ಬೆಂಗಳೂರು: ನಯನ ಸಭಾಂಗಣದಲ್ಲಿ ಇತ್ತೀಚೆಗೆ ಪ್ರದರ್ಶನಗೊಂಡ ನಟರಾಜ ನಾಟಕ ನೆರೆದ ರಂಗಾಸಕ್ತರ ಗಮನ ಸೆಳೆಯಿತು. ಮಾಡದ ಕೊಲೆಗಾಗಿ ಜೈಲು ಸೇರುವ ಕಥಾನಾಯಕನ ಬದುಕಿನ ವಿವಿಧ ಮಜಲುಗಳು, ಸಿದ್ಧಾಂತವನ್ನು ಮೈಗೂಡಿಸಿಕೊಂಡು ಬೆಳೆದ ವ್ಯಕ್ತಿ ರಾಜಕೀಯ ಪ್ರವೇಶಿಸಿದ ನಂತರ ಅನಿವಾರ್ಯವಾಗಿ ವ್ಯವಸ್ಥೆಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ವೈರುಧ್ಯವನ್ನು ಎಳೆಎಳೆಯಾಗಿ ಕಟ್ಟಿಕೊಟ್ಟಿದೆ ನಾಟಕ ನಟರಾಜ.
ಪಂಪ ಸಾಂಸ್ಕೃತಿಕ ಮತ್ತು ಸಾಮಾಜಿಕ ತಂಡದ ಕಲಾವಿದರು ಪ್ರಸ್ತುತಪಡಿಸಿದ ನಾಟಕದ ರಚನೆ ಮತ್ತು ನಿರ್ದೇಶನ ಆರ್.ವೆಂಕಟರಾಜು, ಸಂಗೀತ ಗಜಾನನ ನಾಯಕ್, ಮೇಕಪ್ ನ್ಯಾಷನಲ್ ದೇವು ನಿರ್ವಹಿಸಿದ್ದರು.
ವಿಶ್ವ ಪತ್ರಿಕಾ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ವಿಚಾರ ಸಂಕಿರಣ ಮತ್ತು ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್ ಮತ್ತಿತರರು ಪಾಲ್ಗೊಂಡಿದ್ದರು.