ಅಜ್ಜಂಪುರ ತಾಲೂಕು ಗಡಿಹಳ್ಳಿಯಲ್ಲಿ ನಡೆದ ತತ್ವಪದಕಾರರ ಜಿಲ್ಲಾ ಸಮ್ಮೇಳನವನ್ನು ಜಾನಪದ ಪ್ರಶಸ್ತಿ ಪುರಸ್ಕೃತ ಅಪ್ಪಗೆರೆ ತಿಮ್ಮರಾಜು ಉದ್ಘಾಟಿಸಿದರು. ಸೂರಿ ಶ್ರೀನಿವಾಸ್, ಹನುಮಕ್ಕ, ರವಿ, ಪ್ರಕಾಶ್, ವಿಶಾಲಕ್ಷಮ್ಮ, ಚಂದ್ರಶೇಖರ ಆಚಾರ್ ಇತರರಿದ್ದರು. 
ಜಿಲ್ಲೆ

ಸಮ ಸಮಾಜ ನಿರ್ಮಾಣಕ್ಕೆ ಬುನಾದಿ ಹಾಕಿದ ತತ್ವಪದ

ಡೂರು: ಹದಿನೆಂಟನೇ ಶತಮಾನದಲ್ಲಿ ರಾಜರ ಆಡಳಿತ ಅಂತ್ಯಗೊಂಡಾಗ ಸಮ ಸಮಾಜ ನಿರ್ಮಾಣದ ಕಲ್ಪನೆ ಹಾಗೂ ಅದಕ್ಕೆ ಬುನಾದಿ ಹಾಕಿದವರೇ ತತ್ವಪದಕಾರರು ಎಂದು ಜಾನಪದ ಪ್ರಶಸ್ತಿ ಪುರಸ್ಕೃತ ಅಪ್ಪಗೆರೆ ತಿಮ್ಮರಾಜು ತಿಳಿಸಿದರು.

ಅಜ್ಜಂಪುರ ತಾಲೂಕಿನ ಗಡಿಹಳ್ಳಿಯಲ್ಲಿ ಶನಿವಾರ ಜಿಲ್ಲಾ ಕಸಾಪ ಹಾಗೂ ಕಾಳಿಕಾಂಬಾ ದೇವಾಲಯ ಸಮಿತಿ ನೇತೃತ್ವದಲ್ಲಿ ಆಯೋಜಿಸಿದ್ದ ಜಿಲ್ಲಾ ಪ್ರಥಮ ತತ್ವಪದಕಾರರ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, 12ನೇ ಶತಮಾನದಲ್ಲಿ ಬಸವಣ್ಣನವರು ಮತ್ತು ಶರಣರ ಕಲ್ಪನೆಯನ್ನು ತತ್ವಪದಕಾರರು ಜಾರಿಗೆ ತಂದರು ಎಂದರು.
ಸಮಾಜದ ಋಣ ತೀರಿಸಬೇಕು, ಕಲಿತ ಋಣ ತೀರಿಸಬೇಕು ಎಂಬಂತೆ ಈ ಜಾಗದಲ್ಲಿ ಶ್ರೀ ಗುರು ಗೋವಿಂದಾರ್ಯರ ಪ್ರಭಾವ ಬಹಳಷ್ಟಿದೆ. ತತ್ವಪದಗಳಲ್ಲಿ ನೀತಿ ಅಡಕವಾಗಿದೆ. ಸಂತರು, ಸಾಧರು, ತತ್ವಪದಕಾರರು ಯಾವುದೇ ವ್ಯಾಮೋಹವಿಲ್ಲದೆ ಹಾಡಿ ಸಂಭ್ರಮಿಸಿದವರು. ರಾಜ್ಯದಲ್ಲೇ ಮೊದಲು ಇಲ್ಲಿ ತತ್ವಪದ ಸಮ್ಮೇಳನ ನಡೆಯುತ್ತಿದೆ ಎಂದು ತಿಳಿಸಿದರು.
ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ತತ್ವಪದವೆಂಬ ಪ್ರಕಾರ ಬಯಲು ಸೀಮೆಗಳಲ್ಲಿ ಅತಿ ಹೆಚ್ಚಾಗಿ ಕಂಡುಬರುತ್ತಿದ್ದು, ಈ ನೆಲದ ಸೊಗಡು ಅದರಲ್ಲಿ ಹೆಚ್ಚುತ್ತಿದೆ. ಭಜನೆಗಳ ರೂಪಾಂತರವೇ ತತ್ವಪದ. ಜೀವನವನ್ನು ತಿದ್ದುವ ಶಕ್ತಿ ಇದೆ. ಶ್ರೀಗುರು ಗೋವಿಂದಾರ್ಯರ ಮಠ ಈ ಸ್ಥಳದ ವಿಶೇಷ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಕಾಯಕ ನಮ್ಮದಾಗಬೇಕು. ಆ ಪ್ರಕಾರವನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಕಸಾಪ ನಿರಂತರವಾಗಿ ಮಾಡಲಿದೆ ಎಂದರು.
ಸಮ್ಮೇಳನಾಧ್ಯಕ್ಷೆ ಹನುಮಕ್ಕ ತತ್ವಪದಗಳನ್ನು ಹಾಡುವ ಮೂಲಕ ಸಮ್ಮೇಳನದ ಗಮನ ಸೆಳೆದರು. ಕಸಾಪ ತಾಲೂಕು ಅಧ್ಯಕ್ಷ ರವಿ ದಳವಾಯಿ, ಬಿ.ಪ್ರಕಾಶ್, ಚಂದ್ರಶೇಖರ ಆಚಾರ್, ಎಂ.ಎಸ್.ವಿಶಾಲಾಕ್ಷಮ್ಮ, ಇಮ್ರಾನ್ ಅಹಮದ್ ಬೇಗ್, ಜಿ.ಎಲ್.ಮಂಜುನಾಥ್ ಮಾತನಾಡಿದರು.
ಸಮಾರಂಭದಲ್ಲಿ ಮಾಳೇನಳ್ಳಿ ಬಸಪ್ಪ, ಮುಗುಳಿ ಗ್ರಾಪಂ ಅಧ್ಯಕ್ಷ ತಿಮ್ಮಯ್ಯ, ಮುಗುಳಿ ಲಕ್ಷ್ಮೀದೇವಮ್ಮ, ಮಂಜಯ್ಯ, ಕಡೂರು ತಾಲೂಕು ಕಸಾಪ ಅಧ್ಯಕ್ಷ ಸಿಂಗಟಗೆರೆ ಸಿದ್ದಪ್ಪ, ಅಜ್ಜಂಪುರ ತಾಲೂಕು ಕಸಾಪ ಅಧ್ಯಕ್ಷ ಎಚ್.ಆರ್.ಚಂದ್ರಪ್ಪ, ಕುಪ್ಪಾಳು ಶಾಂತಮೂರ್ತಿ, ವಿಜಯಕುಮಾರಿ, ತ.ಮ.ದೇವಾನಂದ, ಗಾಯತ್ರಿ, ಚಿಕ್ಕನಲ್ಲೂರು ಪರಮೇಶ್, ಕಾಟಿಗನೆಗೆರೆ ಸತೀಶ್ ಇದ್ದರು.