ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ
ತಾಲೂಕಿನಲ್ಲಿ ವರ್ಷದಿಂದ ವರ್ಷಕ್ಕೆ ಉಳ್ಳಾಗಡ್ಡಿ ಬೆಳೆ ಕ್ಷೇತ್ರ ಕ್ಷೀಣಿಸುತ್ತಿದೆ. ಪ್ರಸಕ್ತ ವರ್ಷ 800 ಹೆಕ್ಟೇರ್ ಕ್ಷೇತ್ರಕ್ಕೆ ಬಂದು ನಿಂತಿದೆ. ಹೀಗಾಗಿ, ಈ ವರ್ಷ ಉಳ್ಳಾಗಡ್ಡಿಗೆ ಭಾರಿ ಡಿಮಾಂಡ್ ಬರಲಿದೆ.
ಕಳೆದ ನಾಲ್ಕೈದು ವರ್ಷಗಳ ಹಿಂದೆ 2,500ರಿಂದ 3 ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆ ಆಗುತ್ತಿತ್ತು. ಪ್ರಸಕ್ತ ವರ್ಷ 600 ರಿಂದ 800 ಹೆಕ್ಟೇರ್ ಕ್ಷೇತ್ರ ಮಾತ್ರ ಬಿತ್ತನೆಯಾಗಿದ್ದು, ಮುಂದಿನ ದಿನಗಳಲ್ಲಿ ಉಳ್ಳಾಗಡ್ಡಿ ದರ ಹೆಚ್ಚಳವಾದರೂ ಅಚ್ಚರಿ ಇಲ್ಲ. ತಾಲೂಕಿನ ಹಲಗೇರಿ, ಮುಷ್ಟೂರ, ಗಂಗಾಪುರ, ಹರನಗಿರಿ, ಮಾಗೋಡ, ಯರೇಕುಪ್ಪಿ ಸೇರಿ ಸುತ್ತಲಿನ ಗ್ರಾಮಗಳಲ್ಲಿ ಉಳ್ಳಾಗಡ್ಡಿ ಬೆಳೆಯಲಾಗುತ್ತದೆ.
ಕ್ಷೇತ್ರ ಕಡಿಮೆಯಾಗಲು ಕಾರಣ:ಉಳ್ಳಾಗಡ್ಡಿ ಬೆಳೆಯುವ ಕ್ಷೇತ್ರ ಕಡಿಮೆಯಾಗಲು ಪ್ರಮುಖ ಕಾರಣ ಮಳೆ. ಒಂದು ವರ್ಷ ಮಳೆ ಹೆಚ್ಚಾದರೆ ಒಂದು ವರ್ಷ ಕಡಿಮೆಯಾಗಿ ಬೆಳೆ ಹಾಳಾಗುತ್ತಿದೆ. ಇನ್ನು ಉಳ್ಳಾಗಡ್ಡಿ ಬೆಳೆಯಲ್ಲಿ ಕಳೆಯ ಪ್ರಮಾಣ ಹೆಚ್ಚಾಗುತ್ತಿದ್ದು, ಕೂಲಿ ಕಾರ್ಮಿಕರ ಸಮಸ್ಯೆ ರೈತರನ್ನು ಕಾಡುತ್ತಿದೆ. ಇವುಗಳ ಮಧ್ಯೆ ಬೆಳೆಗೆ ರೋಗಬಾಧೆ ಹೆಚ್ಚಾಗುತ್ತಿರುವುದು ಬೆಳೆಗಾರರನ್ನು ಚಿಂತೆಗೀಡು ಮಾಡುತ್ತಿದೆ.
ಕೆಲವೊಮ್ಮೆ ಉತ್ತಮ ಬೆಳೆ ಬಂದರೆ ಲಾಭಾವಾಗುತ್ತದೆ. ಕೆಲ ಬಾರಿ ಉಳ್ಳಾಗಡ್ಡಿ ಬೀಜ ಬಿತ್ತನೆ, ನಿರ್ವಹಣೆಗ ಬೆಳೆದ ಮಾಡಿದ ಖರ್ಚು ಸಹ ಬರುವುದಿಲ್ಲ ಎಂಬುದು ರೈತರ ಅಭಿಪ್ರಾಯ. ಉತ್ತಮ ವಾತಾವರಣ ದೊರೆಯದ ಕಾರಣ ರೈತರು ಈ ಬೆಳೆಯ ಕ್ಷೇತ್ರವನ್ನು ಕಡಿಮೆ ಮಾಡಿ ಪರ್ಯಾಯ ಬೆಳೆ ಬೆಳೆಯಲು ಮುಂದಾಗಿದ್ದರಿಂದ ಉಳ್ಳಾಗಡ್ಡಿ ಕ್ಷೇತ್ರ ಕುಂಠಿತಗೊಂಡಿದೆ.
ಹಬ್ಬಗಳಲ್ಲಿ ಉತ್ತಮ ದರ:ಶ್ರಾವಣ ಮಾಸ, ಗಣಪತಿ ಹಬ್ಬ, ಮುಂದೆ ದಸರಾ ಸೇರಿ ನಿರಂತರ ಹಬ್ಬಗಳು ಬರಲಿವೆ. ಹೀಗಾಗಿ, ಶುಭ ಕಾರ್ಯಗಳು ಹೆಚ್ಚಾದ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಉಳ್ಳಾಗಡ್ಡಿಗೆ ಬೇಡಿಕೆ ಹೆಚ್ಚಾಗಿದೆ. ಮಾರುಕಟ್ಟೆಯಲ್ಲಿ ಈ ಹಿಂದೆ 1 ಕೆಜಿಗೆ 20 ರೂ. ಇತ್ತು. ಈಗ 35ರಿಂದ 45ರೂ.ಗೆ ಬಂದು ನಿಂತಿದೆ.
ದರ ಹೆಚ್ಚಳ ಸಾಧ್ಯತೆ: ಇಲ್ಲಿನ ಮಾರುಕಟ್ಟೆಗೆ ಸ್ಥಳೀಯ ಸೇರಿ ಬೇರೆ ಜಿಲ್ಲೆಗಳಿಂದ ಹಾಗೂ ಮಹಾರಾಷ್ಟ್ರದ ನಾಸಿಕ್ ಉಳ್ಳಾಗಡ್ಡಿ ಬರುತ್ತಿದೆ. ಪ್ರಸಕ್ತ ವರ್ಷ ಸ್ಥಳೀಯ ರೈತರು ಹೆಚ್ಚಾಗಿ ಉಳ್ಳಾಗಡ್ಡಿ ಬೆಳೆದಿಲ್ಲ. ಅಲ್ಲದೆ, ಮಳೆ ಕೂಡ ಈ ಬಾರಿ ಮಹಾರಾಷ್ಟ್ರದಲ್ಲೂ ಹೆಚ್ಚಾಗಿದೆ. ಮಳೆ ಇದೇ ರೀತಿ ಮುಂದುವರಿದರೆ ಉಳ್ಳಾಗಡ್ಡಿ ದರ ಏರಿಕೆಯಾಗುವುದರಲ್ಲಿ ಸಂದೇಹವೇ ಇಲ್ಲ ಎಂಬುದು ವ್ಯಾಪಾರಸ್ಥರ ಅಭಿಪ್ರಾಯವಾಗಿದೆ.