ಚಿಕ್ಕಮಗಳೂರಿನಲ್ಲಿ ಆಯುಧ ಪೂಜೆ ಅಂಗವಾಗಿ ಕುಂಬಳಕಾಯಿ ಖರೀದಿಯಲ್ಲಿ ತೊಡಗಿರುವ ಗ್ರಾಹಕರು. 
ಜಿಲ್ಲೆ

ದಸರಾ ಹಬ್ಬಕ್ಕೆ ಬೆಲೆ ಏರಿಕೆ ಬಿಸಿ

ಚಿಕ್ಕಮಗಳೂರು: ಬೆಲೆ ಏರಿಕೆ ನಡುವೆಯೂ ದಸರಾ ಹಬ್ಬಕ್ಕೆ ಹೂವು, ಹಣ್ಣು, ತರಕಾರಿಗಳ ಖರೀದಿ ಭರಾಟೆ ಜೋರಾಗಿತ್ತು. ನಗರದ ಎಂಜಿ ರಸ್ತೆ, ಐಜಿ ರಸ್ತೆ, ಬೇಲೂರು ರಸ್ತೆ, ಮಾರುಕಟ್ಟೆ ರಸ್ತೆಯಲ್ಲಿ ವ್ಯಾಪಾರ ಭರ್ಜರಿಯಾಗಿ ನಡೆಯಿತು.

ಆಯುಧ ಪೂಜೆಯ ಮುನ್ನಾ ದಿನವಾದ ಗುರುವಾರ ನಗರದ ಮಾರುಕಟ್ಟೆ ಪ್ರದೇಶದಲ್ಲಿ ಜನ ಮುಗಿಬಿದ್ದು ಖರೀದಿಗೆ ಮುಂದಾಗಿದ್ದರು. ಬಾಳೆ ಕಂದುಗಳು ಹಾಗೂ ಕುಂಬಳಕಾಯಿಗಳ ಖರೀದಿ ಜೋರಾಗಿತ್ತು.
ದಸರಾ ಹಬ್ಬದ ಹಿನ್ನೆಲೆಯಲ್ಲಿ ಹೂವು ಹಣ್ಣುಗಳ ಬೆಲೆ ಗಗನಕ್ಕೇರಿತ್ತು. ಸಾಮಾನ್ಯ ದಿನಗಳಲ್ಲಿ ೮೦ ರೂಪಾಯಿ ಇದ್ದ ಬಾಳೆ ಹಣ್ಣಿನ ಬೆಲೆ ಹಬ್ಬದ ಹಿನ್ನೆಲೆಯಲ್ಲಿ ೧೦೦ರಿಂದ ೧೨೦ ರೂಪಾಯಿಗೆ ಹೆಚ್ಚಾಗಿತ್ತು. ಇನ್ನು ಸೇಬು ಬೆಲೆ ೧೫೦ ರೂಪಾಯಿ ಗಡಿ ದಾಟಿತ್ತು. ಕಿತ್ತಳೆ ಬೆಲೆ ೭೦ ರೂಪಾಯಿ, ದಾಳಿಂಬೆ ಬೆಲೆ ೨೦೦ ರೂಪಾಯಿಗೆ ಏರಿಕೆಯಾಗಿತ್ತು.
ಇನ್ನು ಹೂವಿನ ಬೆಲೆಯೂ ಭಾರಿ ಪ್ರಮಾಣದಲ್ಲಿ ಏರಿಕೆಯಾಗುವ ಮೂಲಕ ಗ್ರಾಹಕರ ಜೇಬಿಗೆ ಕತ್ತರಿ ಹಾಕಿತ್ತು. ಆಯುಧ ಪೂಜೆಯಲ್ಲಿ ಪ್ರಮುಖವಾಗಿ ಬಳಸುವ ಚೆಂಡು ಹೂವಿನ ಬೆಲೆ ೮೦ ರೂಪಾಯಿಯಿಂದ ೧೨೦ ರೂಪಾಯಿಯಿತ್ತು. ಸೇವಂತಿಗೆ ೧೨೦ ರೂಪಾಯಿಯಿತ್ತು.
ಆಯುಧ ಪೂಜೆ ಹಾಗೂ ವಿಜಯದಶಮಿ ಹಿನ್ನೆಲೆಯಲ್ಲಿ ಕುಂಬಳಕಾಯಿ ಹಾಗೂ ಬಾಳೆ ಕಂದುಗಳಿಗೆ ಭಾರಿ ಡಿಮ್ಯಾಂಡ್ ಬಂದಿತ್ತು. ಸಣ್ಣ ಗಾತ್ರದ ಕುಂಬಳಕಾಯಿಗಳು ಒಂದಕ್ಕೆ ೮೦ ರೂಪಾಯಿಯಂತೆ ಮಾರಾಟವಾದರೆ, ದೊಡ್ಡ ಗಾತ್ರದ ಕುಂಬಳ ಕಾಯಿಗಳು ೧೨೦ ರೂಪಾಯಿಯಿಂದ ೧೫೦ ರೂಪಾಯಿಗೆ ಖರೀದಿಯಾದವು. ಇನ್ನು ಬಾಳೆ ಕಂದುಗಳ ಬೆಲೆಯೂ ಗಗನಕ್ಕೇರಿದ್ದು, ಜೋಡಿ ಬಾಳೆ ಕಂದುಗಳು ೫೦ ರೂಪಾಯಿಗೆ ಮಾರಾಟವಾಗಿದ್ದು ವಿಶೇಷವಾಗಿತ್ತು.
ಹಬ್ಬದ ಹಿನ್ನೆಲೆಯಲ್ಲಿ ತರಕಾರಿ ಬೆಲೆಯೂ ಜಾಸ್ತಿಯಾಗಿತ್ತು. ಮಳೆ ಕೊರತೆ ಹಾಗೂ ಅಕಾಲಿಕ ಮಳೆಯ ಹಿನ್ನೆಲೆಯಲ್ಲಿ ತರಕಾರಿ ಬೆಳೆಯೇ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ದರ ಏರಿಕೆ ಭಾರಿ ಪ್ರಮಾಣದಲ್ಲಾಗಿತ್ತು. ಬೀನ್ಸ್ ೭೦ ರೂಪಾಯಿಯಾಗಿದ್ದರೆ, ಕ್ಯಾರೇಟ್ ೮೦, ಮೂಲಂಗಿ ೫೦, ಬೀಟ್ ರೂಟ್ ೪೦ ರೂಪಾಯಿ ಹೀಗೆ ಯಾವುದೇ ತರಕಾರಿ ಬೆಲೆ ಪ್ರತಿ ಕೆಜಿಗೆ ೩೦ ರೂಪಾಯಿಗಿಂತ ಕಡಿಮೆಯಿರಲಿಲ್ಲ.