ಬಳ್ಳಾರಿ : ವಿಭಜನೆಗೊಂಡು ಆರವತ್ತು ವರ್ಷವಾದರೂ ತಮ್ಮ ಕನ್ನಡಾಭಿಮಾನವನ್ನು ಬಿಡೆದೆ ಕನ್ನಡವನ್ನೇ ಮಾತಾಡುತ್ತಾ ಕಲಿಯುತ್ತಾ ಬಾಳುವ ಕನ್ನಡಿಗರ ಗೋಳನ್ನು ಅತ್ತ ಆಂಧ್ರಪ್ರದೇಶ ಸರ್ಕಾರ ಕೇಳುತ್ತಿಲ್ಲ ಇತ್ತ ಕರ್ನಾಟಕ ಸರ್ಕಾರವಾದರೂ ಕನಿಕರ ಪಟ್ಟು ಸಹಕರಿಸುತ್ತಿಲ್ಲ ಎಂಬುದು ಗಡಿಭಾಗದ ಕನ್ನಡ ವಿದ್ಯಾರ್ಥಿಗಳ ಅಳಲು.
ನೆರೆಯ ಆಂಧ್ರದ ಅನಂತಪುರ ಹಾಗೂ ಕರ‌್ನೂಲ್ ಜಿಲ್ಲೆಯ 74ಕ್ಕೂ ಅಧಿಕ ಕನ್ನಡ ಶಾಲೆಗಳಿವೆ. ಗಡಿಭಾಗದ ಕನ್ನಡ ಶಾಲೆಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಮೂಲ ಸೌಕರ್ಯ ಕಲ್ಪಿಸದೆ ಹಾಗೂ ಉನ್ನತ ವ್ಯಾಸಂಗ ಮತ್ತು ಉದ್ಯೋಗದಲ್ಲಿ ಜಾರಿಯಲ್ಲಿರುವ ಮೀಸಲಾತಿಯನ್ನು ಕ್ರಿಯಾರೂಪಕ್ಕೆ ತರದೆ ಇರುವುದರಿಂದ ವರ್ಷದಿಂದ ವರ್ಷಕ್ಕೆ ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ದಾಖಲಾತಿ ಕುಸಿದು ಕೆಲ ಕನ್ನಡ ಶಾಲೆಗಳು ಮುಚ್ಚಿ ತೆಲುಗು ಮಾಧ್ಯಮ ಶಾಲೆಗಳನ್ನು ತೆರೆಯಲಾಗುತ್ತಿದೆ. ಕಳೆದ ವರ್ಷವೇ ಆಂಧ್ರದ ಆದೋನಿ ಜಿಲ್ಲೆಯ ಮೂರು ಕನ್ನಡ ಶಾಲೆಗಳು ಮುಚ್ಚಲಾಗಿದೆ.
ಗಡಿಯಾಚೆಯ ಕನ್ನಡ ಶಾಲೆಗಳಿಗೆ ಅಗತ್ಯ ಕನ್ನಡ ಪುಸ್ತಕ ನೀಡುವಂತೆ 2014ರಲ್ಲಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಬೇಡಿಕೆಯಷ್ಟು ಪುಸ್ತಕ ಪೂರೈಕೆಯಾಗುತ್ತಿಲ್ಲ. ಆಂಧ್ರದ ಇಲ್ಲಿನ ಕನ್ನಡ ಶಾಲೆಗಳಲ್ಲಿ ಹಿಂದೆ ಪ್ರಥಮ ಭಾಷೆ ಪಠ್ಯಪುಸ್ತಕ ಹೊರತಾಗಿ ಉಳಿದೆಲ್ಲ ವಿಜ್ಞಾನ, ಸಮಾಜ, ಗಣಿತ ಸೇರಿದಂತೆ ಪಠ್ಯಗಳು ತೆಲುಗಿನಲ್ಲದ್ದವುಗಳನ್ನು ನಂತರ ಭಾಷಾಂತರಿಸಿ ಮುದ್ರಿಸಿ ಆಂಧ್ರ ಸರ್ಕಾರ ನೀಡುತ್ತಿದೆಯಾದರೂ ಪ್ರಥಮ ಭಾಷೆ(ಕನ್ನಡ)ಕರ್ನಾಟಕದ್ದೇ ಆಗಿದೆ. ಆದರೆ, ಇಲ್ಲಿಯ ಕನ್ನಡ ಶಾಲೆಗಳಿಗೆ ಸರಿಯಾಗಿ ಕನ್ನಡ ಪುಸ್ತಕ ದೊರಕುತ್ತಿಲ್ಲ ಎಂಬುದು ಬೇಸರದ ವಿಷಯವಾಗಿದೆ. ಆಂಧ್ರದ ಕನ್ನಡ ಶಾಲೆಗಳಲ್ಲಿ ಶಿಕ್ಷಕರ ವರ್ಗಾವಣೆ, ಹೊಸ ಹುದ್ದೆಗಳ ನಿಯೋಜನೆ ಸೇರಿ ಆಡಳಿತ ವಿಷಯಗಳಿಗೆ ಹೋರಾಟ ಮಾಡಬೇಕಾದ ಅನಿವಾರ್ಯತೆ ಅಲ್ಲಿನ ಶಿಕ್ಷಕರ ಹಾಗೂ ಜನರಿಗೆ ತಪ್ಪಾದಾಗಿದೆ.
ಉನ್ನತ ಶಿಕ್ಷಣ ಮರೀಚಿಕೆ : ಹತ್ತನೇ ತರಗತಿ ಕನ್ನಡ ಮಾಧ್ಯಮದಲ್ಲಿರುವ ಓದಿರುವ ವಿದ್ಯಾರ್ಥಿಗಳಿಗೆ ಪದವಿ ಪೂರ್ವ ಮತ್ತು ಪದವಿ ಶಿಕ್ಷಣ ಕಾಲೇಜುಗಳು ಗಡಿಭಾಗದಲ್ಲಿ ಇಲ್ಲದ್ದರಿಂದ ಕರ್ನಾಟಕದ ಕಾಲೇಜುಗಳನ್ನು ಅವಲಂಬಿಸಬೇಕಿದೆ. ಆಂಧ್ರಪ್ರದೇಶದ ವಿದ್ಯಾರ್ಥಿಗಳೆಂಬ ಕಾರಣಕ್ಕೆ ಕರ್ನಾಟಕ ಕಾಲೇಜುಗಳಲ್ಲಿ ಸರ್ಕಾರದ ಕೋಟಾದಡಿ ಉಚಿತ ಶೀಟುಗಳು ಸಿಗುತ್ತಿಲ್ಲ. ಎಂಜಿನಿಯರಿಂಗ್, ಮೆಡಿಕಲ್, ಡಿಪ್ಲೋಮ್ ಸೇರಿ ಉನ್ನತ ವ್ಯಾಸಂಗದಿಂದ ಗಡಿನಾಡಿನ ಕನ್ನಡಿಗರು ವಂಚಿತರಾಗಿದ್ದಾರೆ. ರಾಜ್ಯದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಸಿಗಬೇಕಾದ ಸೌಲಭ್ಯಗಳು ಗಡಿನಾಡಿನಲ್ಲಿರುವ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ನೀಡಬೇಕೆಂಬ ಕೂಗು ಮೊದಲಿನಿಂದಲೂ ಕೇಳಿಬಂದಿದೆ. ಆಂಧ್ರಪದೇಶದಲ್ಲಿರುವ ಗಡಿಗ್ರಾಮಗಳು ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಹೊಂದಿಕೊಂಡಿರುವ ಜತೆಗೆ ಇಲ್ಲಿನ ನಡೆ, ನುಡಿ ಮತ್ತು ಸಂಸ್ಕ್ರತಿಯೂ ಒಂದೇ ಆಗಿದೆ. ಆದ್ದರಿಂದ, ಸಂವಿಧಾನದ 371ಜೆ ಸೌಲಭ್ಯವನ್ನು ಇಲ್ಲಿನ ಕನ್ನಡ ಮಾಧ್ಯಮದ ಮಕ್ಕಳಿಗೂ ವಿಸ್ತರಿಸಬೇಕು ಎಂಬ ಕೂಗು ಹೋರಾಟ ನಡೆದಿವೆ. ಗಡಿನಾಡು ಕನ್ನಡ ಮಾಧ್ಯಮದ ಮಕ್ಕಳಿಗೆ ವಸತಿ ನಿಲಯಗಳು, ಶಿಕ್ಷಕರ ತರಬೇತಿ ಕಾಲೇಜು ಆರಂಭಿಸಬೇಕಿದೆ. ಗಡಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಕನ್ನಡ ಶಿಕ್ಷಕರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವಾಗಬೇಕು. ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ, ಕಸಾಪ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ವಿವಿಗಳಿಂದ ನಾಡು, ನುಡಿ, ಸಂಸ್ಕ್ರತಿ ಉಳಿಸುವ ಕಾರ್ಯಕ್ರಮಗಳನ್ನು ಗಡಿಭಾಗದಲ್ಲಿ ಮೇಲಿಂದ ಮೇಲೆ ನಡೆಸಬೇಕು. ಕನ್ನಡಾಭಿಮಾನದಿಂದ ರಾಜ್ಯದಲ್ಲಿ ವ್ಯಾಸಂಗ ಮಾಡಲು ಹೊರಟರೆ ಜಾತಿ ಮತ್ತು ವ್ಯಾಸಂಗ ಪ್ರಮಾಣ ಪತ್ರಗಳ ಕಾರಣದಿಂದ ಸೌಲಭ್ಯ ವಂಚಿತರಾಗುತ್ತಾರೆ. ಜಾತಿ ಆಧಾರದ ಮೇಲೆ ಸಿಗುವ ಸೌಲಭ್ಯ ಸಿಗುತ್ತಿಲ್ಲ. ಹಾಗೆಯೇ ವಿದ್ಯಾರ್ಥಿ ವೇತನಗಳಿಗೆ ಆಂಧ್ರ ಪ್ರದೇಶದ ಪ್ರಮಾಣ ಪತ್ರವನ್ನು ಸ್ವೀಕರಿಸುತ್ತಿಲ್ಲ. ಹೀಗಾಗಿ ಹೆಚ್ಚು ಅಂಕಗಳಿಸಿದರೂ ಕರ್ನಾಟಕದಲ್ಲಿ ವಿದ್ಯಾ - ಉದ್ಯೋಗಗಳಿಗೆ ಅವಕಾಶ ಸಿಗುತ್ತಿಲ್ಲ. ದೇಶದ ಎಲ್ಲಿಯೇ ಆದರೂ ಹತ್ತನೇ ತರಗತಿವರಗೆ ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಕರ್ನಾಟಕದಲ್ಲಿ ಉನ್ನತ ಶಿಕ್ಷಣದಲ್ಲಿ ಮೀಸಲಾತಿ ಕಲ್ಪಿಸಲಾಗಿದೆ. ಆದರೆ, ಅದು ಕಾಗದಲ್ಲಿ ಮಾತ್ರ ಇದೆ. ನೀವು ಆಂಧ್ರದವರು ಎಂದು ಕರ್ನಾಟಕದಲ್ಲಿ ತಿರಸ್ಕರಿಸುತ್ತಾರೆ. ನೀವು ಕನ್ನಡ ಮಾಧ್ಯಮದಲ್ಲಿ ಓದಿದವರು ಎಂದು ಆಂಧ್ರದಲ್ಲಿ ತಿರಸ್ಕರಿಸುತ್ತಾರೆ. ಹೀಗೆ ಗಡಿನಾಡಿನ ಕನ್ನಡ ಶಾಲೆಗಳಲ್ಲಿ ಓದಿದ ಮಕ್ಕಳು ಅತಂತ್ರರಾಗಿದ್ದಾರೆ.
ಉದ್ಯೋಗದ ನಿರಾಸೆ : ಆಂಧ್ರದಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳಿಗೆ ಶಿಕ್ಷಕರ ನೇಮಕಾತಿಯಲ್ಲಿ ಕೆಲ ಕೆಲ ಶಾಲೆಗಳೇ ಇರುವುದರಿಂದ ಐದಾರು ವರ್ಷಕೊಮ್ಮೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಸ್ಥಳಿಯವಾಗಿ ತೆಲುಗು ಹಾಗೂ ಅಂಗ್ಲಕ್ಕೆ ಹೆಚ್ಚು ಒತ್ತು ನೀಡುವುದರಿಂದ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಖಾಸಗಿ ಕಂಪನಿಗಳಲ್ಲಿ ಉದ್ಯೋಗ ದೊರೆಯುವುದು ಕಷ್ಟ. ಆದ್ದರಿಂದ, ಹಲವು ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಆಸೆ ಬಿಟ್ಟು ಕೃಷಿ ಹಾಗೂ ಇತರೆ ಚಟುವಟಿಕೆಗಳಲ್ಲಿ ಪಾಲ್ಗೂಳುತ್ತಾರೆ.
ಕೋಟ್... ಕನ್ನಡ ಶಾಲೆಗಳಿಗೆ ಗೌರವ ಶಿಕ್ಷಕರನ್ನು ನೇಮಕ ಮಾಡಿ ಕನ್ನಡ ವಿದ್ಯಾರ್ಥಿಗಳನ್ನು ಉಳಿಸಿಕೊಳ್ಳುವುದು. ರಾಜ್ಯದ ಎಲ್ಲ ವಿದ್ಯಾರ್ಥಿ ಸಿಗುವ ಸೌಲಭ್ಯಗಳು ಗಡಿಭಾಗದ ವಿದ್ಯಾರ್ಥಿಗಳಿಗೆ ವಿಸ್ತರಿಸಬೇಕು. ಪಠ್ಯ ಪುಸ್ತಕಗಳನ್ನು ವಿಳಂಬವಾಗದಂತೆ ಸಕಾಲಕ್ಕೆ ಪೂರೈಸಬೇಕು.
- ಗಿರಿಜಾಪತಿ ಮಠ, ಸಹ ಶಿಕ್ಷಕ, ಜಿಲ್ಲಾ ಪರಿಷತ್ ಹೈ ಸ್ಕೂಲ್, ಎಚ್. ಸಿದ್ದಾಪುರ, ಡಿ. ಹಿರೇಹಾಳ್..
ಕೋಟ್... ಗಡಿಭಾಗದ ಕನ್ನಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣ ಕೈಗೊಳ್ಳಲು ರಾಜ್ಯದ ವಸತಿ ನಿಲಯಗಳಲ್ಲಿ ಪ್ರವೇಶಾತಿ ಕಲ್ಪಿಸಬೇಕು. ಮೀಸಲಾತಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಉದ್ಯೋಗ ನೀಡಬೇಕು. ಬಸ್‌ಪಾಸ್ ಹಾಗೂ ಗಡಿ ಗ್ರಾಮದಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸಬೇಕು.
- ಸಿದ್ದರಾಮ ಕಲ್ಮಠ, ಜಿಲ್ಲಾಧ್ಯಕ್ಷ , ನಿಕಟ ಪೂರ್ವ ಕಸಾಪ, ಬಳ್ಳಾರಿ.