ರಬಕವಿ/ಬನಹಟ್ಟಿ: ಕಳೆದ 8 ದಿನಗಳಿಂದ ಮೂಲ ಸೌಲಭ್ಯಗಳಿಗಾಗಿ ನೇಕಾರರು ನಡೆಸುತ್ತಿರುವ ಹೋರಾಟಕ್ಕೆ ಜನಪ್ರತಿನಿಧಿಗಳ ಸ್ಪಂದನೆಯಿಲ್ಲದ ಕಾರಣ ತೀವ್ರ ಕೆಂಗಣ್ಣಿಗೆ ಕಾರಣವಾಗಿದೆ. 8ನೇ ದಿನ ಗುರುವಾರ ಸಂಜೆ ಪ್ರತಿಭಟನಾ ಸ್ಥಳದಿಂದ ರಸ್ತೆಗಿಳಿದ ಪ್ರತಿಭಟನಾಕಾರರು ಬನಹಟ್ಟಿ ಆಸಂಗಿ ರಸ್ತೆ ಮೇಲೆಯೇ ಅಡುಗೆ ತಯಾರಿಸಿ ಊಟ ಮಾಡಿ ಕೆಲಕಾಲ ರಸ್ತೆ ಬಂದ್ ಮಾಡಿದದರು.
ಮನೆ ಉತಾರ, ನಿವೇಶನ ಹಂಚಿಕೆ, ನಿರಂತರ ಉದ್ಯೋಗ ಹಾಗೂ ಮಾಸಾಶನ ಸೇರಿ ವಿವಿಧ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲವೆಂದು ನೇಕಾರರು ಬೀದಿಗೆ ಬಿದ್ದು ಹೋರಾಟ ನಡೆಸುತ್ತಿದ್ದಾರೆ.
ರಸ್ತೆ ಬಂದ್: ಬನಹಟ್ಟಿ-ಆಸಂಗಿ ರಸ್ತೆಯನ್ನು ಸಂಪೂರ್ಣ ಬಂದ್ ಮಾಡುವ ಮೂಲಕ ರಸ್ತೆ ಮೇಲೆಯೇ ಕುಳಿತು ಊಟ, ಉಪಾಹಾರ ಮಾಡುವ ಮೂಲಕ ಹೋರಾಟದ ಸ್ವರೂಪ ಬದಲಿಸಿರುವ ನೇಕಾರರು ಮುಂದಿನ ದಿನಗಳಲ್ಲಿ ಜಮಖಂಡಿ ಕುಡಚಿ ರಾಜ್ಯ ಹೆದ್ದಾರಿ ತಡೆಯುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಸುವರ್ಣ ಸೌಧ ಮುತ್ತಿಗೆ: ಬರುವ ಡಿ.10 ರಿಂದ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುವ ಚಳಿಗಾಲ ಅಧಿವೇಶನಕ್ಕೆ ನೇಕಾರರು ಮುತ್ತಿಗೆ ಹಾಕುವಲ್ಲಿ ಸಿದ್ಧತೆ ನಡೆಸಿದ್ದೇವೆ. ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ಕೈಬಿಡುವ ಪ್ರಶ್ನೆಯೇ ಇಲ್ಲವೆಂದು ನೇಕಾರ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ಟಿರಕಿ ಎಚ್ಚರಿಸಿದ್ದಾರೆ.
ಬಾರದ ಪ್ರತಿನಿಧಿ:8 ದಿನಗಳು ಕಳೆದರೂ ಯಾವೊಬ್ಬ ಜನಪ್ರತಿನಿಧಿ ಅಥವಾ ಅಧಿಕಾರಿಗಳು ನೇಕಾರರ ಸಮಸ್ಯೆ ಆಲಿಸಲು ಬಂದಿಲ್ಲ. ಜವಳಿ ಸಚಿವರು ಈ ಕುರಿತಾದ ಮಾಹಿತಿ ದೊರೆತರೂ ನಮಗೇನು ಸಂಬಂಧವಿಲ್ಲವೆಂಬ ವರ್ತನೆ ಖಂಡಿಸುತ್ತೇವೆಂದು ಹೋರಾಟಗಾರರು ಬೇಸರ ಹೊರಹಾಕಿದರು. ಕೂಗಳತೆಯಲ್ಲೇ ತೇರದಾಳ ಶಾಸಕ ಸಿದ್ದು ಸವದಿಯವರ ನಿವಾಸವಿದ್ದು, ನಿತ್ಯ ಇದೇ ರಸ್ತೆಯಲ್ಲಿಯೇ ಅವರ ಸಂಚಾರವಿದೆ. ಯಾವುದೇ ರೀತಿ ಸಮಸ್ಯೆ ಆಲಿಸದಿರುವುದು ನಾಚಿಗೇಡಿನ ಸಂಗತಿಯೆಂದು ಶಿವಲಿಂಗ ಟಿರಕಿ ಜನಪ್ರತಿನಿಧಿಗಳ ಕ್ರಮ ವಿರೋಧಿಸಿದರು.
ಮೈನುದ್ದಿನ್ ಮುಲ್ಲಾ, ಇತರರಿದ್ದರು.
ಯಾವುದೇ ಕಾರಣಕ್ಕೂ ಪ್ರತಿಭಟನೆ ಹಿಂಪಡೆಯುವದಿಲ್ಲ. ಕೈಮಗ್ಗ ನೇಕಾರರ ಸಮಸ್ಯೆ ಈಡೇರಿಸದಿದ್ದಲ್ಲಿ ಹೋರಾಟದ ಸ್ವರೂಪ ಬದಲಿಸಾಗುವುದು.
ಶಿವಲಿಂಗ ಟಿರಕಿ, ರಾಜ್ಯಾಧ್ಯಕ್ಷ, ನೇಕಾರ ಸೇವಾ ಸಂಘ.