The price of a person with humanity 
ಜಿಲ್ಲೆ

ಮಾನವೀಯತೆ ಹೊಂದಿರುವ ವ್ಯಕ್ತಿಗೆ ಬೆಲೆ

ಜಮಖಂಡಿ: ದೇವಾಲಯದಲ್ಲಿ ಮೂರ್ತಿ ಇದ್ದರೆ ದೇವಾಲಯಕ್ಕೆ, ಅಡುಗೆಯಲ್ಲಿ ಉಪ್ಪು ಇದ್ದರೆ ಅಡುಗೆಗೆ ಬೆಲೆ ಬರುತ್ತದೆ. ಹಾಗೆಯೇ ಮಾನವನಲ್ಲಿ ಮಾನವೀಯತೆ ಇದ್ದರೆ ಮಾತ್ರ ಬೆಲೆ ಇರುತ್ತದೆ ಎಂದು ಜಮಖಂಡಿಯ ಓಲೇಮಠದ ಆನಂದ ದೇವರು ಶ್ರೀಗಳು ಹೇಳಿದರು.

ತಾಲೂಕಿನ ಹುಲ್ಯಾಳ ಗ್ರಾಮದ ಶ್ರೀ ಗುರುದೇವಾಶ್ರಮದ ಶ್ರೀ ಗುರುದೇವ ಸತ್ಸಂಗ ಬಳಗದ ಆಶ್ರಯದಲ್ಲಿ ಪ್ರತಿ ತಿಂಗಳು ನಾಲ್ಕನೆಯ ಭಾನುವಾರ ಹಮ್ಮಿಕೊಳ್ಳುವ ಶ್ರೀ ಗುರುದೇವ ಸತ್ಸಂಗ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ, ‘ಮೊದಲು ಮಾನವನಾಗು’ ಎಂಬ ವಿಷಯ ಕುರಿತು ಅವರು ಅನುಭಾವ ಹಂಚಿಕೊಂಡು ಆಶೀರ್ವಚನ ನೀಡಿದರು.

ಬಾಹ್ಯದಿಂದ ಅಂದವಾಗಿದ್ದರೆ ಸಾಲದು, ಅಂತರಂಗದಲ್ಲಿಯೂ ಅಂದವಾಗಿದ್ದಾಗ ಮಾನವನಾಗಲು ಸಾಧ್ಯ. ಯಾರನ್ನೂ ದ್ವೇಷಿಸಬಾರದು. ಸ್ವಾರ್ಥ ಪರ ಪ್ರೀತಿ ಇಟ್ಟುಕೊಳ್ಳಬಾರದು. ಬೆಂಕಿ ಹಚ್ಚಿದವರ ಮನೆಗೂ ಜ್ಯೋತಿ ಹಚ್ಚುವ ಕೆಲಸ ಮಾಡುವವರ ಮನೆಯನ್ನೂ ಭಗವಂತ ಬೆಳಗುತ್ತಾನೆ. ಭಗವಂತನ ಕ್ಯಾಮರಾ ಕಣ್ಣು ಸದಾ ನೋಡುತ್ತಿರುತ್ತದೆ ಎಂಬ ಅರಿವು ಇಟ್ಟುಕೊಂಡು ಸ್ನೇಹಭಾವದಿಂದ ಬದುಕಿದರೆ ಭಗವಂತನ ಆಶೀರ್ವಾದ ಸಿಗುತ್ತದೆ ಎಂದರು.

ಗುರುದೇವಾಶ್ರಮದ ಹರ್ಷಾನಂದ ಮಹಾಸ್ವಾಮಿಗಳು ಮಾತನಾಡಿ, ಅತಿಯಾಸೆ ಮತ್ತು ದುರಾಸೆ ಬಿಟ್ಟರೆ ಮಾನವರಾಗಲು ಸಾಧ್ಯ. ಪುಸ್ತಕಗಳನ್ನು ಓದುವುದರಿಂದ ಮಾನವರಾಗಬಹುದು. ಪುಸ್ತಕಗಳು ಮಾನವರನ್ನಾಗಿಸುತ್ತವೆ ಎಂದು ಆಶೀರ್ವಚನ ನೀಡಿದರು.

ಬಸವಜ್ಯೋತಿ ಶಿಕ್ಷಣ ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿ ಪ್ರೊ. ಬಸವರಾಜ ಕಡ್ಡಿ ಮಾತನಾಡಿ, ಸತ್ಯ, ಸಮತೆ, ಪ್ರಾಮಾಣಿಕತೆ, ಸಹಕಾರ, ವೈಚಾರಿಕತೆ, ನಯವಿನಯ ಎಂಬ ಸಂಸ್ಕಾರ ಅವಳವಡಿಸಿಕೊಂಡಾಗ ಅಂತರಂಗ ಪರಿಶುದ್ಧವಾಗಿ ಬಹಿರಂಗ ಕ್ರಿಯೆಗಳು ಪರಿಶುದ್ಧಗೊಳ್ಳುತ್ತವೆ. ಆಗ ದೈವತ್ವದ ಅನುಭವವಾಗಿ ಮಾನವ ಶರಣನಾಗುತ್ತಾನೆ ಎಂದರು.

ಪಶುವೈದ್ಯ ಡಾ.ಹನುಮಂತ ಬಟಕುರ್ಕಿ ಅವರ ವಿರಚಿತ ‘ಅನುಭವದ ಅಮೃತವಾಣಿ’ ಆಧುನಿಕ ವಚನಗಳ ಕೃತಿಯನ್ನು ಬಿಡುಗಡೆ ಮಾಡಲಾಯಿತು. ನಿವೃತ್ತ ಶಿಕ್ಷಕ ಗುರುನಾಥ ಸುತಾರ ಕೃತಿ ಪರಿಚಯಿಸಿದರು.

ದುಂಡಯ್ಯ ಹಿರೇಮಠ ಶಾಸಿ, ಪುಂಡಲೀಕ ಶಾಸಿ, ಪತ್ರಕರ್ತ ಶಿವಾನಂದ ಕೊಣ್ಣೂರ ಇದ್ದರು. ಮಹಾಪ್ರಸಾದದ ದಾಸೋಹ ಸೇವೆಗೈದ ಡಾ.ಹನುಮಂತ ಬಟಕುರ್ಕಿ, ಶ್ರೀಶೈಲ ಬಣ್ಣದಗೌಡ ದಂಪತಿಯನ್ನು ಸನ್ಮಾನಿಸಲಾಯಿತು.

ಗುರುದೇವ ಸಂಗೀತ ಬಳಗದ ಕಲಾವಿದರಾದ ಗುರುಬಸುಗೌಡ ಪಾಟೀಲ, ಸಿದ್ದು ಉಪ್ಪಲದಿನ್ನಿ, ಪರಮೇಶ್ವರ ತೇಲಿ, ಶಿವಾನಂದ ಬಾಡನವರ, ರವಿ ಹುಲ್ಯಾಳ ಸಂಗೀತ ಸೇವೆ ಸಲ್ಲಿಸಿದರು. ಬಸವಜ್ಯೋತಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಡಾ.ಟಿ.ಪಿ. ಗಿರಡ್ಡಿ ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿದರು. ಸಂಗಮೇಶ ತೆಲಸಂಗ ನಿರೂಪಿಸಿದರು.