ಶ್ರೀರಂಗಪಟ್ಟಣ: ಶತಾಯುಷಿ ಶ್ರೀಮರಿದೇವರು ಶಿವಯೋಗಿ ಸ್ವಾಮೀಜಿ ಸ್ಮರಣಾರ್ಥ ಭಾರತೀಯ ಅಂಚೆ ಇಲಾಖೆ ವಿಶೇಷ ಲಕೋಟೆಯನ್ನು ಅವರ 130ನೇ ಜಯಂತಿಯಂದು ಹೊರತಂದಿರುವುದು ನಮಗೆ ಗುರುದೀಕ್ಷೆ ಸಿಕ್ಕಂತಾಗಿದೆ ಎಂದು ದಕ್ಷಿಣ ಕರ್ನಾಟಕ ವಲಯ ಸಹಾಯಕ ಅಂಚೆ ನಿರ್ದೇಶಕ ಎಂ.ನಾರಾಯಣ್ ಬಣ್ಣಿಸಿದರು.
ಪಟ್ಟಣದ ಪ್ರಧಾನ ಅಂಚೆ ಕಚೇರಿಯಲ್ಲಿ ಶನಿವಾರ ಅಂಚೆ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಚಂದ್ರವನದ ಪೀಠಾಧಿಪತಿ ತ್ರಿನೇತ್ರ ಮಹಂತ ಶಿವಯೋಗಿ ಶ್ರೀಗಳೊಂದಿಗೆ ವಿಶೇಷ ಅಂಚೆ ಲಕೋಟೆ ಬಿಡುಗಡೆಗೊಳಿಸಿ ಬಳಿಕ ಅವರು ಮಾತನಾಡಿದರು.
ಬೇಬಿ ಮಠದ ಶತಾಯುಷಿ ಮರಿದೇವರು ಶ್ರೀಗಳ ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಸೇವಾ ಕಾರ್ಯಗಳನ್ನು ಗುರುತಿಸಿ ಭಾರತೀಯ ಅಂಚೆ ಇಲಾಖೆಯ ಮಂಡ್ಯ ವಿಭಾಗದ ವತಿಯಿಂದ ವಿಶೇಷ ಲಕೋಟೆಯನ್ನು ತ್ರಿನೇತ್ರ ಶ್ರೀಗಳ ಸಮ್ಮುಖದಲ್ಲಿ ಬಿಡುಗಡೆಗೊಳಿಸಿರುವುದು ಸಾರ್ಥಕತೆ ತರಿಸಿದೆ. ಹಿರಿಯ ಶ್ರೀಗಳ ಸೇವಾ ಹಾದಿಯಲ್ಲಿ ಕಿರಿಯ ಶ್ರೀಗಳ ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯ ಮುಂದುವರಿದು ಗುರುಪರಂಪರೆಯ ಶ್ರೀರಕ್ಷೆ ಲಭಿಸಲಿ ಎಂದರು.
ಸಾನ್ನಿಧ್ಯ ವಹಿಸಿದ್ದ ಚಂದ್ರವನ ಆಶ್ರಮದ ಪೀಠಾಧಿಪತಿ ಡಾ.ತ್ರಿನೇತ್ರ ಮಹಾಂತ ಶಿವಯೋಗಿ ಶ್ರೀ ಮಾತನಾಡಿ, ಇಂದು ಹಿರಿಯ ಗುರುಗಳ 130ನೇ ಜಯಂತಿ ಜತೆಗೆ ನಮ್ಮ 25ನೇ ಪಟ್ಟಾಧಿಕಾರ ಮಹೋತ್ಸವ ಸುಸಂದರ್ಭ ಅತೀವ ಸಂತೋಷವನ್ನುಂಟು ಮಾಡಿದೆ. ಸಾಮಾಜಿಕ ಜಾಲತಾಣಗಳು ಹಾಗೂ ಆಧುನಿಕ ತಂತ್ರಜ್ಞಾನಗಳು ಬರುವ ಕಾಲಕ್ಕೂ ಮೊದಲು ಮನುಷ್ಯರ ನಡುವೆ ಅತ್ಯುತ್ತಮ ಗೌರವ ಹಾಗೂ ಮೌಲ್ಯಾಧಾರಿತ ಬಾಂಧವ್ಯಗಳನ್ನು ಬೆಸೆಯುವ ಹಾಗೂ ಸಂಬಂಧಗಳನ್ನು ಗಟ್ಟಿಗೊಳಿಸುವ ಕೆಲಸವನ್ನು ಭಾರತೀಯ ಅಂಚೆ ಇಲಾಖೆ ಶತಮಾನಗಳಿಂದ ನಡೆಸಿಕೊಂಡು ಬಂದಿರುವುದು ಹೆಮ್ಮೆ ತರಿಸಿದೆ. ಈ ಕಾರ್ಯ ಇನ್ನು ಅಭಿವೃದ್ಧಿಯೊಂದಿಗೆ ಮುಂದುವರಿಯಲಿ ಎಂದು ಶುಭಹಾರೈಸಿದರು.
ಅಧ್ಯಕ್ಷತೆಯನ್ನು ಮಂಡ್ಯ ವಿಭಾಗದ ಅಂಚೆ ಅಧೀಕ್ಷಕ ಎಂ.ಲೋಕನಾಥ್ ವಹಿಸಿದ್ದರು. ಚಂದ್ರವನ ಆಶ್ರಮದ ನಿರ್ದೇಶಕ ದಯಾನಂದ್, ಅಂಚೆ ಇಲಾಖೆಯ ಮಂಡ್ಯ ವಿಭಾಗದ ಎಎಸ್ಪಿಗಳಾದ ಗಜೇಂದ್ರ, ಹರಿಪ್ರಕಾಶ್, ಅಂಚೆ ನೌಕರರಾದ ನಾಗರಾಜು, ಭಾಸ್ಕರ್, ಶ್ರೀರಂಗಪಟ್ಟಣದ ಎ.ಆರ್.ಹರೀಶ್, ಸತೀಶ್‌ಕುಮಾರ್, ನಾಗರಾಜು, ಪೋಸ್ಟ್‌ಮಾಸ್ಟರ್ ಜಯ, ಅಂಚೆ ನೀರಿಕ್ಷಕರು ಶರತ್‌ಕುಮಾರ್, ನಟರಾಜು, ಮಾದೇಶ್ ಇತರರಿದ್ದರು.