ಜಿಲ್ಲೆ

ಕಬ್ಬು, ಮೆಕ್ಕೆಜೋಳದ ತರಗೆಲೆಗೆ ಬಂಗಾರದ ಬೆಲೆ!

ಮೈಸೂರು: ಅನುಪಯುಕ್ತವಾಗಿ ಬೆಂಕಿಗೆ ತುತ್ತಾಗುತ್ತಿದ್ದ ಕಬ್ಬು ಮತ್ತು ಮೆಕ್ಕೆಜೋಳದ ತರಗೆಲೆ ಈಗ ಬಹುಬೇಡಿಕೆಯ ಸರಕಾಗಿದ್ದು, ಬಂಗಾರದ ಬೆಲೆ ಬಂದಿದೆ. ಅದರಲ್ಲೂ ತರಗೆಲೆಗೆ ಮೈಸೂರು ಜಿಲ್ಲೆಯಲ್ಲಿ ಬೇಡಿಕೆ ಹೆಚ್ಚಾಗಿದೆ.

ಅನುಪಯುಕ್ತವಾಗಿ ಕೃಷಿ ಭೂಮಿಯಲ್ಲಿ ಬೂದಿಯಾಗುತ್ತಿದ್ದ ಕಬ್ಬು ಮತ್ತು ಜೋಳದ ತರಗಿಗೆ ಶುಂಠಿ ಬೆಳೆಯಿಂದ ಶುಕ್ರದೆಸೆ ಆರಂಭವಾಗಿದ್ದು, ಕಬ್ಬು-ಜೋಳದ ಬೆಳೆಗಾರರಿಗೆ ಶುಂಠಿ ಬೆಳೆಗಾರರು ವರದಾನವಾಗಿದ್ದಾರೆ. ಶುಂಠಿಗೆ ಈ ಬಾರಿ ಚಿನ್ನದ ಬೆಲೆ ಬಂದಿದ್ದು, ಇತರ ಬೆಳೆ ಬೆಳೆಯುತ್ತಿದ್ದ ರೈತರೂ ಶುಂಠಿ ಬೆಳೆಯತ್ತ ಮುಖ ಮಾಡಿದ್ದಾರೆ. ಪರಿಣಾಮ ಶುಂಠಿ ಬಿತ್ತನೆ ಮಾಡಿ, ಅದರ ಮೇಲೆ ಹೊದಿಕೆಗೆ ಬಳಸುವ ಕಬ್ಬು ಮತ್ತು ಜೋಳದ ತರಗಿಗೆ ಬೇಡಿಕೆ ಹೆಚ್ಚಿದೆ.

ಒಂದು ಕಾಲದಲ್ಲಿ ಕಟಾವು ಕೆಲಸ ಮುಗಿದ ನಂತರ ಕಬ್ಬು ಮತ್ತು ಜೋಳದ ತರಗಿಗೆ ಬೆಂಕಿ ಹಚ್ಚುತ್ತಿದ್ದ ರೈತರೀಗ ಪ್ರತಿ ಎಕರೆಗೆ 8 ರಿಂದ 10 ಸಾವಿರ ರೂ. ತರಗಿನಿಂದಲೇ ಸಂಪಾದನೆ ಮಾಡುತ್ತಿದ್ದಾರೆ. ಶುಂಠಿ ಬಿತ್ತನೆ ಮಾಡಿದಾಗ ಅದರ ಮೇಲೆ ಸೂರ್ಯನ ತಾಪ ಬೀಳದಂತೆ ಮರೆಯಾಗಿ ಭತ್ತದ ಹುಲ್ಲು ಹಾಕುವುದು ವಾಡಿಕೆಯಾಗಿತ್ತು. ಆದರೆ, ಭತ್ತದ ಹುಲ್ಲಿನ ಬೆಲೆ ದುಬಾರಿಯಾದ ಪರಿಣಾಮ ಶುಂಠಿ ಬೆಳೆಗಾರರು ಪರ್ಯಾಯವಾಗಿ ಕಬ್ಬಿನ ತರಗು ಮತ್ತು ಮುಸುಕಿನ ಜೋಳದ ಕಡ್ಡಿಯ ಮೊರೆಹೋದರು. ಇದರಿಂದ ಸಹಜವಾಗಿ ಕಬ್ಬು ಮತ್ತು ಜೋಳದ ತರಗಿಗೆ ಬೇಡಿಕೆ ಹೆಚ್ಚಿದೆ.

ಕಲ್ಪವೃಕ್ಷವಾದ ಕಬ್ಬು:

ಸಾಮಾನ್ಯವಾಗಿ ಕಬ್ಬಿನಿಂದ ಬೆಲ್ಲ, ಸಕ್ಕರೆ ಜತೆಗೆ ಎಥೆನಾಲ್ ಅನ್ನೂ ಉತ್ಪಾದನೆ ಮಾಡಲಾಗುತ್ತದೆ. ಹಾಗೆಯೇ ಕಬ್ಬಿನ ಸಿಪ್ಪೆಯನ್ನು ಉರುವಲಾಗಿ ಬಳಕೆ ಮಾಡಲಾಗುತ್ತದೆ. ಕಬ್ಬು ಕಟಾವು ಬಳಿಕ ಕೃಷಿ ಭೂಮಿಯಲ್ಲಿ ಉಳಿಯುತ್ತಿದ್ದ ತರಗೆಲೆ ಮಾತ್ರ ಅನುಪಯುಕ್ತ ಎಂದು ರೈತರು ಬೆಂಕಿ ಹಚ್ಚುತ್ತಿದ್ದರು. ಆದರೆ ಶುಂಠಿ ಬೆಳೆಗೆ ತರಗೆಲೆ ಪೂರಕವಾಗಿರುವುದನ್ನು ಅರಿತ ರೈತರು ಒಂದು ಲೋಡ್ ತರಗೆಲೆಗೆ 8ರಿಂದ 10 ಸಾವಿರ ರೂ.ಗೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಕಬ್ಬು, ಜೋಳ ಬೆಳೆಯುವ ರೈತರ ಆದಾಯವೂ ವೃದ್ಧಿಸಿದ್ದೂ, ರೈತರ ಪಾಲಿಗೆ ಕಬ್ಬು ಕಲ್ಪವೃಕ್ಷವಾದಂತಾಗಿದೆ.

ಕೋಳಿ ಗೊಬ್ಬರಕ್ಕೂ ಬೇಡಿಕೆ:

ಒಂದು ಕಾಲದಲ್ಲಿ ನೂರಿನ್ನೂರು ರೂ.ಗೆ ಮಾರಾಟವಾಗುತ್ತಿದ್ದ ಕೋಳಿ ಗೊಬ್ಬರಕ್ಕೆ ಶುಂಠಿ ಬೆಳೆಯಿಂದಾಗಿ ಉತ್ತಮ ಬೆಲೆ ಸಿಗುತ್ತಿದೆ. 25 ಕೆ.ಜಿ. ಕೋಳಿ ಗೊಬ್ಬರ ಪ್ರಸ್ತುತ 110ರಿಂದ 120 ರೂ.ಗೆ ಮಾರಾಟವಾಗುತ್ತಿದ್ದು, ಒಂದು ಟನ್‌ಗೆ 4ರಿಂದ 5 ಸಾವಿರ ರೂ.ಗೆ ಮಾರಾಟವಾಗುತ್ತಿದೆ. ಒಟ್ಟಾರೆ ಶುಂಠಿ ಬೆಳೆಗಾರರ ಪ್ರಮಾಣ ಹೆಚ್ಚಿದಂತೆ ಕೋಳಿ ಗೊಬ್ಬರ ಮತ್ತು ಕಬ್ಬು, ಜೋಳದ ತರಗಿಗೆ ಬೇಡಿಕೆ ಹೆಚ್ಚಿದೆ. ಪರಿಣಾಮ ಕೋಳಿ ಗೊಬ್ಬರ ಮತ್ತು ಕಬ್ಬು, ಜೋಳ ತ್ಯಾಜ್ಯಕ್ಕೂ ಬಂಗಾರದ ಬೆಲೆ ಸಿಗುತ್ತಿದೆ.

ನಿತ್ಯ 20ರಿಂದ 30 ಲೋಡ್ ಸಾಗಾಟ: ಮಂಡ್ಯ, ಕೆ.ಆರ್.ನಗರ ಭಾಗಗಳಿಂದ ಪಿರಿಯಾಪಟ್ಟಣ, ಹುಣಸೂರು, ಕೊಡಗು ಭಾಗಕ್ಕೆ ನಿತ್ಯ ಟ್ರಾೃಕ್ಟರ್‌ಗಳಲ್ಲಿ 20ರಿಂದ 30 ಲೋಡ್ ಕಬ್ಬಿನ ತರಗು ಸಾಗಾಟವಾಗುತ್ತಿದೆ. ಕಳೆದೊಂದು ವರ್ಷದಿಂದ 60 ಕೆ.ಜಿ. ಶುಂಠಿಗೆ 4ರಿಂದ 5 ಸಾವಿರ ರೂ. ಬೆಲೆ ಸಿಗುತ್ತಿದ್ದು, ತಂಬಾಕು ಹೆಚ್ಚಾಗಿ ಬೆಳೆಯುವ ಈ ಭಾಗದಲ್ಲಿ ಬಹುಪಾಲು ರೈತರು ಶುಂಠಿ ಬೆಳೆಯುತ್ತಿದ್ದಾರೆ.

ಬೆಂಕಿ ಹಾಕುವುದು ತಪ್ಪುತ್ತಿದೆ:

ಕಬ್ಬು ಕಟಾವಾದ ಬಳಿಕ ಕಬ್ಬನಿನ ತರಗಿಗೆ ರೈತರು ಬೆಂಕಿ ಹಾಕುತ್ತಾರೆ. ಈ ವೇಳೆ ಕಬ್ಬಿನ ಗದ್ದೆಯಲ್ಲಿ ಬೆಳೆದಿದ್ದ ತೆಂಗಿನ ಮರ ಸೇರಿದಂತೆ ಅನೇಕ ಮರಗಳಿಗೆ ಸಮಸ್ಯೆಯಾಗುತ್ತದೆ. ಕೆಲವೊಮ್ಮೆ ಪಕ್ಕದ ಜಮೀನಿಗೂ ಬೆಂಕಿ ತಗುಲಿ ಸಮಸ್ಯೆಯಾಗಿರುವುದನ್ನು ಕಂಡಿದ್ದೇವೆ. ಜತೆಗೆ ವಾಯು ಮಾಲಿನ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದೀಗ ಕಬ್ಬಿನ ತರಗಿಗೆ ಬೇಡಿಕೆ ಸೃಷ್ಟಿಯಾಗಿರುವುದರಿಂದ ಈ ಎಲ್ಲ ಸಮಸ್ಯೆಗೂ ಮುಕ್ತಿ ಸಿಕ್ಕಿದಂತಾಗಿದೆ. ಜತೆಗೆ ರೈತರಿಗೂ ಕೊಂಚ ಆರ್ಥಿಕವಾಗಿ ಅನುಕೂಲವಾಗಿದೆ.

ಶುಂಠಿ ಬೆಳೆಗಾರರು ಪ್ರತಿ ಲೋಡ್ ಕಬ್ಬಿನ ತರಗೆಲೆಗೆ 8ರಿಂದ 9 ಸಾವಿರ ರೂ. ನೀಡಿ ಕೊಂಡೊಯ್ಯುತ್ತಿದ್ದಾರೆ. ಇದರಿಂದ ನಮಗೂ ಲಾಭವಾಗುತ್ತಿದೆ. ಕಳೆದೆರಡು ವರ್ಷಗಳ ಹಿಂದೆ ತ್ಯಾಜ್ಯವೆಂದು ಗದ್ದೆಯಲ್ಲಿ ತರಗೆಲೆಗೆ ಬೆಂಕಿ ಇಡುತ್ತಿದ್ದೆವು. ಈಗ ಅದಕ್ಕೂ ಬೆಲೆ, ಬೇಡಿಕೆ ಬಂದಿದೆ. ಇದರಿಂದ ನಮ್ಮ ಆದಾಯವೂ ವೃದ್ಧಿಸಿದೆ.ಸ್ವಾಮಿಗೌಡ, ಕಬ್ಬು ಬೆಳೆಗಾರ ಕೆ.ಆರ್. ನಗರ