ಜಿಲ್ಲೆ

ಪರಿಸರದ ಉಳಿವಿಗೆ, ರಕ್ಷಣೆಗೆ ಪಣ ತೊಟ್ಟ ಪ್ರಧಾನಿ

ಸಿದ್ದಾಪುರ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅ. 1ರಂದು ದೇಶದೆಲ್ಲೆಡೆ ಪರಿಸರದ ಉಳಿವಿನ ದೃಷ್ಟಿಯಿಂದ ಸ್ವಚ್ಛತಾ ಅಭಿಯಾನ ನಡೆಸಬೇಕೆಂದು ಕರೆ ಕೊಟ್ಟ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ದೇಶದ ಪ್ರಧಾನಿಯಾದ ಕ್ಷಣದಲ್ಲೇ ನಾನು ಈ ದೇಶದ ಸೇವಕ ಎಂದ ಮೋದಿ ಅವರು ಪರಿಸರದ ಉಳಿವಿಗೆ, ಅದರ ರಕ್ಷಣೆಗೆ ಹಿಂದಿನಿಂದಲೂ ಹೆಚ್ಚಿನ ಗಮನ ನೀಡುತ್ತ ಬಂದಿದ್ದಾರೆ ಎಂದು ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.


ಭಾನುವಾರ ತಾಲೂಕಿನ ಕೋಲಸಿರ್ಸಿ ಗ್ರಾಮ ಪಂಚಾಯಿತಿ, ಧನ್ವಂತರಿ ಆಯುರ್ವೆದ ಮಹಾವಿದ್ಯಾಲಯ, ತಾಲೂಕಿನ ವಿವಿಧ ಸಂಘ-ಸಂಸ್ಥೆಗಳು, ಸಾರ್ವಜನಿಕರು ಹಾಗೂ ಬಿಜೆಪಿ ಕಾರ್ಯಕರ್ತರೊಂದಿಗೆ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.


ಚಂದ್ರಯಾನ, ಆರ್ಥಿಕ ಅಭಿವೃದ್ಧಿ ಮೂಲಕ ವಿಶ್ವದಲ್ಲಿ ನಮ್ಮ ದೇಶದ ಶಕ್ತಿಯನ್ನು ತೋರಿಸಿದ್ದಾರೆ. ಮಹಿಳಾ ಮೀಸಲಾತಿಯನ್ನು ತರುವ ಮೂಲಕ ಜಗತ್ತಿನ ಗಮನ ಸೆಳೆದಿದ್ದಾರೆ. ಪರಿಸರದ ಉಳಿವು ಜನಾಂದೋಲನವಾಗುವ ಉದ್ದೇಶ ಅವರದ್ದು. ನಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮ ಧ್ಯೇಯವಾಗಬೇಕು. ಆ ಮೂಲಕ ಪ್ರಕೃತಿಯನ್ನು ಉಳಿಸಿಕೊಂಡು ಹವಾಮಾನ ವೈಪರೀತ್ಯ, ಅಧಿಕ ತಾಪಮಾನ ಮುಂತಾದ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಮುಂದಾಗಬೇಕು ಎಂದರು.


ಶಿಕ್ಷಣ ಪ್ರಸಾರಕ ಸಮಿತಿ ಉಪಾಧ್ಯಕ್ಷ ಶಶಿಭೂಷಣ ಹೆಗಡೆ, ಕೋಲಸಿರ್ಸಿ ಗ್ರಾಪಂ ಅಧ್ಯಕ್ಷೆ ಹೇಮಾವತಿ ಗೌಡರ್, ಸದಸ್ಯ ಕೆ.ಆರ್. ವಿನಾಯಕ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ರಾಘವೇಂದ್ರ ಶಾಸ್ತ್ರಿ , ಪ್ರಮುಖರಾದ ರವಿ ಹೆಗಡೆ ಹೂವಿನಮನೆ, ಗುರುರಾಜ ಶಾನಭಾಗ, ಮಂಜುನಾಥ ಭಟ್, ಸುರೇಶ ಬಾಲಿಕೊಪ್ಪ, ತಿಮ್ಮಪ್ಪ ಎಂ.ಕೆ., ಮಾರುತಿ ನಾಯ್ಕ, ತೋಟಪ್ಪ ನಾಯ್ಕ, ಆಯುರ್ವೆದ ಕಾಲೇಜಿನ ಪ್ರಾಚಾರ್ಯು ರೂಪಾ ಭಟ್ ಹಾಗೂ ಸಿಬ್ಬಂದಿ ಇದ್ದರು.