ವಿಜಯಾನಂದ ಚಿತ್ರ ಬಿಡುಗಡೆ ಹಿನ್ನಲೆಯಲ್ಲಿ ಬಾಗಲಕೋಟೆ ಶಕ್ತಿ ಚಿತ್ರಮಂದಿರಲ್ಲಿ ಚಿತ್ರ ನಿರ್ಮಾಪಕ ಘನಶಾಮ ಭಾಂಡಗೆ, ಮಾಜಿ ಸಚಿವ ಎಚ್.ವೈ.ಮೇಟಿ, ರಕ್ಷಿತಾ ಈಟಿ, ರಮೇಶ ಬದ್ನೂರ, ನಾಗರಾಜ ಹದ್ಲಿ ಮತ್ತಿತರರು ಕೇಕ್ ಕತ್ತರಿಸಿ ಚಿತ್ರಕ್ಕೆ ಶುಭಹಾರೈಸಿದರು. 
ಜಿಲ್ಲೆ

ಕೋಟೆನಾಡಲ್ಲಿ ವಿಜಯಾನಂದ ಚಿತ್ರದ ಸಂಭ್ರಮ

[ಬಾಗಲಕೋಟೆ: ಬಹು ನಿರೀಕ್ಷೆಯ ಕನ್ನಡಿಗರೇ ನಿರ್ಮಾಣ ಮಾಡಿದ ಕನ್ನಡಿಗನ ಸಾಧನೆಯ ಕನ್ನಡದ ಮೊಟ್ಟ ಮೊದಲ ಬಯೋಪಿಕ್ ವಿಜಯಾನಂದ ಚಿತ್ರ ಬಿಡುಗಡೆಗೆ ಬಾಗಲಕೋಟೆ ಜಿಲ್ಲೆಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಮೇರು ಸಾಧಕ, ಪದ್ಮಶ್ರೀ ಡಾ.ವಿಜಯ ಸಂಕೇಶ್ವರ ಜೀವನಾಧಾರಿತ ಚಿತ್ರವೂ ಬಾಗಲಕೋಟೆ ನಗರ ಸೇರಿ ಜಿಲ್ಲೆಯ ೧೧ ಚಿತ್ರ ಮಂದಿರಗಳಲ್ಲಿ ಶುಕ್ರವಾರ ಬಿಡುಗಡೆಯಾಗಿದ್ದು, ಎಲ್ಲೆಡೆ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬಂದಿವೆ. ವಿಜಯಾನಂದ ಚಿತ್ರ ಬಿಡುಗಡೆ ಹಿನ್ನಲೆಯಲ್ಲಿ ಬಾಗಲಕೋಟೆ ನಗರದ ಹೊಳೆ ಆಂಜನೇಯ ದೇವಸ್ಥಾನದಲ್ಲಿ ಡಾ.ಸಂಕೇಶ್ವರ ಅಭಿಮಾನಿಗಳು, ಹಿತೈಷಿಗಳು ವಿಶೇಷ ಪೂಜೆ ನೆರವೇರಿಸಿದರು. ಆಂಜನೇಯ ಮೂರ್ತಿ ಎದುರು ಚಿತ್ರದ ಪೋಸ್ಟರಗಳನ್ನು ಇಟ್ಟು ಚಿತ್ರ ಸಂಪೂರ್ಣ ಯಶಸ್ವಿಯಾಗಲಿ ಎಂದು ಪ್ರಾರ್ಥಿಸಿದರು.
ಈರಣ್ಣ ಉಮಚಗಿ, ಶಿವು ಚನ್ನಾನಿ, ಮಂಜು ಅನವಾಲ, ಹಣಮಂತ ಬೇವೂರ, ನಭಿ ಮುಜಾವರ, ಮಂಜು ಕಳ್ಳಿಗುಡ್ಡ, ವಿಜಯ ಕತ್ತಿ, ಈರಣ್ಣ ಕರಬಾವಿ, ಮಹೇಶ ಗಾಣಗೇರ ಹಾಗೂ ಸ್ನೇಹಿತರು ಸೇರಿ ವಿಜಯಾನಂದ ಚಿತ್ರವೂ ಯಶಸ್ವಿಯಾಗಲೆಂದು ಪೂಜೆ ಸಲ್ಲಿಸಿ, ಘೋಷಣೆ ಕೂಗಿದರು.
ಶಕ್ತಿ ಥೇಟರ ನಲ್ಲಿ ಅಭಿಮಾನಿಗಳು ಚಿತ್ರದ ಕಟೌಟ್‌ಗಳಿಗೆ ಹಾಲಿನ ಅಭಿಷೇಕ ನೆರವೇರಿಸಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಅಭಿಮಾನ ಮೆರೆದರು. ಇನ್ನು ಕನ್ನಡದಲ್ಲಿ ಇಂಗಳೆ ಮಾರ್ಗ ಹಾಗೂ ಕೆಂಗುಲಾಬಿ ಚಿತ್ರ ನಿರ್ಮಾಣ ಮಾಡಿರುವ ನಿರ್ಮಾಪಕ ಘನಶಾಮ ಭಾಂಡಗೆ ಅವರು ಚಿತ್ರಕ್ಕೆ ಶುಭಹಾರೈಸಿ ವಿಜಯಾನಂದ ಕೇಕ್ ಕತ್ತರಿಸಿ ಹರ್ಷ ವ್ಯಕ್ತಪಡಿಸಿದರು.
ಮಾಜಿ ಸಚಿವ ಎಚ್.ವೈ.ಮೇಟಿ, ಕಾಂಗ್ರೆಸ್ ಪಕ್ಷದ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ರಕ್ಷಿತಾ ಈಟಿ, ಆಮ್ ಆದ್ಮಿ ಪಕ್ಷದ ರಮೇಶ ಬದ್ನೂರ, ನಾಗರಾಜ ಹದ್ಲಿ, ವಿಜಯ ಸುಲಾಖೆ, ಚಂದ್ರಶೇಖರ ಬ್ಯಾಳಿ, ಸಂತೋಷ ಜಕಾತಿ, ಕಾಶಿನಾಥ ಶಿವನಗುತ್ತಿ, ಅರುಣ ಲೋಕಾಪುರ ಮತ್ತಿತರರು ಪರಸ್ಪರ ಕೇಕ್ ತಿನ್ನಿಸಿ ಸಂಭ್ರಮಿಸಿದರು.
ಮೊದಲ ಟಿಕೆಟ್ ಖರೀದಿಸಿದ ಮಾಜಿ ಸಚಿವ ಮೇಟಿ :
ಯಶಸ್ವಿ ಉದ್ಯಮಿ ಡಾ.ವಿಜಯ ಸಂಕೇಶ್ವರ ಜೀವನಾಧಾರಿತ ಚಿತ್ರ ಬಿಡುಗಡೆ ಹಿನ್ನಲೆ ಫಸ್ಟ್ ಶೋ ನೋಡಲೆಂದು ಬಾಗಲಕೋಟೆ ಶಕ್ತಿ ಚಿತ್ರ ಮಂದಿರಕ್ಕೆ ಆಗಮಿಸಿ ಮಾಜಿ ಸಚಿವ ಎಚ್.ವೈ.ಮೇಟಿ ಅವರು ಅಲ್ಲಿ ನಡೆದಿದ್ದ ಕೇಕ್ ಕತ್ತರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಬಳಿಕ ಸ್ವತಃ ತಾವೇ ಟಿಕೆಟ್ ಕೌಂಟರ್ ಗೆ ಮೊದಲ ಟಿಕೆಟ್ ಪಡೆದು ತಮ್ಮ ಅಭಿಮಾನಿಗಳ ಜೊತೆ ಚಿತ್ರಮಂದಿರದಲ್ಲಿ ಕುಳಿತು ಚಿತ್ರ ವೀಕ್ಷಿಸಿದರು.

ವಿಜಯಾನಂದ ಚಿತ್ರವೂ ಬಹಳ ಚನ್ನಾಗಿ ಮೂಡಿ ಬಂದಿದೆ. ಸಂಕೇಶ್ವರ ಸಾಧನೆ ಅಪ್ರತಿಮ. ಒಂದು ಟ್ರಕ್ ನಿಂದ ಆರಂಭಿಸಿ ಇವತ್ತು ಸಾವಿರಾರು ಟ್ರಕ್ ಮಾಡಿದ್ದಾರೆ ಎಂದರೆ ಅದರ ಹಿಂದಿನ ಶ್ರಮ ಅಷ್ಟಿಷ್ಟಲ್ಲ. ಇದು ಬರೀ ಒಂದು ಚಿತ್ರಮಾತ್ರವಲ್ಲ. ಯುವಕರಿಗೆ ಪ್ರೇರಣೆ ಒದಗಿಸುವ ಮಾರ್ಗ. ನಾನು ಮತ್ತು ಸಂಕೇಶ್ವರ ಅವರು ಲೋಕಸಭಾ ಸದಸ್ಯರಾಗಿ ಅನೇಕ ಸಂದರ್ಭದಲ್ಲಿ ಅವರೊಂದಿಗೆ ಮಾತನಾಡಿದ್ದೇನೆ. ವಿಶೇಷವಾಗಿ ಅವರು ನಮ್ಮ ಬಾಗಲಕೋಟೆಯ ಅಳಿಯ. ಈ ಚಿತ್ರ ಖಂಡಿತ ಯಶಸ್ವಿಯಾಗುತ್ತದೆ. ಚಿತ್ರವನ್ನು ನೋಡಿ ಚಪ್ಪಾಳೆ ತಟ್ಟಿ ಹೋಗದೇ ಅವರ ಸಾಧನೆಯನ್ನು ಪ್ರೇರಣೆ ಮಾಡಿಕೊಂಡು ಯುವಕರು ಮುಂದೆ ಬರಬೇಕು ಎಂದರು.

ಕೋಟ್…
ವಿಜಯಾನಂದ ಚಿತ್ರ ಬಹಳ ಖುಷಿ ತಂದಿದೆ. ಅವರ ಹೆಸರಿನಲ್ಲಿ ವಿಜಯ ಇದೆ. ಯಾರು ಯಾವ ಕ್ಷೇತ್ರ ಕಠಿಣ ಎನ್ನುತ್ತಾರೋ ಆ ಕ್ಷೇತ್ರಕ್ಕೆ ಹೋಗಿ ಯಶಸ್ಸು ಸಾಽಸುವುದು ಅವರ ವಿಶೇಷ ಗುಣ. ಇದು ಒಂದು ಚಿತ್ರ ಎನ್ನುವುದಕ್ಕಿಂತ ಯುವಕರಿಗೆ ಮಾದರಿ. ನನ್ನ ಬದುಕಿನ ಜೊತೆ ಸಾವಿರಾರು ಜನರಿಗೆ ಉದ್ಯೋಗ ಕೊಡಬೇಕು ಎನ್ನುವ ಸಂದೇಶ ಸಾರುವ ಈ ಚಿತ್ರವನ್ನು ಪ್ರತಿಯೊಬ್ಬರು ಕುಟುಂಬ ಸಮೇತ ನೋಡುವ ಚಿತ್ರವಾಗಿದೆ.
-ಘನಶಾಮ ಭಾಂಡಗೆ ಕನ್ನಡ ಚಿತ್ರ ನಿರ್ಮಾಪಕರು.

ಕೋಟ್…
ಕೈ ಕೆಸರಾದರೆ ಬಾಯಿ ಮೊಸರು ಎನ್ನುವ ಗಾದೆ ಮಾತಿಗೆ ಸಾಕ್ಷಿಯಾದವರು ನಮ್ಮ ಡಾ.ವಿಜಯ ಸಂಕೇಶ್ವರ. ಈ ಚಿತ್ರ ನೋಡಿದಾಗ ನಿಜಕ್ಕೂ ಇದು ಯುವಕರಿಗೆ ಸ್ಪೂರ್ತಿ ತರುವ ಚಿತ್ರ ಇದಾಗಿದೆ. ನಮ್ಮ ಸುತ್ತ ಕಾಲೇಳೆಯುವ, ಹೊಟ್ಟೆಕಿಚ್ಚು ಪಡುವ ಹಾಗೂ ಬೆನ್ನುತಟ್ಟಿ ಪ್ರೋತ್ಸಾಹಿಸುವ ಜನರು ಇರುತ್ತಾರೆ. ಅದೆಲ್ಲವನ್ನು ಮೀರಿ ಜೀವನದಲ್ಲಿ ಎತ್ತರಕ್ಕೆ ಹೇಗೆ ಬೆಳೆಯಬಹುದು ಎನ್ನುವಕ್ಕೆ ಈ ಚಿತ್ರ ಉತ್ತಮ ನಿದರ್ಶನ. ಈ ಚಿತ್ರವನ್ನು ನಮ್ಮ ಮಹಿಳಾ ಕ್ಲಬ್ ಸ್ನೇಹಿತೆಯರು ಹಾಗೂ ನಮ್ಮ ಕುಟುಂಬದವರನ್ನು ಕರೆದುಕೊಂಡು ಬಂದು ಮತ್ತೊಮ್ಮೆ ನೋಡುತ್ತೇನೆ.

-ರಕ್ಷಿತಾ ಈಟಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರು, ಬಾಗಲಕೋಟೆ.

ಕೋಟ್…
ವಿಜಯಾನಂದ ಬಯೋಪಿಕ್‌ನ್ನು ವಿಶೇಷವಾಗಿ ಎಲ್ಲ ಯುವಕರು ಹಾಗೂ ಕಾಲೇಜು ವಿದ್ಯಾರ್ಥಿಗಳು ತಪ್ಪದೇ ನೋಡಬೇಕು. ಅವರಿಗೆ ಇದು ಖಂಡಿತ ಸ್ಪೂರ್ತಿದಾಯಕವಾಗುತ್ತದೆ. ಇದು ಕಾಲ್ಪನಿಕ ಚಿತ್ರವಲ್ಲ. ಡಾ.ವಿಜಯ ಸಂಕೇಶ್ವರ ಅವರ ಸಾಧನೆ ತಲೆಯಲ್ಲಿ ಇಟ್ಟುಕೊಂಡು ನೋಡಬೇಕು. ಕನ್ನಡದಲ್ಲಿ ಇದೊಂದು ದಾಖಲಾರ್ಹ ಬಯೋಪಿಕ. ಗಡಿ ಕಾಯುವ ಸೈನಿಕ, ಅನ್ನ ಕೊಡುವ ರೈತ ಹಾಗೂ ಉದ್ಯೋಗ ಕೊಡುವ ಉದ್ಯೋಗದಾತ ಆಧುನಿಕ ಭಾರತದ ದೇವರು. ಈ ಹಿನ್ನಲೆಯಲ್ಲಿ ಡಾ.ಸಂಕೇಶ್ವರ ಗ್ರೇಟ್. ಚಿತ್ರ ಬಹಳ ಅದ್ಬುತವಾಗಿ ಮೂಡಿಬಂದಿದೆ.
-ಡಾ.ದೇವರಾಜ ಪಾಟೀಲ ಚಿಕ್ಕಮಕ್ಕಳ ವೈದ್ಯರು, ಬಾಗಲಕೋಟೆ.

ಕೋಟ್…
ದೇಶದ ಕೆಲವೇ ಕೆಲವು ವ್ಯಕ್ತಿಗಳನ್ನು ಸಾಧನೆಯಲ್ಲಿ ನೋಡುತ್ತೇವೆ. ಆ ಸಾಲಿನಲ್ಲಿ ಡಾ.ವಿಜಯ ಸಂಕೇಶ್ವರ ಒಬ್ಬರು. ಇದು ಬರೀ ಚಿತ್ರವಲ್ಲ. ಸತ್ಯಘಟನೆ. ಉದ್ಯಮಿಯಾಗಬೇಕು ಎನ್ನುವ ಕನಸು ಹೊತ್ತವರಿಗೆ ಈ ಚಿತ್ರ ಆದರ್ಶವಾಗುತ್ತದೆ. ಯಾವುದ್ಯಾವುದೋ ಚಿತ್ರ ನೋಡಿ ಸಮಯ ಕಳೆಯುವುದಕ್ಕಿಂತ ಈ ಚಿತ್ರ ನೋಡಿದರೆ ಸಾಧನೆಗೆ ಹಾದಿ ಸಿಗುತ್ತದೆ. ನಾನು ಸಹ ನನ್ನ ಸ್ನೇಹಿತರ ಜೊತೆಗೂಡಿ ಮತ್ತೊಮ್ಮೆ ಚಿತ್ರ ವೀಕ್ಷಿಸುತ್ತೇನೆ. ಚಿತ್ರ ಎಲ್ಲ ವಿಭಾಗಗಳಲ್ಲೂ ಉತ್ತಮವಾಗಿ ಮೂಡಿ ಬಂದಿದೆ.
-ರಮೇಶ ಬದ್ನೂರ ವಕೀಲರು, ಬಾಗಲಕೋಟೆ.

ಕೋಟ್…
ಡಾ.ವಿಜಯ ಸಂಕೇಶ್ವರ ಜೀವನಾಧಾರಿತ ಚಲನಚಿತ್ರ ಉತ್ತಮವಾಗಿ ಮೂಡಿ ಬಂದಿದೆ. ಸಂಕೇಶ್ವರ ಅವರು ಹಲವು ಕ್ಷೇತ್ರಗಳಲ್ಲಿ ತಮ್ಮದೇ ಛಾಪು ಮೂಡಿಸಿ, ಲಕ್ಷಾಂತರ ಜನರ ಬದುಕಿಗೆ ಆಸರೆ ಯಾಗಿದ್ದರೆ. ಅವರ ಜೀವನಗಾಥೆ ಒಳಗೊಂಡಿರುವ ಈ ಚಿತ್ರವನ್ನು ರಾಜ್ಯದ ಜನರು ವೀಕ್ಷಿಸಿ, ಯಶಸ್ವಿಗೊಳಿಸಬೇಕು.
-ವಿಜಯ ಸುಲಾಖೆ ಆರ್.ಎಸ್.ಎಸ್.ಪ್ರಮುಖ, ಬಾಗಲಕೋಟೆ.

ಕೋಟ್…
ವಿಜಯಾನಂದ ಚಿತ್ರ ಚನ್ನಾಗಿದೆ. ಡಾ.ಸಂಕೇಶ್ವರ ಜೀವನ, ಸಾಧನೆ ಕುರಿತ ಚಿತ್ರ ಇದಾಗಿದೆ. ಅನೇಕರಿಗೆ ಪ್ರೇರಣೆ ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ. ಒಂದು ಲಾರಿಯಿಂದ ಆರಂಭಿಸಿ ಇವತ್ತು ಇಡೀ ದೇಶದಲ್ಲಿ ನಂಬರ ಒನ್ ಸ್ಥಾನದಲ್ಲಿ ಇದ್ದರೆ. ಲಕ್ಷಾಂತರ ಜನರಿಗೆ ಬದುಕಿಗೆ ಅನ್ನದಾತರು ಆಗಿದ್ದಾರೆ. ಅವರ ಬೆಳೆದು ಬಂದ ದಾರಿ ತಿಳಿದು, ಅದನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಲು ಈ ಚಿತ್ರ ಸಹಕಾರಿ.
-ಕೃಷ್ಣಾ ಅಂಬಿಗೇರ
ಕರೊಕೆ ಸಿಂಗರ, ಬಾಗಲಕೋಟೆ.