ಬಾಗಲಕೋಟೆ : ಏನ ಹೇಳಲ್ರಿ ಸಾಹೇಬ್ರ.. ಬಡವರು ಬದುಕೋ ಕಾಲ ಹೋಗೈತ್ರಿ… ನೋಡ್ರಿ ಇಲ್ಲಿ ಮಾರ್ಕೆಟ್‌ದಾಗ ಯಾವುದೇ ಕಾಯಿಪಲ್ಲೆ ತೊಗೊಂಡ್ರೂ ಬರೋಬ್ಬರಿ ನೂರ ರೂಪಾಯಿ ಕೊಡಬೇಕು.
ಇಲ್ಲ ಅಂದ್ರ ಅರ್ಧ ಕೆಜಿ, ಪಾವ ಕೆಜಿ ತೊಗೊಂಡು ಜೀವನ ಮಾಡಬೇಕು. ತರಕಾರಿ ರೇಟ್ ಭಾಳ ಆಗೈತ್ರಿ…ಜೇಬು ಖಾಲಿ ಮಾಡಿಕೊಂಡೇ ಮನೆಗೆ ವಾಪಸ್ ಹೋಗುವಂತಾಗೈತಿ !!
ಜಿಲ್ಲೆಯ ಬಾಗಲಕೋಟೆ, ಜಮಖಂಡಿ, ಮುಧೋಳ, ಬಾದಾಮಿ, ಹುನಗುಂದ, ಇಳಕಲ್ಲ, ಗುಳೇದಗುಡ್ಡ, ಬೀಳಗಿ ಸೇರಿ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದ ಯಾವುದೇ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಸುವ ಜನರಿಂದ ಹೊರಹೊಮ್ಮುವ ಮಾತಿದು.
ತರಕಾರಿ ಬೆಲೆ ಕೇಳಿಯೇ ಗ್ರಾಹಕರು ಸುಸ್ತಾಗುತ್ತಿದ್ದಾರೆ. ಗಗನಕ್ಕೆ ಏರಿರುವ ಬೆಲೆಯಿಂದಾಗಿ ವ್ಯಾಪಾರಸ್ಥರು ಹದ್ದಿನ ಕಣ್ಣು ಇಟ್ಟು ತರಕಾರಿ ಕಾವಲು ಮಾಡುತ್ತಿದ್ದಾರೆ.
ಬೆಳೆ, ಹಣ್ಣುಗಳಂತೆ ತರಕಾರಿ ಬೆಲೆಯೂ ದೊಡ್ಡಮಟ್ಟದಲ್ಲಿ ಏರಿಕೆಯಾಗಿರುವುದು ಚರ್ಚೆಗೆ ಗ್ರಾಸವಾಗಿದೆ. ಬೆಲೆ ಏರಿಕೆ ಹಿಂದೆ ಏನಾದರೂ ಕಾರಣವಿದೆಯಾ ಎನ್ನುವುದಕ್ಕೆ ಸ್ಪಷ್ಟವಾದ ಉತ್ತರ ದೊರೆಯದೆ ಜನ ಕಂಗಾಲಾಗಿದ್ದಾರೆ.
ಬೇಸಿಗೆ ಸಂದರ್ಭದಲ್ಲಿ ಏಪ್ರಿಲ್, ಮೇ ತಿಂಗಳಿನಲ್ಲಿ ನಡೆಯುವ ಶುಭ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ತರಕಾರಿ ಬೆಲೆ ಏರಿಕೆಯಾಗಬೇಕಿತ್ತು.
ಆಗ ಆವಕ ಪ್ರಮಾಣ ಹೆಚ್ಚಾಗಿದ್ದರಿಂದ ತರಕಾರಿಗೆ ಸೂಕ್ತ ಬೆಲೆ ದೊರೆಯದೆ ರೈತರು ನಷ್ಟ ಅನುಭವಿಸಬೇಕಾಯಿತು. ಈಗ ಮುಂಗಾರು ಮಳೆ ಬಾರದೆ ತರಕಾರಿ ಬೆಳೆಯಲು ಹಿನ್ನಡೆ ಉಂಟಾಗಿದೆ.
ಇದರಿಂದ ಮಾರುಕಟ್ಟೆಗೆ ಬೇಡಿಕೆಯಷ್ಟು ತರಕಾರಿ ಪೂರೈಕೆಯಾಗುತ್ತಿಲ್ಲ. ಇದು ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.
ಬೇರೆ ಜಿಲ್ಲೆಯ ತರಕಾರಿ ಬರುತ್ತಿಲ್ಲ: ಜಿಲ್ಲೆಯ ವಿವಿಧ ಭಾಗಗಳಲ್ಲಿ ತರಕಾರಿ ಬೆಳೆಯುವುದು ಸಾಮಾನ್ಯ. ಮಳೆ ಬಾರದ್ದಕ್ಕೆ ತರಕಾರಿ ಬಿತ್ತನೆ ಪ್ರಮಾಣ ಶೇ.50 ರಷ್ಟು ಕುಸಿತವಾಗಿದೆ. ಇನ್ನು ಬೆಳಗಾವಿ, ದಾವಣಗೆರೆ, ಕೊಪ್ಪಳ ಜಿಲ್ಲೆಗಳಿಂದ ಟೊಮ್ಯಾಟೊ, ಮೆಣಸಿನಕಾಯಿ, ಕ್ಯಾಪಸಿಕಂ, ಸೌತೆಕಾಯಿ ಸೇರಿ ಇನ್ನಿತರ ಪ್ರಮುಖ ತರಕಾರಿ ಜಿಲ್ಲೆಯ ಮಾರುಕಟ್ಟೆಗೆ ಆವಕ ಆಗುತ್ತಿತ್ತು. ಎರಡು ತಿಂಗಳಿನಿಂದ ಆವಕ ಪ್ರಮಾಣ ಶೇ.60 ರಷ್ಟು ಕುಸಿತವಾಗಿದೆ. ಹೀಗಾಗಿ ತರಕಾರಿ ಬೆಲೆ ಆಕಾಶದೆತ್ತರಕ್ಕೆ ಜಿಗಿತಗೊಂಡಿದೆ.
ಮಾರುಕಟ್ಟೆಯಲ್ಲಿ ತರಕಾರಿ ಆವಕ ಪ್ರಮಾಣ ಬಹಳಷ್ಟು ಕುಸಿತವಾಗಿದೆ. ಬೇರೆ ಜಿಲ್ಲೆಯಿಂದ ಬರುವ ತರಕಾರಿ ಬರುತ್ತಿಲ್ಲ. ಬೇಸಿಗೆ ಸಂದರ್ಭದಲ್ಲಿ ಬೆಲೆ ಕುಸಿತ ಪರಿಣಾಮ ತರಕಾರಿ ಬೆಳೆಯಲು ರೈತರು ಮುಂದಾಗಲಿಲ್ಲ. ಮಳೆಯೂ ಕೈಕೊಟ್ಟಿದ್ದರಿಂದ ಮುಂಗಾರು ಹಂಗಾಮಿನಲ್ಲಿ ಬಿತ್ತನೆಯೂ ಕಡಿಮೆ ಆಗಿದೆ. ಇದರಿಂದ ತರಕಾರಿ ಮಾರುಕಟ್ಟೆಗೆ ಬಾರದೆ ಬೆಲೆ ಜಾಸ್ತಿ ಆಗಿದೆ. ಅಜೀದ ದೊಡ್ಡಮನಿ, ಹಣ್ಣು-ತರಕಾರಿ ವರ್ತಕರು
ತರಕಾರಿ ಬೆಳೆ ನೂರು ಗಡಿ ದಾಟಿದೆ. ಬಡವರು, ಕಾರ್ಮಿಕರು, ಮಧ್ಯಮ ವರ್ಗದವರು ಜೀವನ ನಡೆಸುವುದು ಕಷ್ಟವಾಗಿದೆ. ದುಬಾರಿ ಕಾಲದಲ್ಲಿ ಉಪವಾಸ ಗತಿ ಎನ್ನುವಂತಾಗಿದೆ. ಮಾರ್ಕೇಟ್ ಅಂದ್ರೇ ಎದೆ ಢವ ಢವ ಎನ್ನುವಂತಾಗಿದೆ. ಲಕ್ಷ್ಮೀ ಅಂಬಿಗೇರ ಬಾಗಲಕೋಟೆ
ಮಾರುಕಟ್ಟೆಯಲ್ಲಿ ತರಕಾರಿ ಬೆಲೆ(1 ಕೆ.ಜಿಗೆ) ತರಕಾರಿ- ಅಂದು-ಇಂದು ಟೊಮೆಟೊ-40-120 ಬೆಂಡೆಕಾಯಿ-30-60 ಮೆಣಸಿನಕಾಯಿ-30-100 ಕ್ಯಾಪಸಿಕಂ-30-60 ಹಿರೇಕಾಯಿ-40-80 ಚವಳಿಕಾಯಿ-30-80 ಸೌತಿಕಾಯಿ-40-80 ಕ್ಯಾರೇಟ್ -20-60 ಈರುಳ್ಳಿ-15-30