ವಿಜಯಪುರದ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ವೃಕ್ಷಥಾನ್ ಹೆರಿಟೇಜ್ ರನ್ -2024ರ ಪೂರ್ವಭಾವಿ ಸಭೆ ನಡೆಯಿತು. ಜಿಲ್ಲಾಧಿಕಾರಿ ಟಿ.ಭೂಬಾಲನ್, ಸಿಇಒ ರಿಷಿ ಆನಂದ, ಎಎಸ್‌ಪಿ ಶಂಕರ ಮಾರಿಹಾಳ ಮತ್ತಿತರರಿದ್ದಾರೆ.  
ಜಿಲ್ಲೆ

ವೃಕ್ಷಥಾನ್ ಯಶಸ್ಸಿಗೆ ಸಾರ್ವಜನಿಕರ ಸಹಕಾರ ಅಗತ್ಯ; ಜಿಲ್ಲಾಧಿಕಾರಿ ಟಿ.ಭೂಬಾಲನ್

ವಿಜಯಪುರ: ಪರಿಸರ, ಪ್ರಾಚೀನ ಸ್ಮಾರಕ, ಆರೋಗ್ಯ ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಡಿ. 22ರಂದು ನಡೆಯಲಿರುವ ವೃಕ್ಷಥಾನ್ ಹೆರಿಟೇಜ್ ರನ್-2024ರ ಯಶಸ್ವಿಗೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಹೇಳಿದರು.

ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ವೃಕ್ಷಥಾನ್ ಹೆರಿಟೇಜ್ ರನ್ -2024ರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲಾಡಳಿತದ ಸಹಕಾರದೊಂದಿಗೆ ಕೋಟಿ ವೃಕ್ಷ ಅಭಿಯಾನ, ಸೊಸೈಟಿ ಪಾರ್ ಪ್ರೊಟೆಕ್ಷನ್ ಆಫ್ ಪ್ಲಾಂಟ್ ಆ್ಯಂಡ್ ಅನಿಮಲ್ಸ್, ನಗರಾಭಿವೃದ್ಧಿ ಪ್ರಾಧಿಕಾರ ವಿಜಯಪುರ, ಬಿಎಲ್‌ಡಿಇ ಅಸೋಷಿಯೇಶನ್, ಪ್ರವಾಸೋದ್ಯಮ ಇಲಾಖೆ, ಅರಣ್ಯ ಇಲಾಖೆ, ಸಿಆರ್‌ಡಿಎಸ್ ಫೌಂಡೇಷನ್, ಮಹಾನಗರ ಪಾಲಿಕೆ ವಿಜಯಪುರ ಹಾಗೂ ಮತ್ತಿತರ ಸಂಘ ಸಂಸ್ಥೆಗಳ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರ ಪಾಲ್ಗೊಳ್ಳುವಿಕೆಗೆ ನೋಂದಣಿ ಮಾಡುವ ಗುರಿ ಹೊಂದಬೇಕು ಎಂದು ಹೇಳಿದರು.

21 ಕಿಮೀ, 10ಕಿಮೀ, 5ಕಿಮೀ ಮ್ಯಾರಾಥಾನ್ ಓಟ ನಡೆಯಲಿದ್ದು, ಕ್ರಮವಾಗಿ 1,200ರೂ, 1,000ರೂ. ಹಾಗೂ 600 ರೂ.ಗಳು ನೋಂದಣಿ ಶುಲ್ಕವಾಗಿದ್ದು, ಪ್ರವಾಸೋದ್ಯಮ ಹಾಗೂ ಪರಿಸರ ಜಾಗೃತಿಯ ಕುರಿತಾದ ವೃಕ್ಷಥಾನ್ ಹೆರಿಟೇಜ್ ರನ್ ಕಾರ್ಯಕ್ರಮದ ಯಶಸ್ಸಿಗೆ ಶಾಲಾ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಗಳು ತಮ್ಮ ಅಧೀನದಲ್ಲಿರುವ ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮದ ಮಹತ್ವವನ್ನು ಪ್ರಚುರಪಡಿಸುವುದರ ಮೂಲಕ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಗೆ ಸಹಕರಿಸಬೇಕು ಎಂದು ಹೇಳಿದರು.

ತೋಟಗಾರಿಕೆ ಹಾಗೂ ಕೃಷಿ ಇಲಾಖೆಗಳು ರೈತ ಉತ್ಪಾದನ ಸಂಸ್ಥೆ, ಪ್ರಗತಿಪರ ರೈತರ ಗುಂಪುಗಳು, ತಾಲೂಕು ಹಾಗೂ ಗ್ರಾಮ ಮಟ್ಟದಲ್ಲಿಯೂ ಹೆರಿಟೇಜ್ ರನ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿ ಭಾಗವಹಿಸುವಂತೆ ಪ್ರೇರೇಪಿಸುವಲ್ಲಿ ಸಿದ್ಧತೆ ಮಾಡಿಕೊಳ್ಳಬೇಕು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸೈನಿಕ ಕಲ್ಯಾಣ ಇಲಾಖೆ ಹೆಚ್ಚಿನ ಸಂಖ್ಯೆಯಲ್ಲಿ ಯುವ ಜನರು ಪಾಲ್ಗೊಳಲು ಅಗತ್ಯ ಕ್ರಮವಹಿಸಬೇಕು. ಹೆಣ್ಣು ಮಕ್ಕಳ ನೋಂದಣಿಗೆ ಆದ್ಯತೆ ನೀಡಬೇಕು ಎಂದರು.

ಜಿಪಂ ಸಿಇಒ ರಿಷಿ ಆನಂದ ಮಾತನಾಡಿ, ಈ ನಿಟ್ಟಿನಲ್ಲಿ ಸಹಕಾರ ನೀಡುವುದಾಗಿ ತಿಳಿಸಿದರು.

ಸಚಿವ ಎಂ.ಬಿ. ಪಾಟೀಲರ ಪಿಆರ್‌ಒ ಡಾ. ಮಾಹಾಂತೇಶ ಬಿರಾದಾರ ಮಾತನಾಡಿ, ವಿಜಯಪುರದಲ್ಲಿ ಅರಣ್ಯ ಪ್ರದೇಶ ಕಡಿಮೆಯಿರುವುದು ಮನಗಂಡ ಜಿಲ್ಲಾ ಉಸ್ತಾವರಿ ಸಚಿವ ಡಾ. ಎಂ.ಬಿ. ಪಾಟೀಲರು ಕೋಟಿ ವೃಕ್ಷ ಅಭಿಯಾನದಡಿಯಲ್ಲಿ ಜಿಲ್ಲೆಯಲ್ಲಿ ಅರಣ್ಯೀಕರಣಕ್ಕೆ ಒತ್ತು ನೀಡಿದ ಫಲವಾಗಿ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಉದ್ಯಾನವನ, ಹಸಿರೀಕರಣ, ಅರಣ್ಯ ಪ್ರದೇಶಗಳು ವಿಸ್ತಾರಗೊಳ್ಳುತ್ತಿದೆ. ಮಮದಾಪೂರದ ಮೀಸಲು ಅರಣ್ಯ ಪ್ರದೇಶಕ್ಕೆ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಹೆಸರು ನಾಮಕರಣ ಮಾಡಿದ್ದು ಸಂತಸ ತಂದಿದೆ ಎಂದರು.

ಎಎಸ್‌ಪಿ ಶಂಕರ ಮಾರಿಹಾಳ, ಅರಣ್ಯಾಧಿಕಾರಿ ಶಿವಶರಣಯ್ಯ ಕೆ, ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ ಬಜಂತ್ರಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ರೂಪಾ. ಎಲ್, ಸಮಾಜಕಲ್ಯಾಣ ಇಲಾಖೆಯ ಉಪನಿರ್ದೇಶಕ ಪುಂಡಲಿಕ ಮಾನವರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ ದೈವಾಡಿ, ವೃಕ್ಷಥಾನ್ ಹೆರಿಟೇಜ್ ರನ್ ಸಂಚಾಲಕ ಮುರುಗೇಶ ಪಟ್ಟಣಶೆಟ್ಟಿ ಮತ್ತಿತರರಿದ್ದರು.