ಜಿಲ್ಲೆ

ಅಪಘಾತಕ್ಕೆ ಚಾಲಕರ ಅಜಾಗರೂಕತೆ, ಪೊಲೀಸರ ಅಲಭ್ಯತೆ ಕಾರಣ

ಮಡಿಕೇರಿ: ಇತ್ತೀಚಿನ ದಿನಗಳಲ್ಲಿ ಮಡಿಕೇರಿ ನಗರದ ವೃತ್ತಗಳಲ್ಲಿ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದಕ್ಕೆ ಕೆಎಸ್‌ಆರ್‌ಟಿಸಿ ಬಸ್ ಚಾಲಕರ ಅಜಾಗರೂಕತೆ ಮತ್ತು ಸಂಚಾರಿ ಪೊಲೀಸರ ಅಲಭ್ಯತೆ ಕಾರಣವಾಗಿದೆ ಎಂದು ಕೊಡಗು ರಕ್ಷಣಾ ವೇದಿಕೆ ಆರೋಪಿಸಿದೆ.


ಬುಧವಾರ ನಗರದ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ವೃತ್ತಕ್ಕೆ ಕೆಎಸ್‌ಆರ್‌ಟಿಸಿ ಬಸ್ ಮತ್ತೆ ಡಿಕ್ಕಿಯಾಗಿ ಹಾನಿಯಾಗಿರುವ ಕುರಿತು ಪ್ರತಿಕ್ರಿಯೆ ನೀಡಿದ ಕೊರವೇ ಅಧ್ಯಕ್ಷ ಅಚ್ಚಂಡೀರ ಪವನ್ ಪೆಮ್ಮಯ್ಯ, ಕೆಎಸ್‌ಆರ್‌ಟಿಸಿ ಮತ್ತು ಪೊಲೀಸ್ ಇಲಾಖೆ ನಿರ್ಲಕ್ಷ್ಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.


ಕೆಎಸ್‌ಆರ್‌ಟಿಸಿ ಯಲ್ಲಿ ನುರಿತ ಖಾಯಂ ಚಾಲಕರ ಕೊರತೆ ಎದುರಾಗಿರುವ ಕಾರಣ ಗುತ್ತಿಗೆ ಆಧಾರದಲ್ಲಿ ಚಾಲಕರನ್ನು ನೇಮಿಸಿಕೊಳ್ಳಲಾಗುತ್ತಿದೆ. ಬಸ್ ಚಲಾಯಿಸಿ ಅನುಭವವಿಲ್ಲದ ಹೊರ ಜಿಲ್ಲೆಯ ಚಾಲಕರು ಬೆಟ್ಟ ಗುಡ್ಡ, ತಿರುವು ಪ್ರದೇಶದ ಕೊಡಗಿನಲ್ಲಿ ಅಪಘಾತಗಳಿಗೆ ಕಾರಣರಾಗುತ್ತಿದ್ದಾರೆ. ಇತ್ತೀಚೆಗೆ ಸೂರ್ಲಬ್ಬಿಯಲ್ಲಿ ಬಸ್ ಅಪಘಾತಕ್ಕೀಡಾಗಿದ್ದು, ಅದೃಷ್ಟವಶಾತ್ ದೊಡ್ಡ ಅನಾಹುತವೊಂದು ತಪ್ಪಿದೆ. ಮಡಿಕೇರಿ ನಗರದ ಜನರಲ್ ತಿಮ್ಮಯ್ಯ ವೃತ್ತ ಮತ್ತು ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ವೃತ್ತಕ್ಕೆ ಬಸ್ ಡಿಕ್ಕಿಯಾಗಿ ಹಾನಿಗೀಡಾಗಿದೆ.


ವೃತ್ತಗಳಿಗೆ ಯಾವುದೇ ವಾಹನಗಳಿಂದ ಹಾನಿಯಾಗುತ್ತಿಲ್ಲ. ಕೆಎಸ್‌ಆರ್‌ಟಿಸಿ ಬಸ್‌ಗಳಿಂದ ಮಾತ್ರ ಈ ರೀತಿಯ ಘಟನೆ ನಡೆಯುತ್ತಿದೆ. ಬುಧವಾರ ಮತ್ತೆ ದೇವಯ್ಯ ವೃತ್ತಕ್ಕೆ ಬಸ್ ಡಿಕ್ಕಿಯಾಗಿ ಹಾನಿಯಾಗಿದೆ. ಕೆಎಸ್‌ಆರ್‌ಟಿಸಿ ತನ್ನ ನಿರ್ಲಕ್ಷ್ಯ ಮನೋಭಾವದಿಂದ ಹೊರ ಬಂದು ಅನುಭವೀ ಚಾಲಕರನ್ನು ನೇಮಿಸಿಕೊಳ್ಳುವುದು ಸೂಕ್ತ. ಇಲ್ಲದಿದ್ದಲ್ಲಿ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆಗಳಿದೆ ಎಂದು ಪವನ್ ಪೆಮ್ಮಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.


ಕೆಎಸ್‌ಆರ್‌ಟಿಸಿಯ ನ್ಯೂನತೆಗಳ ಬಗ್ಗೆ ಪ್ರಾದೇಶಿಕ ಸಾರಿಗೆ ಇಲಾಖೆ ಕೂಡ ಗಮನ ಹರಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.


ಪೊಲೀಸರ ಅಲಭ್ಯತೆ: ಮಡಿಕೇರಿ ನಗರದಲ್ಲಿ ದಿನದಿಂದ ದಿನಕ್ಕೆ ವಾಹನದಟ್ಟಣೆ ಹೆಚ್ಚಾಗುತ್ತಿದೆ. ಪ್ರವಾಸಿಗರ ವಾಹನಗಳಿಂದ ನಿತ್ಯ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಶಾಲಾ ವಿದ್ಯಾರ್ಥಿಗಳು ಹಾಗೂ ವಯೋವೃದ್ಧರು ನಗರದ ರಸ್ತೆಗಳಲ್ಲಿ ಆತಂಕದಿಂದಲೇ ಸಂಚರಿಸಬೇಕಾದ ಪರಿಸ್ಥಿತಿ ಇದೆ. ಆದರೆ ವಾಹನದಟ್ಟಣೆಯನ್ನು ನಿಯಂತ್ರಿಸಬೇಕಾದ ನಗರ ಸಂಚಾರಿ ಪೊಲೀಸರು ಅನೇಕ ಸಂದರ್ಭಗಳಲ್ಲಿ ಪ್ರಮುಖ ವೃತ್ತಗಳಲ್ಲಿ ಲಭ್ಯವಿರುವುದಿಲ್ಲ. ನಗರದಲ್ಲಿ ಫೀ.ಮಾ.ಕಾರ್ಯಪ್ಪ ವೃತ್ತ, ಜನರಲ್ ತಿಮ್ಮಯ್ಯ ವೃತ್ತ, ಮಂಗೇರಿರ ಮುತ್ತಣ್ಣ ವೃತ್ತ, ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ವೃತ್ತ ಮತ್ತು ಇಂದಿರಾ ಗಾಂಧಿ ವೃತ್ತಗಳಿಗೆ. ಇಲ್ಲಿ ವಾಹನಗಳನ್ನು ನಿಯಂತ್ರಿಸುವುದು ಅಗತ್ಯವಾಗಿದೆ ಎಂದು ತಿಳಿಸಿದ್ದಾರೆ.


ಈ ಹಿಂದಿನ ವರ್ಷಗಳಲ್ಲಿ ಸಂಚಾರಿ ಪೊಲೀಸರು ವೃತ್ತಗಳ ಬಳಿಯೇ ಬೆಳಗ್ಗೆಯಿಂದ ಸಂಜೆಯವರೆಗೆ ಕರ್ತವ್ಯ ನಿರ್ವಹಿಸುತ್ತಿದ್ದರು ಮತ್ತು ವಾಹನಗಳನ್ನು ನಿಯಂತ್ರಿಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಇದು ಕಂಡು ಬರುತ್ತಿಲ್ಲ, ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ವೃತ್ತದ ಬಳಿ ಸಂಚಾರಿ ಪೊಲೀಸರು ಕರ್ತವ್ಯದಲ್ಲಿದಿದ್ದರೆ ಅಪಘಾತ ಸಂಭವಿಸುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.


ಪೊಲೀಸ್ ಇಲಾಖೆ ಕೂಡ ಎಚ್ಚೆತ್ತುಕೊಂಡು ನಗರದ ಪ್ರತಿ ವೃತ್ತಗಳಲ್ಲಿ ಬೆಳಗ್ಗೆ ೬ ಗಂಟೆಯಿಂದ ರಾತ್ರಿ ೯ ಗಂಟೆಯವರೆಗೆ ಕನಿಷ್ಠ ತಲಾ ಇಬ್ಬರು ಸಂಚಾರಿ ಪೊಲೀಸರನ್ನಾದರು ನಿಯೋಜಿಸಬೇಕೆಂದು ಪವನ್ ಪೆಮ್ಮಯ್ಯ ಒತ್ತಾಯಿಸಿದ್ದಾರೆ.’