ಆರ್.ಕೃಷ್ಣ ಮೈಸೂರು
ಲೋಕಾಯುಕ್ತ, ಇಡಿ ಸೇರಿದಂತೆ ಇತರ ವಿಶೇಷ ತಂಡದ ತನಿಖೆಯಿಂದ ನಲುಗಿರುವ ಮುಡಾದಲ್ಲಿ ಖಾಸಗಿ ಬಡಾವಣೆ ನಿವೇಶನದಾರರು ಅನುಭವಿಸುತ್ತಿರುವ ಸಮಸ್ಯೆಗೆ ಮುಕ್ತಿ ನೀಡುವ ಪ್ರಕ್ರಿಯೆ ಆರಂಭಗೊಂಡಿದೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಖಾಸಗಿ ಬಡಾವಣೆಯಲ್ಲಿನ ನಿವೇಶನಗಳನ್ನು ಖಾತೆ ಮಾಡಿಕೊಟ್ಟು ಕಂದಾಯವನ್ನು ಪಡೆದುಕೊಳ್ಳುತ್ತಿತ್ತು. ಆದರೆ ಖಾತೆ, ಕಂದಾಯ ಮಾಡುವುದು ಮುಡಾ ವ್ಯಾಪ್ತಿಗೆ ಬರುವುದಿಲ್ಲ. ಅದನ್ನು ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳೇ ಮಾಡಬೇಕು ಎನ್ನುವ ಕಟ್ಟುನಿಟ್ಟಿನ ಸ್ಪಷ್ಟ ಸೂಚನೆಯನ್ನು ಆಯುಕ್ತರಾಗಿ ಬಂದ ರಘುನಂದನ್ ಮುಡಾ ಸಿಬ್ಬಂದಿಗೆ ನೀಡಿದ್ದಾರೆ.
ಇದರಿಂದ ಮುಡಾ ಅನುಮೋದಿತ ಖಾಸಗಿ ಬಡಾವಣೆಯ ನಿವೇಶನದಾರರಿಗೆ ಮಾಡಲಾಗುತ್ತಿದ್ದ ಖಾತೆ, ಕಂದಾಯ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ಖಾಸಗಿ ಬಡಾವಣೆಗಳ ವ್ಯಾಪ್ತಿಯಲ್ಲಿರುವ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ನಗರಸಭೆ, ನಗರಪಾಲಿಕೆಗಳು ಬಡಾವಣೆ ಹಸ್ತಾಂತರಗೊಳ್ಳದೆ ಖಾತೆ, ಕಂದಾಯ ಪ್ರಕ್ರಿಯೆ ಮಾಡುವುದಿಲ್ಲ. ಜತೆಗೆ ಕೆಲ ಖಾಸಗಿ ಬಡಾವಣೆಗಳನ್ನು ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿಪಡಿಸಿಲ್ಲ. ಯಥಾಸ್ಥಿತಿ ವಶಪಡಿಸಿಕೊಂಡರೆ ಅಂತಹ ಬಡಾವಣೆಗಳ ನಿರ್ವಹಣೆ ನಮ್ಮ ಹೆಗಲಿಗೆ ಬೀಳಲಿದೆ ಎಂದು ಖಾಸಗಿ ಬಡಾವಣೆ ಸುರ್ಪದಿಗೆ ತೆಗೆದುಕೊಳ್ಳಲು ಸ್ಥಳೀಯ ಸಂಸ್ಥೆಗಳು ಹಿಂಜರಿದಿದ್ದವು.
ಇದರಿಂದ ಮುಡಾ ಅನುಮೋದಿತ ಖಾಸಗಿ ಬಡಾವಣೆ ನಿವೇಶನದಾರರು ನಿವೇಶನಗಳನ್ನು ಮಾರಾಟ ಮಾಡಲು, ಕೊಳ್ಳಲು, ಖಾತೆ ಮಾಡಿಸಲು, ಕಂದಾಯ ನಿಗದಿಪಡಿಸಲು, ಮನೆ ನಿರ್ಮಿಸಲು ತೊಂದರೆ ಅನುಭವಿಸಬೇಕಾಯಿತು. ಹೀಗಾಗಿ ಅನುಮೋದಿತ ಖಾಸಗಿ ಬಡಾವಣೆ ನಿವೇಶನದಾರರು ನಿತ್ಯ ಮುಡಾ ಕಚೇರಿಗೆ ಅಲೆಯುವಂತಾಗಿತ್ತು. ಅಲ್ಲದೆ, ಅಧಿಕಾರಿ, ಸಿಬ್ಬಂದಿ ಮುಂದೆ ತಮ್ಮ ಅಸಮಾಧಾನ ಹೊರಹಾಕಿ ಪ್ರತಿಭಟನೆಯನ್ನೂ ಮಾಡಿದ್ದರು.
ನಿವೇಶನದಾರರಿಂದ ಒತ್ತಡ ಹೆಚ್ಚಾಗಿದ್ದರಿಂದ ಅಂತಿಮವಾಗಿ ಅನುಮೋದಿತ ಖಾಸಗಿ ಬಡಾವಣೆಗಳನ್ನು ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರ ಮಾಡುವ ಪ್ರಕ್ರಿಯೆ ಆರಂಭಗೊಂಡಿದೆ.
ಮುಡಾ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಮುಡಾ ಸಭೆಯಲ್ಲಿ ಒಟ್ಟು 900 ಖಾಸಗಿ ಬಡಾವಣೆಗಳನ್ನು ಮುಡಾ ವ್ಯಾಪ್ತಿಯಿಂದ ಆಯಾ ಸ್ಥಳೀಯ ಸಂಸ್ಥೆಗೆ ಹಂತ ಹಂತವಾಗಿ ಹಸ್ತಾಂತರಿಸುವ ಪ್ರಕ್ರಿಯೆ ಆರಂಭಿಸಲು ನಿರ್ಣಯಿಸಲಾಯಿತು. ಮೊದಲ ಹಂತದಲ್ಲಿ ಹಸ್ತಾಂತರಕ್ಕೆ ಪಟ್ಟಿ ಮಾಡಲಾಗಿರುವ 200 ಬಡಾವಣೆಗಳಲ್ಲಿ ರಚನೆಯಾಗಿರುವ 15,085 ನಿವೇಶನಗಳನ್ನು ವರ್ಗಾವಣೆಗೆ ನಿರ್ಣಯಿಸಲಾಗಿದೆ.
ಈ ಬಡಾವಣೆಗಳಿಗೆ ಖಾತೆ, ಕಂದಾಯವನ್ನು ಆಯಾ ಸ್ಥಳೀಯ ಸಂಸ್ಥೆಗಳೇ ನಿರ್ವಹಿಸಬೇಕು. ಮುಡಾದಿಂದ ಅಭಿವೃದ್ಧಿಪಡಿಸಲಾದ 17 ಬಡಾವಣೆಗಳನ್ನೂ ಸಂಬಂಧಿಸಿದ ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರಿಸಲಾಗುವುದು. ಇನ್ಮುಂದೆ ಖಾತೆ ಕಂದಾಯ ಎಲ್ಲವೂ ಸ್ಥಳೀಯ ಸಂಸ್ಥೆ ಮಟ್ಟದಲ್ಲೇ ಆಗುತ್ತದೆ. ನವೆಂಬರ್ 8ರ ನಂತರ ಪರಸ್ಪರ ಒಡಂಬಡಿಕೆ ಪ್ರಕ್ರಿಯೆಗಳು ಮುಗಿದು ನಿರಾಕ್ಷೇಪಣಾ ಪತ್ರ ನೀಡಿದ ನಂತರ ಪ್ರಕ್ರಿಯೆ ಮತ್ತಷ್ಟು ಚುರುಕಾಗುವ ಸಾಧ್ಯತೆ ಇದೆ.
ಹೊರವಲಯದ ರಮ್ಮನಹಳ್ಳಿ, ಕಡಕೊಳ, ಬೋಗಾದಿ, ಶ್ರೀರಾಂಪುರ ಪಟ್ಟಣ ಪಂಚಾಯಿತಿ, ಹೂಟಗಳ್ಳಿ ನಗರಸಭೆ ವ್ಯಾಪ್ತಿಯಲ್ಲಿ 900 ಖಾಸಗಿ ಬಡಾವಣೆಗಳಿವೆ. ಹಸ್ತಾಂತರ ಪ್ರಕ್ರಿಯೆ ಆರಂಭದಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿರುವ ಬಡಾವಣೆಗಳನ್ನು ಪಟ್ಟಿ ಮಾಡಲಾಗಿದೆ. ಮೈಸೂರು ನಗರ ಪಾಲಿಕೆ, ನಾಲ್ಕು ಪಟ್ಟಣ ಪಂಚಾಯಿತಿ, ಒಂದು ನಗರಸಭೆ, 19 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಗೆ ಯಾವ ಯಾವ ಅನುಮೋದಿತ ಖಾಸಗಿ ಬಡಾವಣೆಗಳು ಸೇರಲಿವೆ ಎನ್ನುವುದನ್ನು ಗುರುತಿಸಿ ಪಟ್ಟಿ ಮಾಡಲಾಗಿದೆ.
ಮುಡಾದಿಂದ ಬಡಾವಣೆ ಅನುಮೋದನೆ
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ತನ್ನ ವ್ಯಾಪ್ತಿಯ ಮೈಸೂರು ನಗರ, ನಂಜನಗೂಡು, ಶ್ರೀರಂಗಪಟ್ಟಣ ತಾಲೂಕಿನಲ್ಲಿ ಖಾಸಗಿ ಬಡಾವಣೆ ನಿರ್ಮಾಣಕ್ಕೆ ಅನುಮತಿ ಮಾತ್ರ ನೀಡಲಿದೆ. ಉಳಿದಂತೆ ಖಾತೆ, ಕಂದಾಯ, ಬಡಾವಣೆ ನಿರ್ವಹಣೆ ಹೊಣೆ ಆಯಾ ಸ್ಥಳೀಯ ಸಂಸ್ಥೆಗಳ ಜವಾಬ್ದಾರಿ ಆಗಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಇಂಜಿನಿಯರಿಂಗ್ ವಿಭಾಗ ಇಲ್ಲದಿರುವುದರಿಂದ ಮನೆ ನಿರ್ಮಾಣಕ್ಕೆ ನಕ್ಷೆ ಅನುಮೋದನೆ, ಸಿಆರ್ ಅನ್ನು ತನ್ನ ಬಳಿಯೇ ಉಳಿಸಿಕೊಳ್ಳುವ ಕುರಿತು ಚರ್ಚೆ ನಡೆಯುತ್ತಿದ್ದು, ಮತ್ತೊಂದು ಸುತ್ತಿನ ಸಭೆಯಲ್ಲಿ ಈ ಕುರಿತು ಸ್ಪಷ್ಟ ನಿರ್ಧಾರ ಹೊರ ಬೀಳಲಿದೆ.
ಮುಡಾದಲ್ಲಿ ಖಾತೆ, ಕಂದಾಯ ಪ್ರಕ್ರಿಯೆ ಸ್ಥಗಿತಗೊಂಡಿರುವುದರಿಂದ ಖಾಸಗಿ ಬಡಾವಣೆದಾರರಿಗೆ ತೊಂದರೆ ಆಗಿತ್ತು. ಹಾಗಾಗಿ ನಿಯಮಾನುಸಾರ ಖಾಸಗಿ ಹಾಗೂ ಮುಡಾ ಬಡಾವಣೆಗಳ ಜತೆ ಖಾತೆಗಳನ್ನೂ ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರಿಸಲು ಪ್ರಕ್ರಿಯೆ ಶುರು ಮಾಡಲಾಗಿದೆ.
ಜಿ.ಲಕ್ಷ್ಮೀಕಾಂತರೆಡ್ಡಿ ಜಿಲ್ಲಾಧಿಕಾರಿ
ಮುಡಾ, ತನ್ನ ವ್ಯಾಪ್ತಿಯಲ್ಲಿ ಬರುವ ಖಾಸಗಿ ಬಡಾವಣೆಗಳಿಗೆ ಯೋಜನೆ ಮಂಜೂರು ಮಾಡಬಹುದೆ ವಿನಾ ಖಾತೆ ಮಾಡಿ ಕಂದಾಯ ವಸೂಲಿ ಮಾಡಲು ಅವಕಾಶವಿಲ್ಲ. ಹಿಂದಿನಿಂದ ನಡೆದು ಬಂದಿದ್ದ ನ್ಯೂನತೆಯನ್ನು ಸರಿಪಡಿಸುವ ಕಾರ್ಯ ನಡೆಯುತ್ತಿದೆ. ಮುಂದೆ ಖಾಸಗಿ, ಹಸ್ತಾಂತರಗೊಂಡ ಮುಡಾ ಬಡಾವಣೆಗಳನ್ನು ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳೇ ನಿರ್ವಹಣೆ ಮಾಡಬೇಕಿದೆ.
ಎ.ಎನ್. ರಘುನಂದನ್
ಆಯುಕ್ತ ಮುಡಾ