ಯಳಂದೂರು: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಹೆಚ್ಚಳ ಸೇರಿದಂತೆ ಅವರ ಸಮಸ್ಯೆಗಳನ್ನು ಸದನದಲ್ಲಿ ಚರ್ಚಿಸಿ ಸರ್ಕಾರದ ಗಮನ ಸೆಳೆದು ಇದಕ್ಕೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ಕ್ರಮ ವಹಿಸುತ್ತೇನೆ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಭರವಸೆ ನೀಡಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಮತ್ತು ಶಿಶು ಅಭಿವೃದ್ಧಿ ಇಲಾಖೆಯ ವತಿಯಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಫೋನ್‌ಗಳನ್ನು ವಿತರಿಸಿ ಮಾತನಾಡಿದರು.
ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಹಿರಿದಾಗಿದೆ. ಇವರು ಗ್ಯಾರಂಟಿ ಯೋಜನೆಯ ಅನುಷ್ಠಾನದ ವಿಷಯದಲ್ಲೂ ಇದನ್ನು ಫಲಾನುಭವಿಗಳಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ನಮ್ಮ ಜಿಲ್ಲೆಯಲ್ಲಿ ಇನ್ನೂ 11 ರಿಂದ 12 ಸಾವಿರ ಫಲಾನುಭವಿಗಳಿಗೆ ಈ ಯೋಜನೆ ವಿವಿಧ ತಾಂತ್ರಿಕ ಕಾರಣಗಳಿಂದ ತಲುಪಿಲ್ಲ. ಇದಕ್ಕಾಗಿಯೇ ಪ್ರತಿ ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಯನ್ನು ಅನುಷ್ಠಾನಗೊಳಿಸಲು ಸಮಿತಿಗಳನ್ನು ರಚಿಸಿದ್ದು, ಇದಕ್ಕೆ ಅಧ್ಯಕ್ಷರನ್ನು ನೇಮಿಸಲಾಗಿದೆ. ರಾಜ್ಯ ಸರ್ಕಾರದ ಮುಂದೆ ಅರೆಕಾಲಿಕ ಉಪನ್ಯಾಸಕರು, ಶಿಕ್ಷಕರ ವೇತನ ಜಾರಿ ಸೇರಿದಂತೆ ಅನೇಕ ಸವಾಲುಗಳಿದ್ದು, ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆಗಳನ್ನು ಸಹ ಹಂತಹಂತವಾಗಿ ಬಗೆಹರಿಸಲಾಗುವುದು ಎಂದರು.
ಗ್ಯಾರಂಟಿ ಯೋಜನೆ ನಿಲ್ಲುವುದಿಲ್ಲ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಇದು ಬಡವರಿಗೆ ಜಾರಿಗೆ ತಂದಿರುವ ಯೋಜನೆಯಾಗಿದ್ದು, ಇದನ್ನು ಜಾತಿ, ಧರ್ಮ, ಪಕ್ಷಬೇಧವಿಲ್ಲದೆ ಎಲ್ಲಾ ಬಡವರಿಗೂ ತಲುಪಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದರು.
ತಾಲೂಕಿನಲ್ಲಿ 10 ಶಿಥಿಲ ಅಂಗನವಾಡಿ ಕಟ್ಟಡಗಳ ದುರಸ್ತಿ, 12 ನಿವೇಶನವಿಲ್ಲದ ಅಂಗನವಾಡಿಗಳು ಹಾಗೂ 26 ಅಂಗನವಾಡಿಗಳಿಗೆ ಕುಡಿಯುವ ನೀರಿನ ಸೌಲಭ್ಯವಿಲ್ಲ ಎಂದು ಸಿಡಿಪಿಒ ಮಾಹಿತಿ ನೀಡಿದ್ದಾರೆ. ಕೂಡಲೇ ಈ ಬಗ್ಗೆ ಕ್ರಮ ವಹಿಸಲಾಗುವುದು. ಅಂಗನವಾಡಿಗೆ ಪೂರೈಕೆ ಆಗುತ್ತಿರುವ ಪೌಷ್ಟಿಕ ಆಹಾರ ಸರಿಯಿಲ್ಲ ಎಂಬುದರ ಬಗ್ಗೆ ಅನೇಕ ದೂರುಗಳಿವೆ. ಈ ಬಗ್ಗೆ ಇಡೀ ರಾಜ್ಯದ ಮೂಲಕ ಇದು ಪೂರೈಕೆಯಾಗುತ್ತಿದೆ. ಇದು ರಾಜ್ಯದ ಇತರೆ ಜಿಲ್ಲೆಗಳ ಸಮಸ್ಯೆಯೂ ಆಗಿದ್ದು ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಮಂತ್ರಿಗಳೊಂದಿಗೆ ಚರ್ಚಿಸಿ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.
ಸಿಡಿಪಿಒ ಎಸ್. ಸಕಲೇಶ್ವರ್ ಮಾತನಾಡಿ, ನಮ್ಮ ರಾಜ್ಯದಲ್ಲಿ ಒಟ್ಟು 78,938 ಜನರಿಗೆ, ನಮ್ಮ ಜಿಲ್ಲೆಯಲ್ಲಿ 1558 ಜನರಿಗೆ ಹಾಗೂ ನಮ್ಮ ತಾಲೂಕಿನಲ್ಲಿ 105 ಜನರಿಗೆ ಸ್ಮಾರ್ಟ್ ಫೋನ್‌ಗಳನ್ನು ವಿತರಣೆ ಮಾಡಲಾಗುತ್ತಿದೆ. ಇಲಾಖೆಯ ಎಲ್ಲಾ ಕೆಲಸಗಳನ್ನು ಇದರ ಮೂಲಕ ಕಾಗದ ರಹಿತವಾಗಿ ನಿರ್ವಹಿಸಲು ಆಪ್ ಅಭಿವೃದ್ಧಿ ಮಾಡಲಾಗಿದ್ದು, ಇದರ ಬಳಕೆ ಕಡ್ಡಾಯವಾಗಿರುತ್ತದೆ. ಪ್ರತಿ ತಿಂಗಳು ಏರ್‌ಟೆಲ್ ಕಂಪೆನಿಯ ಸಿಮ್‌ಗೆ ಇಲಾಖೆಯ ವತಿಯಿಂದ 167 ರೂ.ಗಳ ರೀಚಾರ್ಜ್ ಮಾಡಿಕೊಳ್ಳಲು ಇಲಾಖೆಯೇ ಹಣ ಭರಿಸಲಿದೆ. ಪ್ರತಿನಿತ್ಯ 1 ಜಿಬಿ ಡಾಟಾ ಉಚಿತವಾಗಿರುತ್ತದೆ. ಇದನ್ನು ಇಲಾಖೆಯ ಕೆಲಸಕ್ಕೆ ಬಳಸಿಕೊಳ್ಳಲು ಮಾತ್ರ ಅವಕಾಶವಿದ್ದು ಇದರ ಸದ್ಬಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಅಧ್ಯಕ್ಷ ಎಚ್.ವಿ. ಚಂದ್ರು, ಜಿಪಂ ಮಾಜಿ ಉಪಾಧ್ಯಕ್ಷ ಜೆ. ಯೋಗೇಶ್, ಇಲಾಖೆಯ ಜಿಲ್ಲಾ ಸಂಚಾಲಕ ಚೇತನ್ ಮಾತನಾಡಿದರು. ಪಪಂ ಸದಸ್ಯೆ ಪ್ರಭಾವತಿ, ಸಿಪಿಐ ಆರ್. ಶ್ರೀಕಾಂತ್, ಮೇಲ್ವಿಚಾರಕಿ ಸರಸ್ವತಿ, ಕಂದಹಳ್ಳಿ ನಂಜುಂಡಸ್ವಾಮಿ ಸೇರಿದಂತೆ ಅನೇಕರು ಹಾಜರಿದ್ದರು.
15 ವೈಎಲ್‌ಡಿ 1: ಯಳಂದೂರು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಶಾಸಕ ಎ.ಆರ್. ಕೃಷ್ಣಮೂರ್ತಿ ಸ್ಮಾರ್ಟ್ ಫೋನ್‌ಗಳನ್ನು ವಿತರಣೆ ಮಾಡಿದರು. ಎಚ್.ವಿ. ಚಂದ್ರು, ಜೆ. ಯೋಗೇಶ್ ಮತ್ತಿತರರಿದ್ದರು.