ಜಿಲ್ಲೆ

ಹರಿಖಂಡಿಗೆಯಲ್ಲಿ ಕಾಶೀಮಠಾಧೀಶರ ಮೊಕ್ಕಾಂ

ಕೊಕ್ಕರ್ಣೆ: ಹರಿಖಂಡಿಗೆ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಕಾಶೀಮಠಾಧಿಪತಿ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಮೊಕ್ಕಾಂ ಮತ್ತು ಶ್ರೀ ಸುಧೀಂದ್ರ ತೀರ್ಥ ಸಭಾಭವನದ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮದ ವಿವರ

ಮೇ 30ರಂದು ಶ್ರೀ ಸುಧೀಂದ್ರ ತೀರ್ಥ ಸಭಾಭವನದಲ್ಲಿ ರಾತ್ರಿ ವಾಸ್ತು ಹಾಗೂ ಸುದರ್ಶನ ಹವನ, 31ರಂದು ದೇವರ 98ನೇ ಪುನಃ ಪ್ರತಿಷ್ಠಾಪನಾ ವರ್ಧಂತಿ ಹಾಗೂ ಸಮಾರಾಧನೆ, ಜೂನ್ 1ರಂದು ಶ್ರೀ ಸುಕೃತೀಂದ್ರ ಸಭಾಭವನದಲ್ಲಿ ದೇವ ವಾಸ್ತು ಸುದರ್ಶನ ಹವನ ನಡೆಯಲಿದೆ. 4ರಂದು ಸಂಜೆ ಕಲ್ಯಾಣಪುರ ಮೊಕ್ಕಾಂನಿಂದ ಸ್ವಾಮೀಜಿ ಪುರಪ್ರವೇಶ, ಶ್ರೀ ದೇವರ ಭೇಟಿ, ಸಂಸ್ಥಾನ ದೇವರ ಪೂಜಾಗೃಹ ಉದ್ಘಾಟನೆ ಹಾಗೂ ಶ್ರೀ ಸುಧೀಂದ್ರತೀರ್ಥ ಸಭಾಭವನ ಉದ್ಘಾಟನೆ, ಹತ್ತು ಸಮಸ್ತರಿಂದ ಪಾದಪೂಜೆ, ಸ್ವಾಮೀಜಿಯವರಿಂದ ಆಶೀರ್ವಚನ ನಡೆಯಲಿದೆ.

5ರಂದು ಮಠದಲ್ಲಿ ಸಂಸ್ಥಾನ ದೇವರಿಗೆ ಉಷಾ ಪೂಜೆ, ಶ್ರೀ ಸಂಯಮೀಂದ್ರ ಸ್ವಾಮೀಜಿ ಆಶ್ರಮ ಸ್ವೀಕಾರ ದಿನದ ಆಚರಣೆ, ಶ್ರೀ ಸಂಸ್ಥಾನ ದೇವರಿಗೆ ಲಘು ವಿಷ್ಣು ಪವಮಾನ ಕಲಶಾಭಿಷೇಕ, ನವಗ್ರಹಯುಕ್ತ ಮೃತ್ಯುಂಜಯ ಹವನ, ಮಹಾಪೂಜೆ, ಸಂಸ್ಥಾನ ದೇವರಿಗೆ ಮಹಾಪೂಜೆ, ಭಿಕ್ಷಾ ಸೇವೆ, ಭೂರಿ ಸಮಾರಾಧನೆ, ಮಠದಲ್ಲಿ ರಾತ್ರಿ ಪೂಜೆ, ಪಂಡಿತ್ ಜಯತೀರ್ಥ ಮೇವುಂಡಿ ಹುಬ್ಬಳ್ಳಿ ಅವರಿಂದ ಸಂತವಾಣಿ ಕಾರ್ಯಕ್ರಮ ನಡೆಯಲಿದೆ.

6ರಂದು 48 ಗಂಟೆಗಳ ಅಖಂಡ ಭಜನೆಗೆ ಸ್ವಾಮೀಜಿ ದೀಪಪ್ರಜ್ವಲನೆ ಮಾಡಲಿದ್ದಾರೆ. ಮಧ್ಯಾಹ್ನ ದೇವರಿಗೆ ತುಳಸೀ ಅರ್ಚನೆ, ಮಠದಲ್ಲಿ ಪವಮಾನ ಕಲಶಾಭಿಷೇಕ, ಮಹಾಪೂಜೆ, ಸಂಸ್ಥಾನ ದೇವರಿಗೆ ರಾತ್ರಿ ಪೂಜೆ, 7ರಂದು ಶ್ರೀ ಸಂಸ್ಥಾನ ದೇವರಿಗೆ ಉಷಾಪೂಜೆ, ಅತಿರಿಕ್ತೋಪವಾಸ, ತಪ್ತ ಮುದ್ರಾಧಾರಣೆ, ಮಧ್ಯಾಹ್ನ ಶ್ರೀ ಸಂಸ್ಥಾನ ದೇವರಿಗೆ ಪವಮಾನ ಕಲಶಾಭಿಷೇಕ, ಮಹಾಪೂಜೆ ಹಾಗೂ ರಾತ್ರಿ ಪೂಜೆ ನಡೆಯಲಿದೆ. 8ರಂದು ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮನಕ್ಷತ್ರ ಪ್ರಯುಕ್ತ ದೇವರಿಗೆ ಲಘು ವಿಷ್ಣು ಹವನ, ಮೂಲ ಮಂತ್ರ ಹವನ, ಶ್ರೀಗಳಿಂದ ಪೂರ್ಣಾಹುತಿ, ಶ್ರೀ ಸಂಸ್ಥಾನ ದೇವರಿಗೆ ವಿಶೇಷ ಶತಪವಮಾನ ಕಲಶಾಭಿಷೇಕ, ಮಹಾಪೂಜೆ, ಭಿಕ್ಷಾ ಸೇವೆ, ಸಮಾರಾಧನೆ, ಸಂಜೆ ದೊಡ್ಡ ಪಲ್ಲಕ್ಕಿ ಉತ್ಸವ, ರಾತ್ರಿ ದೇವರಿಗೆ ವಿಶೇಷ ರಂಗಪೂಜೆ ಹಾಗೂ ಸಭಾಕಾರ್ಯಕ್ರಮ ನಡೆಯಲಿದೆ.

9ರಂದು ಮಠದಲ್ಲಿ ಉಷಾಪೂಜೆ, ದೇವರಿಗೆ ಭಜನೆ ಸಂಕೀರ್ತನೆಯೊಂದಿಗೆ ಅಷ್ಟೋತ್ತರ ಶತ ಪ್ರದಕ್ಷಿಣೆ ನಮಸ್ಕಾರ, ಶ್ರೀ ದೇವರಿಗೆ ಮಹಾಪೂಜೆ, ಮಠದಲ್ಲಿ ಮಧ್ಯಾಹ್ನ ಪೂಜೆ, ರಾತ್ರಿ ಪೂಜೆ, ಭಿಕ್ಷಾ ಸೇವೆ, ಪಾದಪೂಜೆ, ಸಮಾರಾಧನೆ ನಡೆಯಲಿದೆ. ಸಂಜೆ ಸ್ವಾಮೀಜಿಗಳನ್ನು ಮುಂದಿನ ಮೊಕ್ಕಾಂಗೆ ಬೆಳ್ತಂಗಡಿ ತಾಲೂಕಿನ ಲಾಲ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಬೀಳ್ಕೊಡುವ ಕಾರ್ಯಕ್ರಮ ನಡೆಯಲಿದೆ ಎಂದು ಆಡಳಿತ ಮೊಕ್ತೇಸರ ಎಂ.ದಿನೇಶ್ ಪೈ ಮತ್ತು ಶ್ರೀ ಸುಧಿಂದ್ರ ತೀರ್ಥ ಕಲಾಮಂದಿರ ಜೀರ್ಣೋದ್ಧಾರ ಮಂಡಳಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.