ಜಿಲ್ಲೆ

ಬಿಆರ್​ಟಿಎಸ್​ ಸಮಸ್ಯೆ ನಿವಾರಣೆಗೆ ಸಿದ್ಧವಾಗಿದೆ ವರದಿ

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಕರ್ನಾಟಕ ವಿಶ್ವ ವಿದ್ಯಾಲಯ ಆವರಣದಲ್ಲಿನ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಬಿಆರ್​ಟಿಎಸ್​ ಸಾರಿಗೆ ಸೇವೆಯಲ್ಲಿನ ಸಮಸ್ಯೆಗಳ ಸುಧಾರಣೆ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್​ ಅಧ್ಯಕ್ಷತೆಯಲ್ಲಿ ಜನಪ್ರತಿನಿಧಿಗಳ, ಸಂಘ-ಸಂಸ್ಥೆಗಳ ಪದಾಧಿಕಾರಿಗಳ ಸಭೆಯು ಭಾನುವಾರ ಜರುಗಿತು.
ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್​ ಮಾತನಾಡಿ, ಬಿಆರ್​ಟಿಎಸ್​ನಿಂದ ಜನರಿಗೆ ಎದುರಾಗಿರುವ ತೊಂದರೆಗಳ ನಿವಾರಣೆಗೆ ಎಇಎಸ್​ಎಸ್​ ಲೈ ಟ್ರ್ಯಾಮ್​ ಸಾರಿಗೆ ಸಂಸ್ಥೆ ಪ್ರಾಥಮಿಕ ವರದಿ ಸಿದ್ಧಪಡಿಸಿದೆ. ಖಾಸಗಿಯವರ ಸಹಭಾಗಿತ್ವದಲ್ಲಿ ಯೋಜನೆ ಅನುಷ್ಠಾನಕ್ಕೆ ಬಂದರೆ ಕಡಿಮೆ ಸಮಯದಲ್ಲಿ ಹೆಚ್ಚಿನ ಜನರು ಸಂಚರಿಸಬಹುದು ಎಂದರು.
ಸಂಚಾರದ ಎಲ್ಲ ನಿರ್ವಹಣೆಯನ್ನು ಸಂಸ್ಥೆ ಮಾಡುವುದರಿಂದ ಸರ್ಕಾರಕ್ಕೆ ಹೊರೆ ತಪ್ಪಲಿದೆ. ಹೀಗಾಗಿ ಬಿಆರ್​ಟಿಎಸ್​ನಿಂದ ಆಗುತ್ತಿರುವ ತೊಂದರೆ, ಅವುಗಳ ಪರಿಹಾರಕ್ಕೆ ಕ್ರಮಗಳೇನು?, ಇತರ ವಿಷಯಗಳ ಕುರಿತು ಜನರಿಂದ ಸಲಹೆ ಪಡೆಯಲಾಗುತ್ತಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಸಭೆ, ಚರ್ಚೆ ನಡೆಸಿ ಅಭಿಪ್ರಾಯ ಸಂಗ್ರಹಿಸಲಾಗುವುದು ಎಂದರು.
ಸಂಸ್ಥೆಯ ಅಧಿಕಾರಿ ಕಿಶೋರ ಮಾತನಾಡಿ, ಬಿಆರ್​ಟಿಎಸ್​ ಸಮಸ್ಯೆ ಕುರಿತು ಅಧ್ಯಯನ ನಡೆಸಿ ವರದಿ ಸಿದ್ಧಪಡಿಸಲಾಗಿದೆ. ಮಾದರಿಯಾದ ಬಿಆರ್​ಟಿಎಸ್​ ಮಾರ್ಗದಲ್ಲಿ ಅಪಘಾತ ಸಂಭವಿಸಬಹುದಾದ 11 ಸ್ಥಳಗಳಿವೆ. ಸಿಗ್ನಲ್​ ಸಮಸ್ಯೆ ಇದ್ದು, ಖಾಸಗಿ ವಾಹನಗಳು ಓಡಾಡಲು ತೊಂದರೆ ಎದುರಿಸುವಂತಾಗಿದೆ ಎಂದರು.
ಪಾಲಿಕೆ ಸದಸ್ಯ ಶಿವು ಹಿರೇಮಠ ಮಾತನಾಡಿ, ಹುಧಾ ಮಧ್ಯೆ ಖಾಸಗಿ ಸಹಭಾಗಿತ್ವದಲ್ಲಿ ಎಚ್​ಇಎಸ್​ಎಸ್​ ಲೈ ಟ್ರ್ಯಾಮ್​ ಸಾರಿಗೆ ಜಾರಿಗೆ ತರುವುದಾದರೆ, ಧಾರವಾಡ ಉನಗರ ಠಾಣೆಯಿಂದ ಹುಬ್ಬಳ್ಳಿ ರೈಲ್ವೆ ನಿಲ್ದಾಣದವರೆಗೆ ಫ್ಲೈ ಓವರ್​ ನಿರ್ಮಿಸಿ ಬಸ್​ಗಳನ್ನು ಓಡಿಸಬೇಕು ಎಂದರು.
ಪಾಲಿಕೆ ಮೇಯರ್​ ರಾಮಪ್ಪ ಬಡಿಗೇರ, ಬಳ್ಳಾರಿ ಸಂಸದ ತುಕಾರಾಮ, ಹುಡಾ ಅಧ್ಯ ಶಾಕೀರ್​ ಸನದಿ, ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಜಿಲ್ಲಾಧಿಕಾರಿ ದಿವ್ಯ ಪ್ರಭು, ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ, ಇತರರು ಇದ್ದರು.

ಸಾರ್ವಜನಿಕರ ಅಸಮಾಧಾನಬಿಆರ್​ಟಿಎಸ್​ನಿಂದ ಖಾಸಗಿ ವಾಹನಗಳ ಓಡಾಟಕ್ಕೆ ಕಿರಿಕಿರಿಯಾಗುತ್ತಿದೆ. ಬಹುತೇಕ ಕಡೆ ಸಂಚಾರ ನಿಯಮ ಪಾಲನೆ ಆಗುತ್ತಿಲ್ಲ. ಬಸ್​ ನಿಲ್ದಾಣದಲ್ಲಿ ನಿರ್ವಹಣೆ ಕೊರತೆ ಇದೆ. ಸಂಚಾರ ಪಥ ಸಾಕಷ್ಟು ಕಡೆ ಅವೈಜ್ಞಾನಿಕವಾಗಿದೆ. ಧಾರವಾಡ ಜುಬಿಲಿ ವೃತ್ತದಿಂದ ನವಲೂರುವರೆಗೆ ಹಾಗೂ ಹುಬ್ಬಳ್ಳಿ ಉಣಕಲ್​ನಿಂದ ರೈಲು ನಿಲ್ದಾಣವರೆಗೆ ಮಿಕ್ಸಡ್​ ಲೈನ್​ ಸಂಚಾರಕ್ಕೆ ಅವಕಾಶ ಕೊಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು.