ಬಾಗಲಕೋಟೆ ತಾಲೂಕಿನ ತುಳಸಿಗೇರಿ ಹನುಮಂತ ದೇವಸ್ಥಾನ  
ಜಿಲ್ಲೆ

ಧಾರ್ಮಿಕ ದತ್ತಿ ಇಲಾಖೆ ದೇವಸ್ಥಾನಗಳ ಆಸ್ತಿ ಸರ್ವೇ ಪ್ರಭಾವಿಗಳ ಒತ್ತಡಕ್ಕೆ ಸಿಲುಕಿದ್ದಾರಾ ಅಧಿಕಾರಿಗಳು?

ಬಾಗಲಕೋಟೆ: ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳ ಆಸ್ತಿಯ ಮೂಲ ಹಕೀಕತ್ತು ತಿಳಿಯುವ ಉದ್ದೇಶದಿಂದ ರಾಜ್ಯ ಸರ್ಕಾರ ಅನೇಕ ನಿಬಂಧನೆಗಳನ್ನು ಹಾಕಿ ಸರ್ವೇ ಮಾಡಲು ಮುಂದಾಗಿತ್ತು. ಈ ಬಗ್ಗೆ ಆದೇಶ ಹೊರಡಿಸಿದ್ದರೂ ಅಧಿಕಾರಿಗಳ ನಿರ್ಲಕ್ಷೃ, ಇಲಾಖೆಗಳ ಸಮನ್ವಯ ಕೊರತೆಯಿಂದಾಗಿ ಆದೇಶ ಬರೀ ಕಾಗದದ ಹುಲಿಯಾಗಿದ್ದು ವಿಪರ್ಯಾಸ.

ರಾಜ್ಯ ಸರ್ಕಾರವು ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿರುವ ದೇವಸ್ಥಾನ ಹಾಗೂ ಅದಕ್ಕೆ ಸಂಬಂಧಿಸಿದ ಆಸ್ತಿಗಳನ್ನು ಗುರುತಿಸಿ, ಹದ್ದುಬಸ್ತು ಮಾಡಬೇಕು, ಸರ್ವೇ ನಡೆಸಿ ಉತಾರದಲ್ಲಿ ಧಾರ್ಮಿಕ ಸಂಸ್ಥೆಯ ಹೆಸರು, ಇಲಾಖೆ ಹೆಸರು ನಮೂದಿಸಬೇಕು. 2021 ಡಿಸೆಂಬರ್ 30ರೊಳಗೆ ಎಲ್ಲ ಕಾರ್ಯಕೈಗೊಂಡು ವರದಿ ನೀಡಲು ಸೂಚನೆ ನೀಡಿತ್ತು. ಆದರೆ ಈ ವರೆಗೆ ಅದು ಜಾರಿಯಾಗಿಲ್ಲ. ಇದು ವರೆಗೂ ಸರ್ವೇ ಕಾರ್ಯ ನಡೆಸದೇ, ಯಾವುದೇ ಪ್ರಕ್ರಿಯೆ ಮಾಡದ ಕಾರಣ ಸತ್ಯ ಮುಚ್ಚಿಡುವ ಯತ್ನ ನಡೆಯುತ್ತಿದೆಯೇ? ಎನ್ನುವ ಅನುಮಾನ ಕಾಡತೊಡಗಿದೆ.

ಸರ್ವೇ ಕಾರ್ಯಕ್ಕೆ ಹಿಂದೇಟು ಏಕೆ?: ಜಿಲ್ಲೆಯಲ್ಲಿ ಧಾರ್ಮಿಕ ದತ್ತಿ ಇಲಾಖೆ ಅಡಿಯಲ್ಲಿ ಎ, ಬಿ, ಸಿ ಕ್ಯಾಟಗರಿಯಲ್ಲಿ ಒಟ್ಟು 1166 ದೇವಸ್ಥಾನಗಳಿವೆ. ಅದಕ್ಕೆ ಸಂಬಂಧಿಸಿದಂತೆ ನೂರಾರು ಎಕರೆ ಕೃಷಿ ಭೂಮಿ, ವಾಣಿಜ್ಯ ನಿವೇಶನ ಹಾಗೂ ಮಳಿಗೆಗಳಿವೆ. ಆದರೆ ಸರಿಯಾದ ನಿರ್ವಹಣೆ, ಸಂರಕ್ಷಣೆ ಇಲ್ಲದೆ ಸೊರಗಿವೆ. ಹಲವು ಕಡೆ ಪ್ರಭಾವಿಗಳಿಂದಲೇ ಒತ್ತುವರಿಯಾಗಿರುವ ಬಗ್ಗೆ ನಿಖರ ಮಾಹಿತಿ ಇದೆ. ದತ್ತಿ ಇಲಾಖೆಯು ಕಂದಾಯ ಇಲಾಖೆ, ಸರ್ವೇ ಇಲಾಖೆ ಸಹಕಾರದೊಂದಿಗೆ ಈ ಬಗ್ಗೆ ವಿಶೇಷವಾದ ಒತ್ತು ನೀಡಿ, ದತ್ತಾಂಶ ಹಾಗೂ ವಾಸ್ತವ ಅಂಶ ತೆರೆದಿಡಬೇಕಿತ್ತು. ಆದರೆ ದತ್ತಿ ಇಲಾಖೆ ಕಾಟಾಚಾರಕ್ಕೆ ಸರ್ವೇ ನಡೆಸಿದೆ. ಅನೇಕ ಕಡೆ ಸರ್ವೇ ನಡೆಸಲು ಮುಂದಾದಾಗ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಹಿಂದೇಟು ಹಾಕಿದೆ. ಪ್ರಭಾವಿಗಳ ಒತ್ತಡಕ್ಕೆ ಮಣಿದು ಈ ರೀತಿ ನಡೆದುಕೊಂಡಿದೆ ಎನ್ನುವ ಸಂಶಯ ವ್ಯಕ್ತವಾಗಿದೆ. ದೇವಸ್ಥಾನಗಳ ವಿಷಯದಲ್ಲಿಯೂ ಇಲಾಖೆ ನಿರ್ಲಕ್ಷೃ ಧೋರಣೆ ತಾಳಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

387 ದೇವಸ್ಥಾನಗಳ ಸರ್ವೇ ಬಾಕಿ: ಜಿಲ್ಲೆಯಲ್ಲಿನ 1166 ದೇವಸ್ಥಾನಗಳ ಪೈಕಿ 1040 ದೇವಸ್ಥಾನಗಳ ಆಸ್ತಿ ಸರ್ವೇ ನಡೆಸಲಾಗಿದೆ. ಯಾವುದೇ ಒತ್ತುವರಿಯಾಗಿಲ್ಲ ಅಂತ ಆಯಾ ತಾಲೂಕಿನ ತಹಸೀಲ್ದಾರರು ಕಂದಾಯ ಇಲಾಖೆ ಮೂಲಕ ದತ್ತಿ ಇಲಾಖೆಗೆ ವರದಿ ನೀಡಿದ್ದಾರೆ. ಆದರೆ ವಾಸ್ತವದಲ್ಲಿ ಸರ್ವೇ ಕಾರ್ಯವೇ ನಡೆದಿಲ್ಲವೆಂದು ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೃಷ್ಣಾ ಮೇಲ್ದಂಡೆ ಯೋಜನೆಯ ಹಿನ್ನೀರು ಮತ್ತು ದಾಖಲೆಗಳಿಲ್ಲದ ಒಟ್ಟು 387 ದೇವಸ್ಥಾನಗಳು ಜಿಲ್ಲೆಯಲ್ಲಿವೆ. ಅವುಗಳ ಸರಿಯಾದ ದಾಖಲೆ ಹಾಗೂ ಸದ್ಯ ಅನೇಕ ದೇವಸ್ಥಾನಗಳೇ ಇಲ್ಲದ ಪರಿಣಾಮ ಅವುಗಳ ಸರ್ವೇ ಕಾರ್ಯ ಬಾಕಿ ಉಳಿದಿವೆ. ಅವುಗಳ ದಾಖಲೆ ಪತ್ತೆ ಮಾಡುವ ಕಾರ್ಯವು ನಡೆದಿಲ್ಲ ಎನ್ನುವುದು ದುರಂತ ಸಂಗತಿ.

ಸಂಘ-ಸಂಸ್ಥೆಗಳ ದರ್ಬಾರ್: ದತ್ತಿ ಇಲಾಖೆಯ ದೇವಸ್ಥಾನಗಳಿಗೆ ಸೇರಿರುವ ಆಸ್ತಿಗಳು ಜಾತ್ರಾ ಸಮಿತಿ, ಅಭಿವೃದ್ಧಿ ಮಂಡಳಿ ಸೇರಿದಂತೆ ವಿವಿಧ ಸಂಘ, ಸಂಸ್ಥೆಗಳ ಹೆಸರು ದಾಖಲೆಯಲ್ಲಿ ಅಕ್ರಮವಾಗಿ ಸೇರ್ಪಡೆಯಾಗಿವೆ. ಅವುಗಳ ನೇತೃತ್ವದಲ್ಲಿ ದರ್ಬಾರ್ ನಡೆಯುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಆದರೆ ಸತ್ಯಾಂಶ ಪರಿಶೀಲನೆ ಕಾರ್ಯನಡೆದಿಲ್ಲ. ಈ ಬಗ್ಗೆ ಸಮಗ್ರ ಪರಿಶೀಲನೆ, ಸರ್ವೇ ಕಾರ್ಯ ನಡೆಸಲು ಮುಂದಾದಾಗ ವಿರೋಧ ವ್ಯಕ್ತಪಡಿಸಲಾಗಿದೆ. ಇದರಿಂದ ಆಸ್ತಿಗಳು ಹಾಗೂ ದಾಖಲಾತಿಗಳು ಪತ್ತೆ ಮಾಡುವುದೂ ಕೂಡ ಸವಾಲಿನ ಕೆಲಸವಾಗಿದೆ.

ಸರ್ಕಾರ ಆದೇಶ ಹೊರಡಿಸಿ ಎರಡು ವರ್ಷ ಸಮೀಪಿಸುತ್ತಾ ಬಂದರೂ ಜಿಲ್ಲೆಯಲ್ಲಿ ಧಾರ್ಮಿಕ ದತ್ತಿ ಇಲಾಖೆಗಳ ದೇವಸ್ಥಾನ ಹಾಗೂ ಆಸ್ತಿಗಳ ಸರ್ವೇ ಕಾರ್ಯ ಪೂರ್ಣಗೊಂಡಿಲ್ಲ ಎನ್ನುವುದು ಗಮನಕ್ಕೆ ಬಂದಿರಲಿಲ್ಲ. ಈ ಬಗ್ಗೆ ವಿಶೇಷವಾಗಿ ಗಮನಹರಿಸಲಾಗುವುದು. ಅಭಿಯಾನದ ಮಾದರಿಯಲ್ಲಿ ವಿವಿಧ ಇಲಾಖೆಗಳ ಜಂಟಿಯಾಗಿ ಸರ್ವೇ ನಡೆಸಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಉಪ ವಿಭಾಗಾಧಿಕಾರಿಗಳು, ತಹಸೀಲ್ದಾರ ಜೊತೆಗೆ ಸಭೆ ನಡೆಸಿ ಸೂಚನೆ ನೀಡಲಾಗುವುದು.ಜಾನಕಿ ಕೆ.ಎಂ ಜಿಲ್ಲಾಧಿಕಾರಿ