ಜಿಲ್ಲೆ

ಲಿಂಗ ತಾರತಮ್ಯ ದೂರವಾದರೆ ಸ್ವಾತಂತ್ರ್ಯಕ್ಕೆ ನಿಜವಾದ ಅರ್ಥ

ರಟ್ಟಿಹಳ್ಳಿ: ಮಹಿಳೆ ಹಾಗೂ ಪುರುಷರ ನಡುವೆ ಸಮಾನತೆ ಹಾಗೂ ಇಬ್ಬರಿಗೂ ಸೂಕ್ತ ಸ್ಥಾನಮಾನ ದೊರಕಿದಾಗ ಮಾತ್ರ ಸ್ವಾತಂತ್ರ್ಯ ಅರ್ಥಪೂರ್ಣವಾಗುತ್ತದೆ ಎಂದು ಮಾಜಿ ಸಭಾಪತಿ ಕಾಗೋಡು ತಿಮ್ಮಪ್ಪ ಅವರು ಹೇಳಿದರು.

ಪಟ್ಟಣದ ಪ್ರಿಯದರ್ಶಿನಿ ವಿದ್ಯಾಸಂಸ್ಥೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ರಥಮ ಪಿ.ಯುಸಿ ವಿದ್ಯಾರ್ಥಿಗಳ ಸ್ವಾಗತ ಹಾಗೂ ಅಂತಿಮ ವರ್ಷದ ಬಿ.ಎ., ಬಿ.ಕಾಂ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ದೇವರಾಜ ಅರಸು ಮುಖ್ಯಮಂತ್ರಿ ಇರುವ ವೇಳೆ ನಾನು ನಡೆಸಿದ ಹೋರಾಟದ ಫಲವಾಗಿ ಭೂಸುಧಾರಣೆ ಕಾಯ್ದೆ ಜಾರಿಗೆ ಬಂದಿತ್ತು. ಇದರಿಂದ ಜೀತ ಪದ್ಧತಿ ನಿಮೂಲನೆಯಾಯಿತು ಎಂದರು.

ತಂದೆ ತಾಯಿಯ ಆಸ್ತಿಯಲ್ಲಿ ಗಂಡು ಮಕ್ಕಳಿಗೆ ಸರಿಸಮಾನವಾಗಿ ಹೆಣ್ಣು ಮಕ್ಕಳಿಗೂ ಪಾಲು ಸಿಗುವಂತಾಗಬೇಕು ಎಂಬುದು ನನ್ನನಿಲುವಾಗಿತ್ತು ಎಂದರು.

ಉಪಸಭಾಪತಿ ರುದ್ರಪ್ಪ ಲಮಾಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿಧಾನಸಭೆಯ ಸಭಾಪತಿಗಳಾಗಿ ಉತ್ತಮವಾದ ಸೇವೆಯನ್ನು ಸಲ್ಲಿಸಿದ ಹಿರಿಯ ಮತ್ತು ನಮಗೆ ಮಾರ್ಗದರ್ಶಕರು ಆಗಿರುವ ಕಾಗೋಡ ತಿಮ್ಮಪ್ಪನವರ ಸೇವೆಯ ಸ್ಮರಣೀಯವಾಗಿದೆ ಎಂದರು.

ಮಾಜಿ ಮುಖ್ಯ ಸಚೇತಕ ಡಿ.ಎಂ.ಸಾಲಿ ಅಧ್ಯಕ್ಷತೆವಹಿಸಿದ್ದರು.

ಶಾಸಕ ಯು.ಬಿ.ಬಣಕಾರ ಮಾತನಾಡಿ, ಕಾಗೋಡ ತಿಮ್ಮಪ್ಪ ಅವರ ಸೇವೆ ನಮಗೆ ದಾರಿದೀಪವಾಗಿದೆ, ಬಗರ್​ಹುಕುಂ ಹೋರಾಟಕ್ಕೆ ಅವರು ನ್ಯಾಯ ಸಲ್ಲಿಸಿದ್ದಾರೆ ಎಂದರು.

ಜಿ.ಪಂ.ಮಾಜಿ ಸದಸ್ಯ ಪಿ.ಡಿ.ಬಸನಗೌಡ್ರ, ಯು.ಎಂ.ಸಾಲಿ, ಪರಮೇಶಪ್ಪ ಕಟ್ಟೇಕಾರ, ಹಾವೇರಿ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಹನುಮಂತಗೌಢ ಭರಮಣ್ಣನವರ, ಅಶೋಕ ಹೆಡಿಯಾಳ, ಶೇಖಣ್ಣ ಅರಳೀಕಟ್ಟಿ, ಗ್ರಾ.ಪಂ.ಅಧ್ಯಕ್ಷೆ ಲತಾ ಸಜ್ಜನ, ಸಾಹಿತಿ ಡಾ.ನಿಂಗಪ್ಪ ಚಳಗೇರಿ, ಹನುಮಂತಣ್ಣ ಹರಗನಹಳ್ಳೀ, ಮಂಜುನಾಥ ಹರಿಜನ, ಎಚ್.ಎಸ್.ಬ್ಯಾಡಗೌಡ್ರ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಇದ್ದರು. ಪ್ರಾಚಾರ್ಯ ಎ.ಜಿ.ರಾಘವೇಂದ್ರ, ಸಿ.ಎಸ್. ಕಮ್ಮಾರ ಕಾರ್ಯಕ್ರಮ ನಿರ್ವಹಿಸಿದರು.