ಜಿಲ್ಲೆ

ಸಾರ್ವಜನಿಕರ ಸಮಸ್ಯೆಗೆ ಅಧಿಕಾರಿಗಳ ನಿರ್ಲಕ್ಷ್ಯ ಕಾರಣ

ಹುಬ್ಬಳ್ಳಿ: ಅಧಿಕಾರಿಗಳ ನಿರ್ಲಕ್ಷ್ಯಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಬೈಗುಳಗಳನ್ನು ಜನಪ್ರತಿನಿಧಿಗಳು ತಿನ್ನುವಂತಾಗಿದೆ. ಇಷ್ಟೆಲ್ಲ ಸಮಸ್ಯೆಗಳಿಗೆ ಅಧಿಕಾರಿಗಳಲ್ಲಿನ ಸಮನ್ವಯ ಕೊರತೆ ಕಾರಣ ಎಂದು ಶಾಸಕ ಮಹೇಶ ಟೆಂಗಿನಕಾಯಿ ಅಸಮಾಧಾನ ವ್ಯಕ್ತಪಡಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಏರ್ಪಡಿಸಿದ್ದ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ವಾರ್ಡ್ ನಂ. 39, 41 ಹಾಗೂ 46ರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಆರು ತಿಂಗಳಲ್ಲಿ ಮೂರು ಪ್ಯಾಕೇಜ್ ಅಭಿವೃದ್ಧಿ ಕಾಮಗಾರಿಗಳು ಅಂತಿಮ ಹಂತ ತಲುಪಿವೆ. ಇನ್ನೂ 5 ಪ್ಯಾಕೇಜ್ ಕಾಮಗಾರಿಗಳು ಸಣ್ಣ ಸಮಸ್ಯೆಗಳಿಂದ ಹಿನ್ನಡೆಯಾಗುತ್ತಿದೆ. ಮಹಾನಗರ ಪಾಲಿಕೆ, ಲೋಕೋಪಯೋಗಿ, ಎಲ್ ಆಂಡ್ ಟಿ ಹಾಗೂ ಕೆಯುಡಿಎಫ್​ಸಿ ಇಲಾಖೆ ಅಧಿಕಾರಿಗಳು, ಪಾಲಿಕೆ ಸದಸ್ಯರ ನೆರವಿನೊಂದಿಗೆ ಕೆಲಸ ಮಾಡಬೇಕು ಎಂದು ಸೂಚಿಸಿದರು.

ಪಾಲಿಕೆ ಸದಸ್ಯ ಸಂತೋಷ ಚವ್ಹಾಣ ಮಾತನಾಡಿ, ಅಶೋಕ ನಗರದಿಂದ ನೃಪತುಂಗ ಬೆಟ್ಟದ ಕಾಮಗಾರಿಗಳು ವರ್ಷಗಳೇ ಕಳೆದರೂ ಪೂರ್ಣಗೊಳ್ಳುತ್ತಿಲ್ಲ. ಸ್ಥಳೀಯರು ರಸ್ತೆಗಳ ಮೇಲೆ ಕಲ್ಲು ಇಟ್ಟು ಪ್ರತಿಭಟನೆ ಮಾಡುತ್ತಿದ್ದಾರೆ. ಅಪಘಾತಗಳು ನಡೆದು ವಾಹನ ಸವಾರರು ಗಾಯಗೊಂಡು ಆಸ್ಪತ್ರೆ ಸೇರುತ್ತಿದ್ದಾರೆ. ಧೂಳಿನಿಂದ ಉಸಿರಾಟ ಸಮಸ್ಯೆಯಾಗುತ್ತಿದೆ. ಒಂದು ಬಾರಿ ಆ ರಸ್ತೆಯಲ್ಲಿ ಅಲೆದಾಡಿದರೆ ಅಧಿಕಾರಿಗಳಿಗೆ ಸಮಸ್ಯೆ ಅರ್ಥವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಾಲಿಕೆ ಹಿರಿಯ ಸದಸ್ಯ ವೀರಣ ಸವಡಿ ಮಾತನಾಡಿ, ಕೆಂಪ್ಪಣ್ಣ ಕಲ್ಯಾಣ ಮಂಟಪದಿಂದ ಗೋಪನಕೊಪ್ಪದವರೆಗಿನ ರಸ್ತೆ ಕಾಮಗಾರಿಯು ಆಮೆ ಗತಿಯಲ್ಲಿ ಸಾಗುತ್ತಿದೆ. ಜನರು ನಿತ್ಯ ಶಾಪ ಹಾಕುತ್ತಿದ್ದಾರೆ. ಪಾಲಿಕೆ, ಲೋಕೋಪಯೋಗಿ ಹಾಗೂ ಎಲ್ ಆಂಡ್ ಟಿ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು ಎಂದರು.

ಸಾಮಾಜಿಕ ಕಾರ್ಯಕರ್ತರ ಸಿದ್ದು ಮೊಗಲಿಶೆಟ್ಟರ್, 39,41 ಹಾಗೂ 46ನೇ ವಾರ್ಡ್​ನಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ವೇಗ ಪಡೆಯುತ್ತಿಲ್ಲ ಎಂದು ದೂರಿದರು.

ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಸದಸ್ಯೆ ಸೀಮಾ ಮೊಗಲಿಶೆಟ್ಟರ್, ಬಿಜೆಪಿ ಜಿಲ್ಲಾ ವಕ್ತಾರ ರವಿ ನಾಯಕ, ಇತರ ಇಲಾಖೆಗಳ ಅಧಿಕಾರಿಗಳು ಇದ್ದರು.

ಮುಂದಿನ ಸಭೆ 25ಕ್ಕೆ: ಅಭಿವೃದ್ಧಿ ಕಾಮಗಾರಿ ಸಂಪೂರ್ಣ ಮಾಹಿತಿ ನನ್ನ ಬಳಿ ಇದೆ. ನ. 25ರಂದು ಮತ್ತೆ ಸಭೆ ನಡೆಸಲಾಗುವುದು. ಅಷ್ಟರೊಳಗೆ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಿರಬೇಕು ಎಂದು ಟೆಂಗಿನಕಾಯಿ ಸೂಚಿಸಿದರು. ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಅವರನ್ನು ಬದಲಿಸಬೇಕು ಎಂಬುವುದು ಸರಿಯಲ್ಲ. ವೈಯಕ್ತಿಕವಾಗಿ ಅವರನ್ನು ಟಾರ್ಗೆಟ್ ಮಾಡುವುದು ಸರಿಯಲ್ಲ. ಅಧಿಕಾರಿಗಳಿಗೂ ಒಂದು ಚೌಕಟ್ಟು ಇರುತ್ತದೆ ಎಂದರು.