ಚಿಕ್ಕಮಗಳೂರಿನ ಟಿಎಂಎಸ್ ಸಂಸ್ಥೆ ಆವರಣದಲ್ಲಿ ವಿಜಯವಾಣಿ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮದಲ್ಲಿ ನಿವೃತ್ತ ಕ್ಯಾಪ್ಟನ್ ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು. 
ಜಿಲ್ಲೆ

ಸೈನಿಕರ ಸಮವಸ್ತ್ರಕ್ಕೆ ಸಿಗುವ ಬೆಲೆ ಬೇರೆಯದಕ್ಕಿಲ್ಲ

ಚಿಕ್ಕಮಗಳೂರು: ಸೈನಿಕರ ಸಮವಸ್ತ್ರಕ್ಕೆ ಸಿಗುವ ಬೆಲೆ ಬೇರೆ ಯಾವುದೇ ಸಮವಸ್ತ್ರಕ್ಕೂ ಸಿಗಲು ಸಾಧ್ಯವಿಲ್ಲ. ದೇಶಕ್ಕಾಗಿ ತಮ್ಮನ್ನು ತಾವು ಸಮರ್ಪಣೆ ಮಾಡಿಕೊಳ್ಳುವ ಸೈನಿಕರು, ಎಂತಹದ್ದೇ ಪರಿಸ್ಥಿತಿಯಲ್ಲಿಯೂ ದೇಶವೇ ಮೊದಲು ಎನ್ನುವ ಮನಸ್ಥಿತಿ ಹೊಂದಿರುತ್ತಾರೆ ಎಂದು ನಿವೃತ್ತ ಕ್ಯಾಪ್ಟನ್ ಮಂಜುನಾಥ್ ತಿಳಿಸಿದರು.

ನಗರದ ಟಿಎಮ್ಎಸ್ ಕಾಲೇಜಿನಲ್ಲಿ ವಿಜಯವಾಣಿ ಕನ್ನಡ ದಿನಪತ್ರಿಕೆ, ಶ್ರೀ ಬೀರೇಶ್ವರ ಕೋ ಆಪ್ ಕ್ರೆಡಿಟ್ ಸೊಸೈಟಿ, ವಂದೇ ಮಾತರಂ ಟ್ರಸ್ಟ್ ಹಾಗೂ ಟಿಎಂಎಸ್ ಸಂಸ್ಥೆಯಿಂದ ಆಯೋಜಿಸಲಾಗಿದ್ದ ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ಸೈನ್ಯಕ್ಕೆ ಸೇರಿದರೆ ಸಾಯುತ್ತೇವೆ ಎನ್ನುವುದು ತಪ್ಪು ಕಲ್ಪನೆ. ಸಾಯಬೇಕು ಎಂದಾದಲ್ಲಿ ಎಲ್ಲಿದ್ದರೂ ಸಾವನ್ನಪ್ಪುತ್ತೇವೆ. ಅದೇ ಸೈನ್ಯದಲ್ಲಿದ್ದು ಮೃತಪಟ್ಟರೆ ನಮ್ಮ ದೇಹದ ಮೇಲೆ ಭಾರತದ ಧ್ವಜವಿರುತ್ತದೆ. ಇದಕ್ಕಿಂತ ಗೌರವ ಇನ್ನೊಂದು ಇರಲು ಸಾಧ್ಯವಿಲ್ಲ. ಹೀಗಾಗಿ ಯುವ ಜನತೆ ಸೈನ್ಯಕ್ಕೆ ಸೇರಲು ಮುಂದಾಗಬೇಕು ಎಂದು ಕರೆ ನೀಡಿದರು.
ಕಾರ್ಗಿಲ್ ಯುದ್ಧವನ್ನು ಭಾರತ ಏಕಾಂಗಿಯಾಗಿ ಮಾಡಬೇಕಾಯಿತು. ಅಂದು ನಮ್ಮ ಬೆಂಬಲಕ್ಕೆ ಇಸ್ರೇಲ್ ಹೊರತುಪಡಿಸಿ ಬೇರೆ ಯಾವುದೇ ದೇಶಗಳು ನಿಲ್ಲಲಿಲ್ಲ. ಈ ಯುದ್ಧದಲ್ಲಿ ಭಾರತದ 527 ಸೈನಿಕರು ಪ್ರಾಣ ಕಳೆದುಕೊಂಡರು. ಆದರೆ ನಮ್ಮ ಶತ್ರು ಸೈನ್ಯದ ನಾಲ್ಕು ಸಾವಿರಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡರು. ಪಾಕಿಸ್ತಾನಕ್ಕೆ ದೊಡ್ಡ ಮಟ್ಟದ ಹೊಡೆತ ಬಿದ್ದ ಕಾರಣಕ್ಕೆ ಪಾಕ್ ಪ್ರಧಾನಿ ಅಮೆರಿಕ ಅಧ್ಯಕ್ಷರ ಮೊರೆ‌ಹೋಗಿ ಯುದ್ಧ ನಿಲ್ಲಿಸುವಂತೆ ಮನವಿ ಮಾಡಿದ್ದರು. ಆದರೆ ಭಾರತ ಮಾತ್ರ ಯಾವುದೇ ಒತ್ತಡಕ್ಕೂ ಮಣಿಯದೆ ಪಾಕಿಸ್ತಾನವನ್ನು ಯುದ್ಧದಲ್ಲಿ ಮಣಿಸಿಯೇ ತೀರಿತು ಎಂದು ಹೇಳಿದರು.
ಕಾರ್ಯಕ್ರಮವನ್ನು ಟಿಎಂಎಸ್ ಅಧ್ಯಕ್ಷೆ ಗೀತಾ ಎಂ.ಎಲ್.ಮೂರ್ತಿ ಉದ್ಘಾಟಿಸಿದರು. ಶ್ರೀ ಬೀರೇಶ್ವರ ಕೋ ಅಪ್ ಕ್ರೆಡಿಟ್ ಸೊಸೈಟಿ ಶಾಖಾ ವ್ಯವಸ್ಥಾಪಕ ವಿಠಲ ಪೂಜಾರಿ, ವಿಜಯವಾಣಿ ಸ್ಥಾನಿಕ ಸಂಪಾದಕ ಶೃಂಗೇರಿ ಚಂದ್ರಶೇಖರ್, ವಂದೇಮಾತರಮ್ ಟ್ರಸ್ಟ್ ನ ಪ್ರೀತೇಶ್, ಪ್ರಮುಖರಾದ ಸರ್ವಮಂಗಳ ಮತ್ತಿತರರಿದ್ದರು.