ಜಿಲ್ಲೆ

ಕವಿ-ಕಲೆಯ ನಡುವಿನ ಭಾಂದವ್ಯ ಅಪರಿಮಿತ: ಕುವೆಂಪು ಪುತ್ರಿ ತಾರಿಣಿ ಚಿದಾನಂದಗೌಡ ಅಭಿಮತ

ಮೈಸೂರು: ಕವಿ ಮತ್ತು ಕಲೆಯ ನಡುವಿನ ಬಾಂಧವ್ಯ ಅಪರಿಮಿತವಾದದ್ದು. ಪರಿಸರವನ್ನು ನಂಬಿ ಬೆಳೆದರೆ ಮಾತ್ರವೇ ಮಾನವನ ಪಾರಂಪರಿಕ ನೆಲೆ ಸಾಧ್ಯ ಎಂಬುದು ಕುವೆಂಪು ಅವರ ಸಾರ್ವಕಾಲಿಕ ಅಭಿಮತವಾಗಿತ್ತು ಎಂದು ಕುವೆಂಪು ಪುತ್ರಿ ತಾರಿಣಿ ಚಿದಾನಂದಗೌಡ ಹೇಳಿದರು.
ನಗರದ ವಿ.ವಿ.ಮೊಹಲ್ಲಾದ ಚಿತ್ರಕಲಾ ಸಂಸ್ಥೆ ಆರ್ಟ್-ಆಲ್ಟರ್ನೇಟಿವ್‌ನಿಂದ ಇತ್ತೀಚೆಗೆ ಆಯೋಜಿಸಿದ್ದ ರಾಷ್ಟ್ರಕವಿ ಕುವೆಂಪು ಅವರ 119ನೇ ಜನ್ಮದಿನೋತ್ಸವ, ಚಿತ್ರಕಲಾ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಬಾಲ್ಯದಲ್ಲಿ ತಂದೆಯ ವಿಚಾರಧಾರೆಗಳಿಂದ ಪ್ರೇರೇಪಿತವಾದ ಸನ್ನಿವೇಶಗಳನ್ನು ವಿರಿಸಿದ್ದಲ್ಲದೆ, ಮುಂದಿನ ಜನಾಂಗ ಸಾಹಿತ್ಯದ ಅಭಿರುಚಿಯನ್ನು ಬೆಳೆಸಿಕೊಳ್ಳುವ ಮೂಲಕ ಬದುಕಿನಲ್ಲಿ ವ್ಯಕ್ತಿತ್ವದ ಪರಿವರ್ತನೆ ಹೊಂದಬೇಕು. ಅದು ಜೀವನದ ಪರಿಪೂರ್ಣತೆಗೆ ಸಾಧ್ಯವಾಗುತ್ತದೆ ಎಂದು ಹೇಳಿದರು.
ಹಿರಿಯ ವಿಜ್ಞಾನಿ ಡಾ.ಜಿ.ಪಾಂಡುರಂಗಮೂರ್ತಿ ಅವರು, ಕುವೆಂಪು ಜೀವನ ಚರಿತ್ರೆ: ಸಂಕ್ಷಿಪ್ತ ನೋಟದ ಕುರಿತು ಪ್ರವಚನ ನೀಡಿ, ರಾಷ್ಟ್ರಕವಿ ಕುವೆಂಪು ವೈಚಾರಿಕತೆಯ ಬೀಜ ಬಿತ್ತಿ ವಿಶ್ವಮಾನವ ಸಂದೇಶ ಸಾರಿದ್ದಾರೆ ಎಂದು ಹೇಳಿದರು.
ಕುವೆಂಪು ಅವರು ಬರೆಯದ ಸಾಹಿತ್ಯದ ಪ್ರಕಾರವಿಲ್ಲ. ಕನ್ನಡ ಸಾಹಿತ್ಯಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಡುವ ಮೂಲಕ ಕನ್ನಡವನ್ನು ಸಾಹಿತ್ಯ ಲೋಕದಲ್ಲಿ ಶ್ರೀಮಂತಗೊಳಿಸಿದರು ಎಂದು ಬಣ್ಣಿಸಿದರು.
ವಿಶ್ರಾಂತ ಕುಲಪತಿ ಡಾ.ಕೆ.ಚಿದಾನಂದಗೌಡ ಮಾತನಾಡಿ, ಕುವೆಂಪು ಅವರ ವಿಶ್ವಮಾನವ ಸಂದೇಶ ಸಾರ್ವಕಾಲಿಕ ಮತ್ತು ಪ್ರಾಪಂಚಿಕವಾದದ್ದು. ಜೀವನದಲ್ಲಿ ಯಾವುದೇ ಸಾಧನೆ ಮಾಡಿದರೂ ಅದನ್ನು ಮಾನವ ಕಲ್ಯಾಣಕ್ಕೆ ವಿನಿಯೋಗಿಸುವ ಪ್ರಾಮಾಣಿಕತೆಯೇ ಮಾನವ ವಿಶ್ವಮಾನವನಾಗುವ ಪ್ರಕಾರ ಎಂದು ವ್ಯಾಖ್ಯಾನಿಸಿದರು.
ಮೈಸೂರು ಗ್ರಾಹಕರ ಪರಿಷತ್ ಸಂಸ್ಥಾಪಕ ಸಂಚಾಲಕ ಡಾ.ಭಾಮೀ ವಿ. ಶೆಣೈ ಮಾತನಾಡಿ, ಮಕ್ಕಳಿಗೆ ಮೊಬೈಲ್ ಕೊಡುವುದನ್ನು ನಿರ್ಬಂಧಿಸಿ. ಅದರಲ್ಲೂ ವಿದ್ಯಾರ್ಥಿಗಳು ಮೊಬೈಲ್‌ಗೆ ದಾಸರಾಗಿ, ಅದರಿಂದ ಸದುಪಯೋಗ ಪಡೆಯುವುದಕ್ಕಿಂತ ಅಡ್ಡದಾರಿ ಹಿಡಿಯುವುದೇ ಹೆಚ್ಚಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಆರೋಗ್ಯದ ಮೇಲೂ ಮೊಬೈಲ್ ಗಂಭೀರ ಪರಿಣಾಮ ಬೀರಿ ಮಾನಸೀಕ ಸ್ತಿಮಿತ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಮುಂದೆ ಇದು ಸಮಾಜದ ಒಟ್ಟು ಪ್ರಗತಿಯ ಮೇಲೆ ಋಣಾತ್ಮಕ ಪರಿಣಾಮ ಉಂಟುಮಾಡುತ್ತದೆ ಎಂದು ಎಚ್ಚರಿಸಿದರು.
ವಿಶ್ವಮಾನವ ಕುವೆಂಪು ಲಯನ್ಸ್ ಸಂಸ್ಥೆ ಕಾರ್ಯದರ್ಶಿ ಡಿ.ವಿ.ದಯಾನಂದ ಸಾಗರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕುವೆಂಪು ಅವರ ಬದುಕು ಮತ್ತು ಕೊಡುಗೆಗಳು ಮುಂದಿನ ಜನಾಂಗಕ್ಕೆ ತಲುಪಿಸುವ ನಿಟ್ಟಿನಲ್ಲಿ ನಾವು ನಿರಂತರ ಸಾಗಬೇಕಾಗಿದೆ ಹಾಗೂ ಇದು ನಮ್ಮ ಕರ್ತವ್ಯ ಕೂಡ ಎಂದು ಹೇಳಿ ವಿದ್ಯಾರ್ಥಿಗಳಿಗೆ ಶುಭಾಶಯ ಕೋರಿದರು.
ಚಿತ್ರಕಲಾ ತರಬೇತುದಾರ ಮೊಹಮ್ಮದ್‌ಖಾನ್, ಎನ್‌ಸಿಸಿ-2023ರ ರಾಷ್ಟ್ರೀಯ ಯುವ ಸೇನಾದಳದ ರಕ್ಷಾಮಂತ್ರಿ ಪದಕ ವಿಜೇತೆ ಎಂ.ಕಲ್ಪನಾ ಕುಟ್ಟಪ್ಪ ಇತರರು ಇದ್ದರು.