ಜಿಲ್ಲೆ

ಸ್ಥಳೀಯರ ಸಹಕಾರ, ಅಧಿಕಾರಿಗಳ ಪರಿಶ್ರಮದಿಂದ ಕಾರ್ಯಕ್ರಮ ಯಶಸ್ವಿ

ಪಾಂಡವಪುರ: ಸ್ಥಳೀಯರು ಪಕ್ಷಾತೀತವಾಗಿ ನೀಡಿದ ಸಹಕಾರ ಹಾಗೂ ಅಧಿಕಾರಿಗಳ ಪರಿಶ್ರಮದಿಂದ ನಮ್ಮ ಆಶಯದಂತೆ ‘ಸರ್ಕಾರಿ ಸೇವೆಗಳು ನಿಮ್ಮ ಮನೆ ಬಾಗಿಲಿಗೆ’ ಎಂಬ ವಿನೂತನ ಕಾರ್ಯಕ್ರಮ ಸಾಕಾರಗೊಂಡಿದೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದರು.


ತಾಲೂಕಿನ ಬನ್ನಂಗಾಡಿ ಗ್ರಾಮದಲ್ಲಿ ಗುರುವಾರ ಕಳೆದ 12 ದಿನಗಳ ಕಾಲ ನಡೆದ ಸರ್ಕಾರಿ ಸೇವೆಗಳು ನಿಮ್ಮ ಮನೆ ಬಾಗಿಲಿಗೆ ಎಂಬ ವಿನೂತನ ಕಾರ್ಯಕ್ರಮದ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.


ರೈತರು, ಸಾರ್ವಜನಿಕರು ಹಾಗೂ ಕೂಲಿ ಕಾರ್ಮಿಕರು ತಮ್ಮ ದೈನಂದಿನ ಕೆಲಸ ಕಾರ್ಯಗಳು ಮತ್ತು ದಿನದ ಕೂಲಿಯನ್ನು ಬಿಟ್ಟು ಸರ್ಕಾರಿ ಕಚೇರಿ ಅಲೆಯುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಒಂದೊಂದು ಗ್ರಾಪಂ ಆಯ್ದುಕೊಂಡು ಸರ್ಕಾರಿ ಸೇವೆಗಳನ್ನು ಪ್ರತಿ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ. ಪ್ರಾರಂಭದಲ್ಲಿ ಕಾರ್ಯಕ್ರಮದ ಉದ್ದೇಶವನ್ನು ಜನರಿಗೆ ತಿಳಿಸಿ ಪರಿಪೂರ್ಣತೆ ಸಾಧಿಸುವುದು ಕಷ್ಟವಾಯಿತು. ಆದರೆ ಈಗ ಎಲ್ಲರ ಸಲಹೆ, ಸಹಕಾರದಿಂದ ನಿರೀಕ್ಷಿತ ಗುರಿ ತಲುಪುತ್ತಿದ್ದೇವೆ ಎಂದು ತಿಳಿಸಿದರು.


ಗ್ರಾಮಸ್ಥರು ಒಗ್ಗಟ್ಟು ಪ್ರದರ್ಶಿಸಬೇಕು: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒತ್ತುವರಿಯಾಗಿದ್ದ ರಸ್ತೆ, ಕೆರೆ, ಗಾಡಿ ಜಾಡು ಹಾಗೂ ಸರ್ಕಾರಿ ಜಾಗವನ್ನು ಭೂ ಮಾಪನ ಇಲಾಖೆ ಅಧಿಕಾರಿಗಳ ಸಹಕಾರದಿಂದ ತೆರವುಗೊಳಿಸಲಾಗಿದೆ. ಬನ್ನಂಗಾಡಿ ಗ್ರಾಮದ 155ನೇ ಸರ್ವೇ ನಂಬರಿನ 25 ಎಕರೆ ಜಮೀನಿನಲ್ಲಿ 1955ರಲ್ಲಿ ಬಡವರಿಗೆ ಹಂಚಿಕೆಯಾಗಿದ್ದ ನಿವೇಶನಗಳ ಜಾಗದ ಒತ್ತುವರಿಯನ್ನು ತೆರವುಗೊಳಿಸಿ ಕಂದಕ ನಿರ್ಮಿಸಲಾಗಿದೆ. ಈ ಜಾಗದಲ್ಲಿ ಅರ್ಹ ಫಲಾನುಭವಿಗಳಿಗೆ ನಿವೇಶನ ವಿತರಿಸುವ ಜತೆಗೆ ಉತ್ತಮ ಶಾಲೆ ನಿರ್ಮಿಸಲಾಗುವುದು. ಸರ್ಕಾರಿ ಜಮೀನು ಲಭ್ಯವಿದ್ದರೆ ಸಾರ್ವಜನಿಕ ಕೆಲಸ ಕಾರ್ಯಗಳಿಗೆ ಅಗತ್ಯವಾದ ನಿವೇಶನ ಹುಡುಕುವ ಪ್ರಮೇಯ ಬರುವುದಿಲ್ಲ. ಹೀಗಾಗಿ ಗ್ರಾಪಂ ವ್ಯಾಪ್ತಿಯಲ್ಲಿರುವ ಸರ್ಕಾರಿ ಜಮೀನುಗಳು ಒತ್ತುವರಿಯಾಗದಂತೆ ಗ್ರಾಮಸ್ಥರು ಕಾಪಾಡಿಕೊಳ್ಳಬೇಕು. ಇದಕ್ಕಾಗಿ ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಸಲಹೆ ನೀಡಿದರು.


ಕಂದಾಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಕೃಷಿ, ತೋಟಗಾರಿಕೆ, ಸೆಸ್ಕ್, ಆರೋಗ್ಯ, ಕಾರ್ಮಿಕ ಇಲಾಖೆ ಹಾಗೂ ಭೂ ಮಾಪನ ಸೇರಿದಂತೆ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಒಟ್ಟಾರೆ 1567 ಅರ್ಜಿಗಳು ಸ್ವೀಕೃತಗೊಂಡಿತ್ತು. ಈ ಪೈಕಿ 918 ಅರ್ಜಿಗಳನ್ನು ಸ್ಥಳದಲ್ಲೇ ಪರಿಹಾರ ಒದಗಿಸಲಾಗಿದೆ. ಉಳಿದ 648 ಅರ್ಜಿಗಳಿಗೆ ವಿವಿಧ ಕಾರಣಗಳಿಂದ ತಡವಾಗಿದ್ದು, ವಾರದೊಳಗೆ ಈ ಎಲ್ಲ ಅರ್ಜಿಗಳನ್ನು ಇತ್ಯರ್ಥ ಪಡಿಸಲಾಗುವುದು. ಸಾರ್ವಜನಿಕರ ಕೆಲಸ ಕಾರ್ಯಕ್ಕಾಗಿ 12 ದಿನಗಳಿಂದ ಎಲ್ಲ ಇಲಾಖೆ ಅಧಿಕಾರಿಗಳು ಶ್ರಮಪಟ್ಟಿದ್ದಾರೆ ಕೃಷಿ ಇಲಾಖೆ ಅಧಿಕಾರಿಗಳು ಮನೆ ಮನೆಗೆ ತೆರಳಿ ರೈತರಿಗೆ ಬೆಳೆ ಪರಿವರ್ತನೆ, ಬೇಸಾಯ ಪದ್ಧತಿ, ಗೊಬ್ಬರ ಬಳಕೆ ಹಾಗೂ ನೀರು ಸದ್ಬಳಕೆ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಅದರಂತೆ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ರೈತರು ವ್ಯವಸಾಯ ಪದ್ಧತಿ ಬದಲಾಯಿಸಿಕೊಂಡರೆ ಕೃಷಿ ಲಾಭದಾಯಕವಾಗಲಿದೆ ಎಂದರು.


ತಹಸೀಲ್ದಾರ್ ಸಂತೋಷ್ ಮಾತನಾಡಿ, ಹಿಂದಿನ ಪಂಚಾಯಿತಿಗಿಂತ ಬನ್ನಂಗಾಡಿ ಪಂಚಾಯಿತಿಯಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಆಶಯದಂತೆ ನಡೆದ ಜನಸ್ಪಂದನಾ ಕಾರ್ಯಕ್ರಮಕ್ಕೆ ಸ್ಥಳೀಯರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಕಂದಾಯ ಇಲಾಖೆಗೆ 421 ಅರ್ಜಿಗಳು ಬಂದಿದ್ದವು, ಅದರಲ್ಲಿ ನಾವು 321 ಅರ್ಜಿಗಳನ್ನು ಸ್ಥಳದಲ್ಲಿಯೇ ಇತ್ಯರ್ಥಪಡಿಸುವ ಕೆಲಸ ಮಾಡಿದ್ದೇವೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಕ್ರಮ ಕೈಗೊಳ್ಳಬೇಕಿರುವ ಕೆಲವು ಅರ್ಜಿಗಳು ಸೇರಿದಂತೆ 80 ಅರ್ಜಿಗಳು ಬಾಕಿ ಉಳಿದಿವೆ. ಅವುಗಳನ್ನು ದಾಖಲೆ ಪರಿಶೀಲಿಸಿ ಇತ್ಯರ್ಥಪಡಿಸಲಾಗುವುದು ಎಂದು ಭರವಸೆ ನೀಡಿದರು.


ತಾಪಂ ಇಒ ಲೋಕೇಶ್‌ಮೂರ್ತಿ ಮಾತನಾಡಿ, ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ಶಾಸಕರು ಉದ್ದೇಶವಾಗಿದೆ. ಕಾರ್ಯಕ್ರಮದ ಮೂಲಕ ಇಲಾಖೆಯ ಕೆಲವು ಪ್ರಕ್ರಿಯೆಗಳನ್ನು ಸರಳೀಕರಣ ಮಾಡಿಕೊಂಡು ಹಲವು ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸುವ ಕೆಲಸ ಮಾಡಿದ್ದೇವೆ. ಸರ್ವರ್ ಸಮಸ್ಯೆ ಎದುರಾದ ಹಿನ್ನೆಲೆಯ ಇ-ಸ್ವತ್ತು ನೀಡಲು ಅಡಚಣೆಯಾಯಿತು. ಸ್ವೀಕಾರವಾಗಿರುವ ಇ-ಸ್ವತ್ತು ಅರ್ಜಿಗಳಿಗಳನ್ನು ಶೀಘ್ರವೇ ನೀಡಲಾಗುವುದು ಎಂದರು.


ಕಾರ್ಯಕ್ರಮಕ್ಕೂ ಮೊದಲು ಮಂಡ್ಯದಿಂದ ಪಾಂಡವಪುರ ಮಾರ್ಗವಾಗಿ ಬನ್ನಂಗಾಡಿ ಮೂಲಕ ಕೆ.ಆರ್.ನಗರ ತಾಲೂಕಿನ ಭೇರ್ಯ ಗ್ರಾಮಕ್ಕೆ ಪ್ರತಿದಿನ ಸಂಚರಿಸುವ ಸಾರಿಗೆ ಬಸ್‌ಗೆ ಶಾಸಕ ದರ್ಶನ್‌ಪುಟ್ಟಣ್ಣಯ್ಯ ಚಾಲನೆ ನೀಡಿದರು.
ಗ್ರಾಪಂ ಅಧ್ಯಕ್ಷ ಪ್ರಭಾಕರ್, ಸದಸ್ಯ ತಮ್ಮೇಗೌಡ, ಕುರುಬರ ಸಂಘದ ಜಿಲ್ಲಾ ಉಪಾಧ್ಯಕ್ಷ ಬಿ.ಕೆ.ರೇವಣ್ಣ, ಶಂಕರೇಗೌಡ, ಬಿ.ಜೆ.ಸ್ವಾಮಿ, ಕೆ.ಕುಬೇರ, ಸಿಡಿಪಿಒ ಪೂರ್ಣಿಮಾ, ಶಿರಸ್ತೇದಾರ್ ಲಕ್ಷ್ಮೀಕಾಂತ್, ಸೆಸ್ಕ್ ಎಇಇ ಪುಟ್ಟಸ್ವಾಮಿ. ಸುರೇಂದ್ರ, ಕೃಷಿ ಎಡಿ ಮಂಜುನಾಥ್ ಇತರರು ಇದ್ದರು.