ಸಿಂಧನೂರು: ಕಾಲುವೆ ನೀರು ಸ್ಥಗಿತ ಖಂಡಿಸಿ ಸೋಮವಾರ ಜವಳಗೇರಾ 54ನೇ ಉಪಕಾಲುವೆ ಬಳಿ ರೈತರು ಕೈಗೊಂಡಿದ್ದ ಧರಣಿಯನ್ನು ರಾತ್ರಿ ಸ್ಥಳಕ್ಕೆ ಭೇಟಿ ನೀಡಿ ತಾಲೂಕು ಆಡಳಿತ, ನೀರಾವರಿ ಇಲಾಖೆ ಅಧಿಕಾರಿಗಳ ಭರವಸೆ ನೀಡಿದ್ದರಿಂದ ವಾಪಸ್ ಪಡೆಯಲಾಯಿತು.
ಕಾಲುವೆ ವ್ಯಾಪ್ತಿಯಲ್ಲಿ ತಡವಾಗಿ ಭತ್ತ ನಾಟಿ ಮಾಡಿದ್ದು, ಈಗ ಭತ್ತ ಬೆಳವಣಿಗೆ ಹಂತದಲ್ಲಿದೆ. ಕೆರೆ ತುಂಬಿಸುವ ನೆಪದಲ್ಲಿ ಯಾವುದೇ ಕಾರಣಕ್ಕೂ ಕಾಲುವೆಗೆ ನೀರು ಬಂದ್ ಮಾಡಬಾರದು ಎಂದು ರೈತ ಸಂಘದ ನೇತೃತ್ವದಲ್ಲಿ ರೈತರು ಹೋರಾಟ ನಡೆಸಿದ್ದರು. ಸ್ಥಳಕ್ಕೆ ಭೇಟಿ ನೀಡಿದ ಶಾಸಕರ ಪುತ್ರ, ಜಿಪಂ ಮಾಜಿ ಸದಸ್ಯ ಬಾಬುಗೌಡ ಬಾದರ್ಲಿ, ರೈತರೊಂದಿಗೆ ಚರ್ಚಿಸಿ, ನಿಮಗೆ ತೊಂದರೆಯಾಗದಂತೆ ಕ್ರಮಕೈಗೊಳ್ಳಲು ಶಾಸಕ ಹಂಪನಗೌಡ ಬಾದರ್ಲಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ನಿಮ್ಮ ಜತೆಗೆ ನಾವಿದ್ದೇವೆ. ಬೆಳೆ ಪಡೆಯುವವರೆಗೂ ನೀರಿನ ಸಮಸ್ಯೆ ಬಾಧಿಸದಂತೆ ಎಚ್ಚರವಹಿಸಲಾಗುವುದು ಎಂದು ಭರವಸೆ ನೀಡಿದರು.
ತಹಸೀಲ್ದಾರ್ ಅರುಣ್ ದೇಸಾಯಿ ಮಾತನಾಡಿ, ಕೊನೆಯ ಭಾಗಕ್ಕೆ ಕುಡಿವ ನೀರಿನ ಅಗತ್ಯತೆ ಹೆಚ್ಚಿದ್ದು, ನಾಲ್ಕೈದು ದಿನಗಳಲ್ಲಿ ಬೆಳೆಗಳಿಗೆ ತೊಂದರೆಯಾಗದಂತೆ ಪೂರ್ಣ ಪ್ರಮಾಣದ ನೀರು ಹರಿಸಲು ನಿರ್ಧರಿಸಲಾಗಿತ್ತು. ಈಗ ಕೆಳ ಭಾಗದ ರೈತರ ಬೆಳೆ ರಕ್ಷಣೆ ಹಿನ್ನೆಲೆಯಲ್ಲಿ ಶೇ.50 ರ ಪ್ರಮಾಣದಲ್ಲಿ ಎಡದಂಡೆ ನಾಲೆ ಕೆಳ ಭಾಗ ಹಾಗೂ 54ನೇ ಉಪಕಾಲುವೆಗೆ ನೀರು ಹರಿಸಲಾಗುವುದು. ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ತಿಳಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಶರಣಪ್ಪ ಮರಳಿ ಮಾತನಾಡಿ, ಕಾಲುವೆ ಬಂದ್ ಮಾಡದೆ ನಿರಂತರ ನೀರು ಹರಿಸಬೇಕು. ಏಪ್ರಿಲ್‌ನಲ್ಲಿಯೂ ಕೆರೆ ತುಂಬಿಸಿಕೊಳ್ಳಲು ಐಸಿಸಿ ಸಭೆಯಲ್ಲಿ ನಿರ್ಧರಿಸಲಾಗಿದೆ. ಅದರಂತೆ ಕ್ರಮವಹಿಸಬೇಕೆಂದು ಮನವಿ ಮಾಡಿದರು.