ಜಿಲ್ಲೆ

ಬೆಲ್ಲದ ಪ್ಯಾಕೆಟ್‌ನಲ್ಲಿ ಸತ್ತ ಇಲಿಯ ಅವಶೇಷ

ಗುಡಿಬಂಡೆ: ತಾಲೂಕಿನ ಹಂಪಸಂದ್ರ ಗ್ರಾಪಂ ವ್ಯಾಪ್ತಿಯ ಗರುಡಾಚಾರ‌್ಲಹಳ್ಳಿ ಅಂಗನವಾಡಿ ಕೇಂದ್ರಕ್ಕೆ ಸರಬರಾಜು ಮಾಡಿರುವ ಬೆಲ್ಲದ ಪುಡಿ ಪ್ಯಾಕೆಟ್‌ನಲ್ಲಿ ಸತ್ತಿರುವ ಇಲಿಯ ಅವಶೇಷ ಕಾಣಿಸಿಕೊಂಡಿದ್ದು, ಮಕ್ಕಳು ಪಾಲಕರು ಆತಂಕಕ್ಕೆ ಒಳಗಾಗಿದ್ದಾರೆ.

ಮಕ್ಕಳಾದ ನಂದೀಶ ಮತ್ತು ಲಕ್ಷ್ಮೀಗೆ ಗ್ರಾಮದ ಅಂಗನವಾಡಿ ಕೇಂದ್ರದಿಂದ ಕೆಲ ಆಹಾರ ಪದಾರ್ಥಗಳನ್ನು ನೀಡಿದ್ದು, ಅದರಲ್ಲಿ ಬೆಲ್ಲದ ಪ್ಯಾಕೆಟ್ ಸಹ ಇತ್ತು. ಬೆಲ್ಲದ ಪುಡಿ ಬಳಸಲು ಪ್ಯಾಕೆಟ್ ಅನ್ನು ಒಡೆದಾಗ ದುರ್ವಾಸನೆ ಬಂದಿದ್ದು, ಪರೀಕ್ಷಿಸಿದಾಗ ಬೆಲ್ಲದ ಪುಡಿಯ ನಡುವೆ ಸತ್ತಿರುವ ಇಲಿಯ ಅವಶೇಷಗಳು ಸಿಕ್ಕಿದ್ದು, ಪಾಲಕರು ಆತಂಕಗೊಂಡಿದ್ದಾರೆ. ಈ ಆಹಾರ ಸಾಮಗ್ರಿಗಳನ್ನು ಬಾಗೇಪಲ್ಲಿ ತಾಲೂಕಿನ ಯಲ್ಲಂಪಲ್ಲಿಯ ಎಂಎಸ್‌ಪಿಸಿ ಏಜೆನ್ಸಿಯಿಂದ ಪೂರೈಕೆ ಮಾಡಿರುವುದು ಎನ್ನಲಾಗಿದೆ.

ಗ್ರಾಮಸ್ಥರ ಆಕ್ರೋಶ: ಅಂಗನವಾಡಿ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಲು ಸರ್ಕಾರ ಕೋಟ್ಯಂತರ ರೂ. ವೆಚ್ಚ ಮಾಡುತ್ತಿದೆ. ಆದರೆ ಆಹಾರ ಪದಾರ್ಥ ಪೂರೈಸುವ ಗುತ್ತಿಗೆ ಪಡೆದಿರುವ ಏಜೆನ್ಸಿಗಳು ಇಷ್ಟು ನಿರ್ಲಕ್ಷ್ಯ ವಹಿಸಿದರೆ ಹೇಗೆ?, ಅದನ್ನು ಸೇವಿಸಿ ಮಕ್ಕಳಿಗೆ ಆರೋಗ್ಯ ಏರುಪೇರಾದರೆ ಹೊಣೆ ಯಾರು? ಈ ಬಗ್ಗೆ ಅಧಿಕಾರಿಗಳು ಪರಿಶೀಲನೆ ಮಾಡಿ ಆಹಾರ ಪದಾರ್ಥಗಳನ್ನು ಪೂರೈಸುತ್ತಿರುವ ಏಜೆನ್ಸಿಗಳ ಮೇಲೆ ಸೂಕ್ತ ಕ್ರಮ ವಹಿಸಬೇಕೆಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.

ನಮ್ಮ ಮಗುವಿಗೆ ಪ್ರತಿ ತಿಂಗಳು ಅಂಗನವಾಡಿ ಕೇಂದ್ರದಿಂದ ಆಹಾರ ಪದಾರ್ಥಗಳನ್ನು ನೀಡುತ್ತಾರೆ. ಹಾಲಿನಲ್ಲಿ ಬೆಲ್ಲದ ಪುಡಿಯನ್ನು ಹಾಕಿ ಕುಡಿಸುವಂತೆ ನೀಡಿದ್ದು, ಬೆಲ್ಲದ ಪ್ಯಾಕೆಟ್ ತೆಗೆದಾಗ ಕೆಟ್ಟ ವಾಸನೆ ಬರುತ್ತಿತ್ತು. ಸೂಕ್ಷ್ಮವಾಗಿ ಪರೀಕ್ಷಿಸಿದಾಗ ಸತ್ತಿರುವ ಇಲಿಯ ಅವಶೇಷಗಳು ಸಿಕ್ಕಿವೆ. ಇಂತಹ ಆಹಾರ ಸರಬರಾಜು ಮಾಡಿರುವವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು.

ರತ್ನಮ್ಮ, ಪಾಲಕಿ, ಗರುಡಾಚಾರ‌್ಲಹಳ್ಳಿ

ಗುಡಿಬಂಡೆ ಮತ್ತು ಬಾಗೇಪಲ್ಲಿಯ ಅಂಗನವಾಡಿ ಕೇಂದ್ರಗಳಿಗೆ ಬಾಗೇಪಲ್ಲಿ ತಾಲೂಕಿನ ಯಲ್ಲಂಪಲ್ಲಿ ಎಂಎಸ್‌ಪಿಸಿ ಏಜೆನ್ಸಿಯಿಂದ ಆಹಾರ ಪದಾರ್ಥಗಳನ್ನು ಸರಬರಾಜು ಮಾಡಲಾಗುತ್ತಿದೆ. ಗರುಡಾಚಾರ‌್ಲಹಳ್ಳಿಯ ಅಂಗನವಾಡಿಯ ಮಗುವಿಗೆ ಬೆಲ್ಲದ ಪುಡಿಯ ಪ್ಯಾಕೆಟ್‌ನಲ್ಲಿ ಸತ್ತ ಇಲಿಯ ಅವಶೇಷಗಳು ಕಂಡುಬಂದಿದೆ. ಈ ಬಗ್ಗೆ ದೂರು ಬಂದಿದ್ದು, ಅಂಗನವಾಡಿ ಕಾರ್ಯಕರ್ತೆಗೆ ಪರಿಶೀಲನೆ ಮಾಡುವಂತೆ ತಿಳಿಸಲಾಗಿದೆ. ನಾನು ಸಹ ಭೇಟಿ ನೀಡಿ ಪರಿಶೀಲನೆ ಮಾಡುತ್ತೇನೆ.

ರಫೀಕ್, ಸಿಡಿಪಿಒ, ಗುಡಿಬಂಡೆ