ಬೆಂಗಳೂರು: ಕಾಂಗ್ರೆಸ್ ಮುಕ್ತ ಕರ್ನಾಟಕವೇ ಈ ಮೈತ್ರಿ ಉದ್ದೇಶ. ಎರಡೂ ಪಕ್ಷಗಳ ಉದ್ದೇಶ ಒಂದೇ, ಕಾಂಗ್ರೆಸ್ ವಿರೋಧಿ ನೀತಿ. ಹೀಗಾಗಿ ನಾವು ಒಂದಾಗಿದ್ದೇವೆ. ಒಗ್ಗಟ್ಟಾಗಿ ಚುನಾವಣೆ ಎದುರಿಸಿದ್ದೇವೆ ಎಂದು ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ಜೆ.ಪಿ.ಭವನದಲ್ಲಿ ಸಮನ್ವಯ ಸಮಿತಿ ಸಭೆ ಬಳಿಕ ಮಾತನಾಡಿದ ಅವರು, ದೇವೇಗೌಡರು ಮೋದಿ ಅವರು ಈ ಮೈತ್ರಿಗೆ ಕಾರಣರು ಎಂದರು.
ಸಮೃದ್ಧ ಕರ್ನಾಟಕ ನಿರ್ಮಾಣ ಈ ಮೈತ್ರಿಕೂಟದಿಂದ ಸಾಧ್ಯ. ಕಾಂಗ್ರೆಸ್ ಎದುರಿಸಲು ನಾವು ಒಂದಾಗಿದ್ದೇವೆ. ಕುಮಾರಸ್ವಾಮಿ ಅವರ ಪ್ರೀತಿಗೆ ನಾವು ಪೂರ್ಣವಾಗಿ ಸೋತಿದ್ದೇವೆ. ನಮ್ಮನ್ನೆಲ್ಲ ಪ್ರೀತಿಯಿಂದ ಕರೆದು ಮಾತನಾಡಿದ್ದಾರೆ. ಜನರು ಕಾರ್ಯಕರ್ತರು ನಮ್ಮನ್ನು ಒಪ್ಪಿದ್ದಾರೆ. ಮೊದಲ ಪರೀಕ್ಷೆಯಲ್ಲಿ ನಾವು ಪಾಸಾಗುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ವಿಫಲವಾಗಿದೆ. ಬರ ನಿರ್ವಹಣೆ, ಆರೋಗ್ಯ, ಮೂಲ ಸೌಕರ್ಯ ಕಲ್ಪಿಸುವಲ್ಲೂ ಈ ಸರ್ಕಾರ ವಿಫಲವಾಗಿದೆ. ಕೇವಲ ಒಂದು ಸಮುದಾಯವನ್ನು ತುಷ್ಟೀಕರಣ ಮಾಡುತ್ತಿದೆ. ಕೊಲೆ ಸುಲಿಗೆ, ಅತ್ಯಾಚಾರದಂತ ಘಟನೆಗಳು ನಿರಂತರವಾಗಿ ನಡೆಯುತ್ತಿದ್ದರೂ ಅದರ ಬಗ್ಗೆ ಮಾತನಾಡುತ್ತಿಲ್ಲ. ಕಾಂಗ್ರೆಸ್‌ನವರು ಭಂಡತನದವರು, ಅವರಿಗೆ ಸೂಕ್ಷ್ಮತೆಯೇ ಇಲ್ಲ. ಅವರ ಐವತ್ತು ವರ್ಷದ ಅನುಭವ ಬರೀ ಭಾಷಣದ ಹಾವಭಾವ ಸೀಮಿತವಾಗಿ ಸಮಾಜ ಒಡೆಯುವುದಕ್ಕೆ ಮಾತ್ರ ಮೀಸಲಾಗಿದೆ ಎಂದು ಡಾ.ಅಶ್ವತ್ಥನಾರಾಯಣ ದೂರಿದರು.