ಜಿಲ್ಲೆ

ನೆಮ್ಮದಿಯ ಜೀವನಕ್ಕೆ ಸಹಕಾರ ತತ್ವ ಮುಖ್ಯ: ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದಜೀ

ಮೈಸೂರು: ನಾವೆಲ್ಲಾ ಮನುಷ್ಯರಾಗಿದ್ದು ಪರಸ್ಪರ ಸೌಹಾರ್ದದಿಂದ ಸಮಾಜದಲ್ಲಿ ಬೆಳೆಯಬೇಕು, ಬದುಕಬೇಕು. ಪರಸ್ಪರ ಸಹಕಾರ ಎಂಬುದು ನಮ್ಮ ಕುಟುಂಬದ ಜೀವನ ಹಾಗೂ ವೃತ್ತಿಪರ ಜೀವನದಲ್ಲಿ ಅತ್ಯಂತ ಮುಖ್ಯವಾಗಿ ಅವಶ್ಯಕತೆ ಇದೆ ಎಂದು ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದಜೀ ಹೇಳಿದರು.

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯಿಂದ ಹಿರಿಯ, ಕಿರಿಯ ಅಧಿಕಾರಿಗಳು ಹಾಗೂ ಜಿಲ್ಲಾ ಸಂಯೋಜಕರಿಗಾಗಿ ನಗರದ ಕೆಆರ್‌ಎಸ್ ರಸ್ತೆಯಲ್ಲಿರುವ ರಾಮಕೃಷ್ಣ ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕೌಶಲ ಅಭಿವೃದ್ಧಿ ತರಬೇತಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಎಲ್ಲ ರೀತಿಯ ವಿಕೋಪ, ಋಣಾತ್ಮಕ, ನಕಾರಾತ್ಮಕ ಭಾವನೆಗೆ ಸೌಹಾರ್ದದ ತರಬೇತಿ ಮುಖ್ಯ. ಸಹಕಾರ ಸಂಸ್ಥೆಗಳಿಗೆ ಸಂಬಂಧಿಸಿದಂತೆ ನಿಯಮಾನುವಳಿಗಳನ್ನು ಮಾಡಿದ್ದು, ಅದರಂತೆ ಕೆಲಸ ನೀಡುತ್ತಿರುವುದು ಸಂತೋಷದ ವಿಷಯ ಎಂದರು.

ಮನುಷ್ಯರಾದ ನಾವೆಲ್ಲಾ ಪರಸ್ಪರ ಸೌಹಾರ್ದದಿಂದ ಸಮಾಜದಲ್ಲಿ ಬೆಳೆಯಬೇಕು. ಸಹಕಾರ ಎನ್ನುವುದು ನಮ್ಮ ಕುಟುಂಬದ ಜೀವನ ಹಾಗೂ ವೃತ್ತಿಪರ ಜೀವನದಲ್ಲಿ ಅತ್ಯಂತ ಮುಖ್ಯವಾಗಿದೆ ಎಂದು ಸಲಹೆ ನೀಡಿದರು.

ಎಲ್ಲ ಸಹಕಾರ ಸಂಘದ ಜತೆಗೆ ಹಾಲು ಉತ್ಪಾದಕರ ಸಂಘದಲ್ಲಿ ಪ್ರತಿಯೊಬ್ಬರಿಗೂ ಉತ್ತಮವಾದ ಹಾಲನ್ನು ನೀಡುವಂತಹ ವ್ಯವಸ್ಥೆ ನಮ್ಮ ಸಹಕಾರಿಯಲ್ಲಿದೆ. ತರಬೇತಿಯಲ್ಲಿರುವಂತಹ ಪ್ರತಿಯೊಬ್ಬರು ನೈಪುಣ್ಯತೆ, ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು. ಪ್ರತಿಯೊಂದು ತರಬೇತಿಯಲ್ಲಿ ವಿವಿಧ ವಿಷಯದ ಬಗ್ಗೆ ನಿಮಗೆ ಅರಿವು ಮೂಡಿಸಲಿದ್ದು ಅದನ್ನು ಆಸಕ್ತಿಯಿಂದ ಗ್ರಹಿಸಿ ಮಾಹಿತಿ ಪಡೆದುಕೊಳ್ಳಬೇಕು ಎಂದು ಹೇಳಿದರು.

ಸಹಕಾರ ಯೂನಿಯನ್ ಅಧ್ಯಕ್ಷ ಎಚ್.ವಿ.ರಾಜೀವ್ ಮಾತನಾಡಿ, ಸಹಕಾರ ಸಂಘದ ಸದಸ್ಯರು, ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಉತ್ತಮ ಸಂಬಂಧ ಕಾಯ್ದುಕೊಳ್ಳಬೇಕು. ಸಹಕಾರ ಕಾಯ್ದೆ, ಕಾನೂನನ್ನು ಅರಿತುಕೊಳ್ಳಬೇಕು. ಸಂಘದಲ್ಲಿ ಯಾವುದೇ ಸಮಸ್ಯೆ ಎದುರಾದಾಗ ಸಹಕಾರ ಇಲಾಖೆಯ ಗಮನಕ್ಕೆ ತಂದು ಪರಿಹರಿಸಿಕೊಂಡು ಸಂಘವನ್ನು ಸುಗಮವಾಗಿ ಮುನ್ನಡೆಸುವ ಕಡೆಗೆ ಪ್ರಥಮ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಎಲ್ಲರೂ ಆರೋಗ್ಯ ಹಾಗೂ ಕುಟುಂಬದ ಜತೆ ಸೌಹಾರ್ದ ಪಡೆದುಕೊಂಡರೆ ಗುಣಾತ್ಮಕ ಜೀವನ ನಡೆಸಬಹುದು. ಪ್ರಸ್ತುತ ಆಧುನಿಕ ಪ್ರಪಂಚದಲ್ಲಿ ಮನಸ್ಸಿನ ನೆಮ್ಮದಿ ಇಲ್ಲದಿರುವಂತಹ ಕುಟುಂಬಗಳನ್ನು ನೋಡುತ್ತಿದ್ದೇವೆ. ಹಾಗಾಗಿ ಆಶ್ರಮದಲ್ಲಿ ಆಯೋಜಿಸಿರುವ ಈ ತರಬೇತಿಯಲ್ಲಿ ಅರಿವು ಮಾಡಿಸಿಕೊಳ್ಳಬೇಕಾಗಿದೆ ಎಂದರು.

ಸಹಕಾರ ಚಳವಳಿ ಮೈಸೂರಿನಲ್ಲಿ ನಾವು ಅಂದುಕೊಂಡಿರುವಷ್ಟು ಮುಂದೆ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಆಧ್ಯಾತ್ಮಿಕ ಕಲ್ಪನೆ ಸೃಜನಶೀಲ ನುಡಿಯನ್ನು ತಿಳಿಸುವಂತಹ ಕೆಲಸವನ್ನು ಶ್ರೀ ರಾಮಕೃಷ್ಣ ಮಾಡುತ್ತಿದ್ದು ಅದನ್ನು ಸದುಪಯೋಗ ಮಾಡಿಕೊಳ್ಳಿ ಎಂದರು.

ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಶಾಸನಬದ್ಧ ಸಹಕಾರಿ ಸಂಸ್ಥೆ ಮಹಾಮಂಡಳದಿಂದ ಸಹಕಾರ ಸಂಘ ಸಂಸ್ಥೆಗಳ ಸಿಬ್ಬಂದಿಗೆ ತಜ್ಞರಿಂದ ತರಬೇತಿ ಕೊಡಿಸುವುದು ಅಗತ್ಯವಾಗಿದೆ. ಇದರಿಂದ ಸಂಘದ ಚುನಾಯಿತ ಸದಸ್ಯರು ಸುಗಮವಾಗಿ ಆಡಳಿತ ನಡೆಸುವ ತಿಳಿವಳಿಕೆ ಬರಲಿದೆ. ಹಾಗೆಯೇ ಸಿಬ್ಬಂದಿಗೂ ಸಹಕಾರ ಸಂಘದ ಹೊಸ ಕಾನೂನುಗಳ ಅರಿವು ಮೂಡಲಿದೆ ಎಂದು ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಅಧ್ಯಕ್ಷ ಜಿ.ನಂಜನಗೌಡ ಅಧ್ಯಕ್ಷತೆ ವಹಿಸಿದ್ದರು. ಶ್ರೀರಾಮಕೃಷ್ಣ ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆ ಸಂಚಾಲಕ ಸ್ವಾಮಿ ಮಹಾಮೇದಾನಂದ, ಸಹಕಾರ ಸಂಘಗಳ ಹೆಚ್ಚುವರಿ ನಿಬಂಧಕ ಸಿ.ಎನ್.ಪರಶಿವಮೂರ್ತಿ, ನಿರ್ದೇಶಕ ಎಸ್.ಕೆ.ಮಂಜುನಾಥ್, ಸೌಹಾರ್ದ ಸಹಕಾರಿ ದಾವಾ ಪಂಚಾಯಿತಿ ನ್ಯಾಯಾಲಯದ ಪೀಠಾಧಿಕಾರಿ ಕೆ.ಗಗನಾ, ಸಹಕಾರ ಸಂಘಗಳ ಜಂಟಿ ನಿಬಂಧಕ ಸಿ.ಪ್ರಸಾದರೆಡ್ಡಿ, ವ್ಯವಸ್ಥಾಪಕ ನಿರ್ದೇಶಕ ಶರಣಗೌಡ ಜಿ.ಪಾಟೀಲ ಇತರರಿದ್ದರು.