ವಿಜಯಪುರ: ಜಗತ್ತಿಗೆ ಶಾಂತಿ, ಅಹಿಂಸೆ ಮತ್ತು ಸತ್ಯದ ದಾರಿ ತೋರಿದ ಮಹಾನ್ ದಾರ್ಶನಿಕ ಗೌತಮ ಬುದ್ಧ ಎಂದು ಠಾಣೆ ಮುಂಬಯಿ ಮತ್ತು ಪಂಢರಪುರದ ಫಾರ್ಮಸಿ ಕಾಲೇಜಿನ ವಿಶ್ರಾಂತ ಪ್ರಾಚಾರ್ಯ ಡಾ. ಜೆ.ಎಸ್. ಪಾಟೀಲ ಹೇಳಿದರು.
ನಗರ ಹೊರವಲಯದ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಡಾ. ಬಿ. ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರ ಮತ್ತು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳ ಘಟಕದ ಸಹಯೋಗಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಗೌತಮ ಬುದ್ಧನ 2569ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಾನವೀಯ ಮೌಲ್ಯಗಳನ್ನು ಸಾರಿದ ಮಹಾಚೇತನರ ತತ್ವಗಳು ಜೀವನದ ಪರಿಪೂರ್ಣತೆಗೆ ದಾರಿ ತೋರಿಸುತ್ತವೆ. ಬುದ್ಧ ಸ್ಥಾಪಿಸಿದ ಬೌದ್ಧ ಧರ್ಮವು ಭಾರತದ ಮೂಲೆ ಮೂಲೆಯಲ್ಲೂ ಹರಡಿದ್ದು, ಸಾವಿರಾರು ಜನರಿಗೆ ನೆಮ್ಮದಿಯ ಜೀವನ ನೀಡಿದೆ. ಆದರೆ ಇಂದಿನ ಕೆಲ ಆಚರಣೆಗಳು ಮತ್ತು ಸಂಪ್ರದಾಯಗಳು ಮೌಢ್ಯದಿಂದ ಕೂಡಿವೆ ಎಂಬುದು ವಿಷಾದಕರ. ಬುದ್ಧ, ಬಸವ, ಅಂಬೇಡ್ಕರ್ ಅವರು ಬೋಧಿಸಿದ ತತ್ವಗಳನ್ನು ಅನುಸರಿಸುವ ಮೂಲಕ ನಾವೆಲ್ಲರೂ ಸಮಾನತೆ, ಶಾಂತಿ ಮತ್ತು ನೈತಿಕ ಮೌಲ್ಯಗಳ ನಿರ್ಮಿಸಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಹಿಳಾ ವಿವಿಯ ಹಂಗಾಮಿ ಕುಲಪತಿ ಪ್ರೊ. ಶಾಂತಾದೇವಿ ಟಿ. ಮಾತನಾಡಿ, ಇಂದಿನ ಮೋಸ, ದರೋಡೆ, ಕೊಲೆ ಸೇರಿದಂತೆ ವಿವಿಧ ಕುಕೃತ್ಯಗಳ ಕಾಲದಲ್ಲಿ ಗೌತಮ ಬುದ್ಧನ ತತ್ವ ಆದರ್ಶಗಳು ಅಪಾರ ಪ್ರಸ್ತುತತೆ ಹೊಂದಿವೆ ಎಂಬುದು ಸತ್ಯ. ನಾವು ಬುದ್ಧನ ಸನ್ಮಾರ್ಗದಲ್ಲಿ ನಡೆಯುತ್ತಿದ್ದರೆ, ಜೀವನ ಉಜ್ವಲ ಮತ್ತು ಸಾರ್ಥಕತೆ ಹೊಂದುತ್ತದೆ ಎಂದು ಹೇಳಿದರು.
ಕುಲಸಚಿವ ಶಂಕರಗೌಡ ಸೋಮನಾಳ ವಿದ್ಯಾರ್ಥಿನಿಯರಿಗೆ ರಸಪ್ರಶ್ನೆಗಳನ್ನು ಕೇಳುವ ಮೂಲಕ ಉತ್ಸಾಹ ಮತ್ತು ಪ್ರೇರಣೆ ತುಂಬಿದರು. ಉಪನ್ಯಾಸಕರಾದ ಮಹೇಶ ಚಿಂತಾಮಣಿ, ಪಿ ಕಣ್ಣನ್, ಡಿ.ಎಂ. ಮದರಿ, ಸಕ್ಪಾಲ್ ಹೂವಣ್ಣ, ವೆಂಕೋಬಾ ಎನ್., ಡಾ. ರಮೇಶ ಸೊನಕಾಂಬಳೆ ಮತ್ತಿತರರಿದ್ದರು.
ಡಾ. ಸಂಜೀವ ಕುಮಾರಗಿರಿ ಸ್ವಾಗತಿಸಿದರು. ಡಾ. ಕಲಾವತಿ ಕಾಂಬಳೆ ನಿರೂಪಿಸಿ ವಂದಿಸಿದರು.