ಮೈಸೂರು: ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಶತ ಶತಮಾನಗಳಿಂದ ಒಕ್ಕಲಿಗ ಸಮುದಾಯ ನಾಡನ್ನು ಆಳ್ವಿಕೆ ಮಾಡುತ್ತಾ ಬಂದಿದೆ. ಒಕ್ಕಲಿಗರಲ್ಲಿ ನಾಯಕತ್ವ ಗುಣ ಬಂದದ್ದು ಸ್ವಾತಂತ್ರೃ ಬಂದ ನಂತರದ ದಿನಗಳಿಂದಲ್ಲ, ಒಕ್ಕಲಿಗರ ಡಿಎನ್‌ಎನಲ್ಲಿಯೇ ನಾಯಕತ್ವದ ಗುಣ ಇದೆ. ಹಾಗಾಗಿ ಸಹಜವಾಗಿಯೇ ನಾಡನ್ನು ಮುನ್ನಡೆಸುವ ಶಕ್ತಿ ಸಮುದಾಯಕ್ಕೆ ಇದೆ ಎಂದರು.
ಅಖಿಲ ಕರ್ನಾಟಕ ಒಕ್ಕಲಿಗರ ಮಹಾಸಭಾ ವತಿಯಿಂದ ನಗರದ ಮಾನಸಗಂಗೋತ್ರಿಯ ರಾಣಿಬಹದ್ದೂರ್ ಸಭಾಂಗಣದಲ್ಲಿ ‘ನಾಡಪ್ರಭು ಕೆಂಪೇಗೌಡ ಮತ್ತು ಒಕ್ಕಲಿಗ ರಾಜಮನೆತನದ ಇತಿಹಾಸ’ ಕುರಿತು ಎರಡು ದಿನಗಳ ಕಾಲ ಹಮ್ಮಿಕೊಂಡ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದಲ್ಲಿ ಶನಿವಾರ ಪಾಲ್ಗೊಂಡು ಮಾತನಾಡಿದರು.
ಕೆಂಪೇಗೌಡರು ಒಂದು ಭಾಗದವರು, ಗಂಗರು ಮತ್ತೊಂದು ಭಾಗದವರು ಎಂಬ ಭಾವನೆ ಬೇಡ. ಅವರೆಲ್ಲರೂ ನಮ್ಮವರೇ. ಅದೇ ರೀತಿ ನಮ್ಮ ಸಮುದಾಯದವರು ನಾಮಧಾರಿ ಒಕ್ಕಲಿಗ, ಕುಂಚಿಟಿಗ ಸೇರಿದಂತೆ ಬೇರೆ ಬೇರೆ ಹೆಸರುಗಳಲ್ಲಿ ರಾಜ್ಯದ ವಿವಿಧೆಡೆ ಇದ್ದು, ಅವರೆಲ್ಲರೂ ಒಕ್ಕಲಿಗರು ಎಂಬ ಭಾವನೆ ಇರಲಿ. ನಮ್ಮ ಸಮುದಾಯದ ನಾಯಕರು ಹಾಗೂ ಅವರ ಸಾಧನೆಯ ಕುರಿತು ನಮ್ಮ ಸಮುದಾಯದವರಿಗೇ ಗೊತ್ತಿಲ್ಲ. ಬೆಂಗಳೂರನ್ನು ಕಟ್ಟಿದವರು ಕೆಂಪೇಗೌಡರು. ಸಾಹಿತ್ಯಕ್ಕೆ ದೊಡ್ಡ ಕೊಡುಗೆ ನೀಡಿದವರು ಕುವೆಂಪು. ವಿಧಾನ ಸೌಧ ನಿರ್ಮಾಣ ಮಾಡಿದ ಕೆಂಗಲ್ ಹನುಮಂತಯ್ಯ ಕೂಡ ನಮ್ಮವರೇ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಸಹ ನಮ್ಮವರೇ. ಇವರೆಲ್ಲರ ಸಾಧನೆ ಹಾಗೂ ಇತಿಹಾಸವನ್ನು ನಮ್ಮ ಯುವ ಸಮುದಾಯಕ್ಕೆ ತಿಳಿಸಿಕೊಡುವ ಪ್ರಯತ್ನ ಮಾಡಬೇಕು ಎಂದು ಕರೆ ನೀಡಿದರು.
ನಮ್ಮ ಸಮುದಾಯದ ಇತಿಹಾಸವನ್ನು ಯುವ ಸಮುದಾಯಕ್ಕೆ ತಿಳಿಸಿದರೆ ಸ್ವಾಭಿಮಾನ ಹಾಗೂ ಶಕ್ತಿ ಬರುತ್ತದೆ. ಈ ಶಕ್ತಿ ಹಾಗೂ ಸ್ವಾಭಿಮಾನದಿಂದ ನಮ್ಮ ಸಮುದಾಯ ಹಾಗೂ ದೇಶಕ್ಕೆ ಉಪಯೋಗವಾಗುತ್ತದೆ. ಈ ರೀತಿ ಎಲ್ಲ ಸಮುದಾಯಗಳು ಸ್ವಾಭಿಮಾನದಿಂದ ತಮ್ಮ ಶಕ್ತಿಯನ್ನು ಸಮರ್ಥವಾಗಿ ಬಳಸಿದರೆ ದೇಶ ಅಭಿವೃದ್ಧಿ ಹೊಂದುತ್ತದೆ. ಒಕ್ಕಲಿಗ ಸಮುದಾಯ ಕುರಿಗಳಲ್ಲ, ಸಿಂಹಗಳು. ನೀವು ಕುರಿಗಳಲ್ಲ ಸಿಂಹಗಳು ಎಂದು ತಿಳಿಸಲು ಇಂತಹ ಕಾರ್ಯಕ್ರಮದ ಅವಶ್ಯಕತೆ ಇದೆ ಎಂದು ಹೇಳಿದರು.
ವೇದಿಕೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ಶಾಸಕ ಎಲ್. ನಾಗೇಂದ್ರ, ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ಕಾಂಗ್ರೆಸ್ ಮುಖಂಡ ಹರೀಶ್ ಗೌಡ, ಸಂಘದ ಅಧ್ಯಕ್ಷ ಬೆಟ್ಟೇಗೌಡ, ಗೌರವಾಧ್ಯಕ್ಷ ಸಿ.ಪಿ. ಕೃಷ್ಣಕುಮಾರ್, ಗೌರವ ಸಲಹೆಗಾರರಾದ ದೇವೇಗೌಡ, ಡಾ.ಬಿ.ಎನ್. ರವೀಶ್, ಜೆಡಿಎಸ್ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಶ್ರೀನಿವಾಸ್ ಹಾಗೂ ಇತರರು ಇದ್ದರು.