ಜಿಲ್ಲೆ

ಜಿಲ್ಲಾಧಿಕಾರಿ ಭರವಸೆ, ಪ್ರತಿಭಟನೆ ವಾಪಸ್

Haveri

ಬ್ಯಾಡಗಿ: ನಿವೇಶನ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಎರಡು ದಿನಗಳಿಂದ ಪುರಸಭೆ ಕಾರ್ಯಾಲಯ ಎದುರು ನಡೆಯುತ್ತಿದ್ದ ಪ್ರತಿಭಟನೆಯನ್ನು ಜಿಲ್ಲಾಧಿಕಾರಿ ದೂರವಾಣಿ ಮೂಲಕ ನೀಡಿದ ಭರವಸೆ ಮೇರೆಗೆ ವಾಪಸ್ ಪಡೆಯಲಾಗಿದೆ ಎಂದು ಭ್ರಷ್ಟಾಚಾರ ನಿಮೂಲನೆ ಜನ ಆಂದೋಲನ ಸಮಿತಿ ಸಂಚಾಲಕ ಮಲ್ಲೇಶಪ್ಪ ಚಿಕ್ಕಣ್ಣನವರ ಹೇಳಿದರು.

ಪ್ರತಿಭಟನೆ ಸ್ಥಳದಲ್ಲಿ ಮಾತನಾಡಿದ ಅವರು, ಎರಡು ದಿನಗಳಿಂದ ಭ್ರಷ್ಟಾಚಾರ ನಿಮೂಲನೆ ಜನ ಆಂದೋಲನ ಸಮಿತಿ ಕರವೇ ಕಾರ್ಯಕರ್ತರು ಹಾಗೂ ನಿವಾಸಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಹಿಂದಿನ ಪ್ರತಿಭಟನೆ ವೇಳೆ ತಹಸೀಲ್ದಾರ್, ಮುಖ್ಯಾಧಿಕಾರಿಗಳು ಅರ್ಹರಿಗೆ ನಿವೇಶನ ಹಕ್ಕುಪತ್ರ ನೀಡುವುದಾಗಿ ಭರವಸೆ ನೀಡಿದ್ದರೂ ಕಾರ್ಯಗತವಾಗಿಲ್ಲ. ಬಡಕುಟುಂಬಗಳು ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿ ಹಲವು ವರ್ಷ ಗತಿಸಿವೆ. ಮೂರು ವರ್ಷದ ಹಿಂದೆ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಈವರೆಗೂ ಹಕ್ಕುಪತ್ರ ನೀಡಿರಲಿಲ್ಲ. ಸ್ಥಳೀಯ ತಹಸೀಲ್ದಾರರ ಮೂಲಕ ಜಿಲ್ಲಾಧಿಕಾರಿ ದೂರವಾಣಿಯಲ್ಲಿ ಮಾತನಾಡಿ, ಡಿ. 19ರಂದು ನಡೆಯುವ ಸಾಮಾನ್ಯ ಸಭೆಯ ಅಜೆಂಡಾದಲ್ಲಿ ನಿವೇಶನ ಹಕ್ಕುಪತ್ರ ವಿಷಯ ಸೇರ್ಪಡೆಯಾಗಿದೆ. ಸಭೆಯಲ್ಲಿ ರ್ಚಚಿಸಿ ಮುಂದಿನ ಕ್ರಮ ಕೈಗೊಳ್ಳಲು ತಿಳಿಸಿದ ಹಿನ್ನೆಲೆಯಲ್ಲಿ ಪ್ರತಿಭಟನೆ ವಾಪಸ್ ಪಡೆಯಲಾಗಿದೆ ಎಂದರು.

ಪುರಸಭೆ ಮಾಜಿ ಸದಸ್ಯ ಮಂಜುನಾಥ ಭೋವಿ ಮಾತನಾಡಿ, ಬ್ಯಾಡಗಿಯಲ್ಲಿ ಹಲವು ವರ್ಷಗಳಿಂದ ಬಡವರಿಗೆ ನಿವೇಶನ ನೀಡಿಲ್ಲ. ಬಡವರು ಮನೆ ಬಾಡಿಗೆ ಹಣ ತುಂಬುವುದು ಹೊರೆಯಾಗಿದೆ. ಕೋವಿಡ್-19 ಅವಧಿಯಲ್ಲಿ ಬಡವರಿಗೆ ಕೂಲಿ ಕೆಲಸ ಸಿಗದೆ ಪರದಾಡುತ್ತಿದ್ದಾರೆ. ತೀವ್ರ ಸಂಕಷ್ಟದಲ್ಲಿರುವ ಅರ್ಹಕುಟುಂಬಗಳಿಗೆ ನಿವೇಶನ ಹಂಚಿಕೆ ಮಾಡುವಂತೆ ಒತ್ತಾಯಸಿ ಪ್ರತಿಭಟನೆ ಮಾಡಲಾಗುತ್ತಿದೆ. ಅಧಿಕಾರಿಗಳು ತಕ್ಷಣ ಕಾರ್ಯೋನ್ಮುಖರಾಗಿ ನ್ಯಾಯ ಒದಗಿಸಬೇಕಿದೆ. ನಿರ್ಲಕ್ಷಿಸಿದರೆ ಮುಂಬರುವ ದಿನಗಳಲ್ಲಿ ಹಕ್ಕುಪತ್ರ ವಿತರಣೆಗೆ ಆಗ್ರಹಿಸಿ ಹೋರಾಟ ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಸಿದರು.

ತಹಸೀಲ್ದಾರ್ ರವಿ ಕೊರಮರ ಅವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಭ್ರಷ್ಟಾಚಾರ ನಿಮೂಲನೆ ಜನ ಆಂದೋಲನ ಸಮಿತಿ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಪರೀಧಾಬಾನು ನದಿಮುಲ್ಲಾ, ಶಾಂತವ್ವ ಕುಸಗೂರು, ಜಮೀರಾಬಿ ತಾಳಿಕೋಟಿ, ಲಲಿತವ್ವ ಚಲವಾದಿ, ಶಯದ್ ಬೇಪಾರಿ, ಮಾಳವ್ವ ಚಿಕ್ಕಣ್ಣನವರ, ಜಯಮ್ಮ ಬ್ಯಾಡಗಿ ಇತರರಿದ್ದರು.