ಜಿಲ್ಲೆ

ಬೆಳಗಾವಿ, ಕಲುಬುರಗಿ ಪೀಠಕ್ಕೆ ಸಿಬ್ಬಂದಿ ನೇಮಕ ಪ್ರಕ್ರಿಯೆ ನಡೆದಿದೆ, ಸಚಿವ ಮುನಿಯಪ್ಪ

ಬೆಳಗಾವಿ: ಬೆಳಗಾವಿಯಲ್ಲಿ ಉದ್ಘಾಟನೆ ಮಾಡಿರುವ ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಕಾಯಂ ಸಂಚಾರಿ ಪೀಠಕ್ಕೆ ಅಗತ್ಯ ಸಿಬ್ಬಂದಿ, ಅಧಿಕಾರಿಗಳ ನೇಮಿಸುವ ಪ್ರಕ್ರಿಯೆ ನಡೆದಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.

ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಗತ್ಯ ಸಿಬ್ಬಂದಿ ನೇಮಕ ಆಗುವವರೆಗೂ ವಿಡಿಯೋ ಸಂವಾದದ ಮೂಲಕ ಕಲಾಪಗಳನ್ನು ನಡೆಸಲಾಗುತ್ತದೆ. ಗ್ರಾಹಕರಿಗೆ ಪರಿಹಾರ ದೊರಕಿಸುವ ಸಲುವಾಗಿ ಪ್ರತಿ ತಿಂಗಳು ಎರಡು ಬಾರಿ ಲೋಕ ಅದಾಲತ್ ನಡೆಸಲು ತೀರ್ಮಾನಿಸಲಾಗಿದೆ. ಬೆಳಗಾವಿ ಮತ್ತು ಕಲುಬುರಗಿ ಪೀಠಕ್ಕೆ 12 ಹುದ್ದೆಗಳೊಂದಿಗೆ ಹೆಚ್ಚುವರಿಯಾಗಿ 10 ಹುದ್ದೆಗಳನ್ನು ಅಗತ್ಯವಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

ದೂರಗಳ ಪರಿಹಾರದ ಕ್ರಮಕ್ಕಾಗಿ 5 ಲಕ್ಷದಿಂದ 10 ಲಕ್ಷ ರೂ. ವರೆಗಿನ ದೂರಿಗೆ ಅರ್ಜಿ ಶುಲ್ಕ 200 ರೂ. ವಿಧಿಸಲಾಗಿದೆ. 20ರಿಂದ50 ಲಕ್ಷ ರೂ. ಸಂಬಂಧಿಸಿದ ದೂರಿಗೆ ಅರ್ಜಿ ಶುಲ್ಕ 1000 ರೂ. ನಿಗದಿಪಡಿಸಲಾಗಿದೆ. 2 ಕೋಟಿ ರೂ.ನಿಂದ 10 ಕೋಟಿ ರೂ.ವರೆಗಿನ ದೂರಿಗೆ 3ರಿಂದ 7,500 ರೂ. ಅರ್ಜಿ ಶುಲ್ಕ ವಿಧಿಸಲಾಗಿದೆ ಎಂದು ಮಾಹಿತಿ ನೀಡಿದರು. ಈ ಭಾಗದ ಗ್ರಾಹಕರು ನ್ಯಾಯಕ್ಕಾಗಿ ಬೆಂಗಳೂರಿನ ಆಯೋಗದ ಪೀಠಕ್ಕೆ ಅಲೆದಾಡುವುದನ್ನು ತಪ್ಪಿಸಲು ಬೆಳಗಾವಿಯಲ್ಲಿ ಕಾಯಂ ಪೀಠ ಸ್ಥಾಪಿಸಲಾಗಿದೆ. ಮುಂದಿನ ದಿನಗಳಲ್ಲಿ ಅಗತ್ಯ ಮೂಲ ಸೌಲಭ್ಯ ಕಲ್ಪಿಸುತ್ತೇವೆ ಎಂದರು.

ರಾಜ್ಯದಲ್ಲಿ 13.44 ಲಕ್ಷ ಅರ್ಹ ಪಡಿತರದಾರರು ಕಳೆದ ಆರು ತಿಂಗಳಿನಿಂದ ಪಡಿತರ ಪಡೆದಿಲ್ಲ. ಯಾವುದೇ ಕಾರಣಕ್ಕೂ ಇಂತವರ ಪಡಿತರ ಚೀಟಿ ರದ್ದು ಪಡಿಸುವುದಿಲ್ಲ. ಯಾವಾಗ ಬೇಕಾದರೂ ಬಂದು ಪಡಿತರ ಪಡೆಯಬಹುದು ಎಂದು ತಿಳಿಸಿದರು.