ಬೆಂಗಳೂರು: ಉಗ್ರರಿಗೂ ಮುಸ್ಲಿಮರಿಗೂ ಯಾವುದೇ ಸಂಬಂಧವಿಲ್ಲ. ಮುಸ್ಲಿಮರ ಬಗ್ಗೆ ಅಪಪ್ರಚಾರ, ಸಂಶಯದ ಬೀಜ ಬಿತ್ತಿರುವ ಪರಿಣಾಮ ನೈಜ ಗುರುತಿಸುವಿಕೆಯೇ ಮರೆಯಾಗಿದೆ ಎಂದು ಅಲ್ಪಸಂಖ್ಯಾತರ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಜಮಾಲ್ ಸಿದ್ದೀಖ್ ಬೇಸರ ವ್ಯಕ್ತಪಡಿಸಿದರು.
ನಗರದ ಖಾಸಗಿ ಹೋಟೆಲ್ವೊಂದರಲ್ಲಿ ನಡೆದ ಅಲ್ಪಸಂಖ್ಯಾತರ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ದೇಶ ಭಕ್ತಿ, ಅಭಿಮಾನ, ಭ್ರಾತೃತ್ವವನ್ನು ಇಸ್ಲಾಂ ಧರ್ಮ ಬೋಧಿಸಿದೆ. ಅದನ್ನೇ ಮುಸ್ಲಿಮರು ಅನುಸರಿಸುತ್ತಿದ್ದು, ನೈಜ ಗುರುತಿಸುವಿಕೆ ಇದಾಗಿದೆ. ಮುಸ್ಲಿಮರ ಮುಗ್ಧತೆಯೇ ಮುಳುವಾಗಿದ್ದು, ದೀರ್ಘಾವಧಿ ಆಡಳಿತ ನಡೆಸಿದ ಕಾಂಗ್ರೆಸ್ ದಿಕ್ಕು ತಪ್ಪಿಸುವ ಕೆಲಸ ಮಾಡಿದೆ. ಭಯ-ಭೀತಿ ನೆರಳಲ್ಲೇ ನಡೆಸಿಕೊಂಡು ಶೋಷಿತರಿಗಿಂತಲೂ ಕನಿಷ್ಠ ಬದುಕಿಗೆ ದೂಡಿದೆ. ಬಿಜೆಪಿಯು ಮುಸ್ಲಿಮರ ವಿರೋಧಿಯಲ್ಲ. ಆದರೆ ಕಾಂಗ್ರೆಸ್, ಸಮಾಜವಾದಿ ಪಾರ್ಟಿ, ಎನ್ಸಿಪಿ ಮತ್ತಿತರ ಪಕ್ಷಗಳು ಅಪನಂಬಿಕೆ ಹಾಗೂ ಸಂಶಯ ಹುಟ್ಟಿ ಹಾಕಿದವು. ಸಮುದಾಯದ ಅಭಿವೃದ್ಧಿ, ನಾಯಕತ್ವ ಬೆಳೆಸಲು ಪ್ರಯತ್ನಿಸಲಿಲ್ಲ ಎಂದು ಕಿಡಿಕಾರಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಚಿಂತನೆಯನ್ನು ಸಾಕಾರಗೊಳಿಸಲು ಪ್ರಯತ್ನಿಸುತ್ತಿದ್ದು, ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಬಿಜೆಪಿ ಗರಿಷ್ಠರ ಪ್ರಮಾಣದಲ್ಲಿ ಪ್ರಯತ್ನಿಸುತ್ತಿದೆ. ಸರ್ಕಾರದ ಉತ್ತಮ ಯೋಜನೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಿ, ಸಮಾಜದ ವಿಕಾಸಕ್ಕಾಗಿ ಎಲ್ಲರೂ ಶ್ರಮಿಸಬೇಕಾಗಿದೆ ಎಂದು ಕೋರಿದರು.
ಸಮಾಜದ ಶ್ರೇಯಸ್ಸಿಗಾಗಿ ಅರ್ಪಣಾ ಮನೋಭಾವದಿಂದ ಕೆಲಸ ಮಾಡಿದ ಕಟ್ಟಕಡೆಯ ಕಾರ್ಯಕರ್ತ ಬಿಜೆಪಿಯಲ್ಲಿ ನಾಯಕರಾಗಬಹುದು. ಬಿಜೆಪಿಯಲ್ಲಿ ಮಾತ್ರ ಇದು ಸಾಧ್ಯವಿದ್ದು, ಮೋದಿ ದೂರದೃಷ್ಟಿಯ ನಾಯಕನೆಂದು ವಿಶ್ವವೇ ಒಪ್ಪಿಕೊಂಡಿದೆ ಎಂದು ಸಿದ್ದೀಖ್ ಹೇಳಿದರು.
ರಾಷ್ಟ್ರೀಯ ಕಾರ್ಯದರ್ಶಿ ಸೈಯದ್ ಇಬ್ರಾಹಿಂ ಮಾತನಾಡಿ, ಮುಸ್ಲಿಮ್ ಕ್ರಿಶ್ಚಿಯನ್, ಹಿಂದು ಎಂಬ ಬೇಧ-ಭಾವ ಮಾಡದೆ ಕೇಂದ್ರ ಸರ್ಕಾರ ಕಾರ್ಯನಿರ್ವಹಿಸುತ್ತಿದ್ದು, ಸಮಾಜಕ್ಕೆ ಸೇವೆ ಸಲ್ಲಿಸುವವರನ್ನು ಗುರುತಿಸಿ ಪ್ರೋತ್ಸಾಹಿಸುತ್ತದೆ. ಕಾಳಜಿ, ಪ್ರಭಾವ ಬೆಳೆಸಿಕೊಂಡ ಕಾರ್ಯಕರ್ತರನ್ನು ಪಕ್ಷ ಗುರುತಿಸಿ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಗೋಹತ್ಯೆ ನಿಷೇಧ ಸ್ವಾಗತ
ಗೋ ಸಂಪತ್ತು ರಕ್ಷಣೆ, ಪೂಜ್ಯ ಭಾವನೆ ಗೌರವಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾ ಸ್ವಾಗತಿಸಿದೆ. ಜತೆಗೆ ಸಾವಿರಾರು ಬಡ ಕುಟುಂಬಗಳನ್ನು ವಂಚಿಸಿ, ಬೀದಿಪಾಲು ಮಾಡಿದ ಐಎಂಎ ಹಣಕಾಸು ಸಂಸ್ಥೆಯ ಹಗರಣ ಸಮಗ್ರ ತನಿಖೆಗೆ ಸರ್ಕಾರಕ್ಕೆ ಒತ್ತಾಯಿಸುವ ಮತ್ತೊಂದು ಗೊತ್ತುವಳಿ ಸ್ವೀಕರಿಸಿತು.
ಎಲ್ಲ ಭಾರತೀಯರು ಬಲಿಷ್ಠವಾಗಬೇಕು ಎಂದು ಪ್ರಧಾನಿ ಮೋದಿ ಬಯಸಿದ್ದು, ಅವರ ಧೀರೋದಾತ್ತ ನಾಯಕತ್ವದಲ್ಲಿ ಪಕ್ಷ ಹೆಜ್ಜೆ ಹಾಕುತ್ತಿದೆ. ಬಿಜೆಪಿ ಯಾವುದೇ ಧರ್ಮದ ವಿರೋಧಿಯಲ್ಲ. ಪ್ರಬಲ ರಾಷ್ಟ್ರ ರೂಪಿಸುವ ಉದ್ದೇಶ ದಿಂದ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಲಾಗಿದೆ. | ಡಾ.ಸಿ.ಎನ್.ಅಶ್ವತ್ಥ ನಾರಾಯಣ ಉನ್ನತ ಶಿಕ್ಷಣ ಸಚಿವ