ಜಿಲ್ಲೆ

ಚೌಕಿ ಮಠ ರಕ್ಷಣೆ ಭಕ್ತರ ಹೊಣೆ

ಬೇಲೂರು: ತಾಲೂಕಿನ ಚಿಲ್ಕೂರು ಗ್ರಾಮದಲ್ಲಿರುವ ಚೌಕಿ ಮಠ ಕರ್ನಾಟಕದ ಇತಿಹಾಸದ ಪುಟಗಳಲ್ಲಿ ದಾಖಲಾಗಿದ್ದು, ಇದರ ಘನತೆ ಕಾಪಾಡಲು ಚಿಲ್ಕೂರು ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಮುಂದಾಗಬೇಕು ಎಂದು ಪುಷ್ಪಗಿರಿ ಮಹಾ ಸಂಸ್ಥಾನದ ಮಠದ ಶ್ರೀ ಸೋಮಶೇಖರ ಸ್ವಾಮೀಜಿ ಸಲಹೆ ನೀಡಿದರು.


ತಾಲೂಕಿನ ಚಿಲ್ಕೂರು ಗ್ರಾಮದಲ್ಲಿರುವ ಚೌಕಿ ಮಠದಲ್ಲಿ ಮಠದ ಅಜ್ಜಯ್ಯನ ಗದ್ದುಗೆ ಆರಾಧನೆ, ನೂತನ ಸಮುದಾಯ ಭವನ ಲೋಕಾರ್ಪಣೆ ಹಾಗೂ ಧಾರ್ಮಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಪುಷ್ಪಗಿರಿಯಿಂದ ಚಿಲ್ಕೂರಿನತ್ತ ಬಂದ ನಮ್ಮ ಹಿಂದಿನ ಪೂಜ್ಯರು ಇಲ್ಲಿನ ಪರಿಸರಕ್ಕೆ ಮನಸೋತು ನಾಲ್ಕು ಶತಮಾನಗಳ ಕಾಲ ಇಲ್ಲಿಯೇ ಜನರಿಗೆ ಉಪದೇಶ ನೀಡಿದಲ್ಲದೆ, ಜಿಲ್ಲೆಯಲ್ಲಿಯೇ ಬೆರಗು ಮಾಡುವಂತೆ ಅಂದಿನ ಕಾಲದಲ್ಲೇ ಮೂರು ಮಹಡಿಯುಳ್ಳ ಮಠ ನಿರ್ಮಿಸಿದ ಕೀರ್ತಿಗೆ ಪಾತ್ರವಾಗಿದ್ದಾರೆ. ಚಿಲ್ಕೂರು ಮಠದಲ್ಲಿ ಏಳು ಜನ ಪೂಜ್ಯರು ಐಕ್ಯವಾದ ಗದ್ದುಗೆ ಇದೆ. ಈಗಾಗಲೇ ಚೌಕಿ ಮಠದ ಅಜ್ಜಯ್ಯನ ಗದ್ದುಗೆಯನ್ನು ಗ್ರಾನೈಟ್ ರಾಜಶೇಖರ್ ಉನ್ನತೀಕರಿಸಿದ್ದಾರೆ. ಉಳಿದ ಗದ್ದುಗೆಯನ್ನು ಮಾಜಿ ಶಾಸಕ ಕೆ.ಎಸ್.ಲಿಂಗೇಶ್ ಉನ್ನತೀಕರಿಸುವ ಭರವಸೆ ನೀಡಿದ್ದಾರೆ. ಉಳಿದಂತೆ ಪುಷ್ಪಗಿರಿ ತಪ್ಪಲಿನ ಬೈರಪ್ಪ ಸ್ವಾಮೀಜಿಯ ಗದ್ದುಗೆ ನಿರ್ಮಾಣಕ್ಕೆ ಪಂಡಿತನಹಳ್ಳಿ ಗ್ರಾಮಸ್ಥರು ಮುಂದಾಗಿದ್ದಾರೆ ಎಂದರು.


ನಮ್ಮ ಪುಷ್ಪಗಿರಿ ಸಂಸ್ಥಾನಕ್ಕೆ ಒಳಪಟ್ಟ ಹಾಸನ ತಾಲೂಕಿನ ಯಲಗುಂದದಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಹೊಸದಾಗಿ ಮಠ ನಿರ್ಮಿಸಿದ್ದು, ಶೀಘ್ರ ಉದ್ಘಾಟನೆಯಾಗಲಿದೆ. ಗುಣಶೆಟ್ಟಿಹಳ್ಳಿ ಗ್ರಾಮದ ಗದ್ದುಗೆ ಸೇರಿದಂತೆ ಇತರ ಕಾರ್ಯ ಯೋಜನೆಗೆ ಚಾಲನೆ ನೀಡಲಾಗಿದೆ. ಚಿಲ್ಕೂರು ಗ್ರಾಮದಲ್ಲಿರುವ 80 ಎಕರೆ ಮತ್ತು ಕೊಮಾರನಹಳ್ಳಿ ಮಠದ ಜಮೀನಿನಲ್ಲಿ ಅಡಕೆ, ತೆಂಗು ವಿವಿಧ ಹಣ್ಣಿನ ಗಿಡಗಳನ್ನು ಹಾಕಿದ್ದು ಮಠದ ಭಕ್ತರು ಕಾಳಜಿ ವಹಿಸಬೇಕು ಎಂದು ತಿಳಿಸಿದರು.


ಪುಷ್ಪಗಿರಿ ಮಹಾ ಸಂಸ್ಥಾನದಿಂದ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಹಾಗೂ ಕೃಷಿ ಸೇರಿದಂತೆ ಇತರ ಕ್ಷೇತ್ರದಲ್ಲೂ ಉತ್ತಮ ಸಾಧನೆ ಮಾಡಲಾಗುತ್ತಿದೆ. ಪುಷ್ಪಗಿರಿ ಮಠದಲ್ಲಿ ದೇಶೀಯ ಪರಂಪರೆ, ಸಂಸ್ಕಾರದ ಶಿಕ್ಷಣ ನೀಡುವುದಕ್ಕಾಗಿ ಗುರುಕುಲ, ಹಾಸನದ ಕೃಷ್ಣ ನಗರದ ಪುಷ್ಪಗಿರಿ ನಿವೇಶನದಲ್ಲಿ ನರ್ಸಿಂಗ್ ಕಾಲೇಜು ಆರಂಭಿಸಲು ಚಿಂತಿಸಿದ್ದು, ರೂಪುರೇಷೆ ಸಿದ್ಧವಾಗುತ್ತಿದೆ. ಮಹಿಳಾ ಸಬಲೀಕರಣಕ್ಕಾಗಿ ಪುಷ್ಪಗಿರಿ ಗ್ರಾಮೀಣ ಸಂಸ್ಥೆ ಆರಂಭಿಸಿದ್ದು, ಇಂದು ಹೆಮ್ಮರವಾಗಿ ಬೆಳೆದಿದೆ ಎಂದರು.


ಪುಷ್ಪಗಿರಿ ಮಠದ ಆಡಳಿತಾಧಿಕಾರಿ ಕಿಟ್ಟಪ್ಪ, ತಾಲೂಕು ವೀರಶೈವ ಮಹಾಸಭಾ ಅಧ್ಯಕ್ಷ ರವಿಕುಮಾರ್, ಗ್ರಾಪಂ ಸದಸ್ಯ ಸಚ್ಚಿನ್, ಮಠದ ಪುಪ್ಪೇಗೌಡ, ರಾಜಣ್ಣ, ಯಶೋದರ, ಪಾಪಣ್ಣ, ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹೆಬ್ಬಾಳು ಹಾಲಪ್ಪ, ಗ್ರಾಮಸ್ಥರಾದ ನವೀನ್, ಹಾಲಪ್ಪಯ್ಯ, ರವಿ, ಗಂಗಾಧರ, ನಾಗರಾಜ್, ಅಡಗೂರು ವಿಜಯಕುಮಾರ್ ಇತರರು ಇದ್ದರು.