಕನ್ನಡ ಕಟ್ಟುವ ಕೆಲಸ ಮಾಡಿರುವ ಅವರು, ಗ್ರಾಮ ವಿಕಾಸ ಪ್ರತಿಷ್ಠಾನ ಮೂಲಕ ತಮ್ಮ ಗ್ರಾಮ ಅಭಿವೃದ್ಧಿ ಮಾಡಿರುವ ಕಾರ್ಯ ಸ್ಮರಣೀಯ ಎಂದರು.
ಡಾ. ಗುರುಲಿಂಗಪ್ಪ ಧಬಾಲೆ ಮಾತನಾಡಿ, ಬಸವಣ್ಣನವರ ವಿಚಾರಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸರಳ, ಸಜ್ಜನಿಕೆಯ ಶಿಸ್ತುಬದ್ಧ ಜೀವನವನ್ನು ಗೊರುಚ ನಡೆಸಿದ್ದಾರೆ. ವಚನ ಸಾಹಿತ್ಯ, ಜಾನಪದ ಸಾಹಿತ್ಯಕ್ಕೆ ತನ್ನದೇ ಆದ ಕೊಡುಗೆ ನೀಡಿ ರಾಜ್ಯಕ್ಕೆ ಮಾದರಿ ಜೀವನ ನಡೆಸಿದ ಕೀರ್ತಿ ಹೊಂದಿದ್ದಾರೆ ಎಂದರು.
ಮಾಲತಿ ಪಟ್ಟಣಶೆಟ್ಟಿ, ಡಾ. ಆನಂದ ಪಾಂಡುರಂಗಿ, ನಿಂಗಣ್ಣ ಕುಂಟಿ, ಸತೀಶ ತುರಮರಿ, ಇತರರು ಇದ್ದರು. ಶಂಕರ ಹಲಗತ್ತಿ ಸ್ವಾಗತಿಸಿದರು. ಶಂಕರ ಕುಂಬಿ ನಿರೂಪಿಸಿದರು.