ಶಿವಮೊಗ್ಗ: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಪಾರದರ್ಶಕವಾಗಿ ಸರ್ಕಾರದ ವಿರುದ್ಧ ಹೋರಾಟ ರೂಪಿಸಿದ್ದಾರೆ. ಪಕ್ಷ ಸಂಘಟನೆ, ಪಕ್ಷ ವಹಿಸಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಅಧ್ಯಕ್ಷರ ಬದಲಾವಣೆ ಬಗ್ಗೆ ಮಾತನಾಡಲು ಈಗ ಅಧ್ಯಕ್ಷ ಸ್ಥಾನ ಖಾಲಿ ಇಲ್ಲ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.
ಸರ್ಕಾರದ ವಿರುದ್ಧ ಮುಡಾ, ವಾಲ್ಮೀಕಿ ಹಗರಣ ಸೇರಿದಂತೆ ಭ್ರಷ್ಟಾಚಾರದ ವಿರುದ್ಧ ಹೋರಾಟವನ್ನು ವಿಜಯೇಂದ್ರ ರೂಪಿಸಿದ್ದಾರೆ. ವಿಜಯೇಂದ್ರ ಕಿರಿಯ ವಯಸ್ಸಿನಲ್ಲೇ ಅಧ್ಯಕ್ಷ ಸ್ಥಾನವನ್ನು ಜವಾಬ್ದಾರಿಯಿಂದ ನಿಭಾಯಿಸಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಕನಸು ಕಂಡಿದ್ದಾರೆ. ಹಾಗಾಗಿ ಅಧ್ಯಕ್ಷ ಸ್ಥಾನ ಸದ್ಯಕ್ಕೆ ಖಾಲಿ ಇಲ್ಲ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅಭಿಪ್ರಾಯಪಟ್ಟರು.
ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಯವರ ನಡುವೆ ಸಿಎಂ ಸ್ಥಾನಕ್ಕೆ ಪೈಪೋಟಿ ಇದೆ. ಇವರಿಬ್ಬರ ಕಚ್ಚಾಟದಿಂದ ಸರ್ಕಾರ ಪತನವಾಗದೆ ಮಧ್ಯಂತರ ಚುನಾವಣೆ ನಡೆಯದಿರಲಿ ಎಂಬುದು ನಮ್ಮ ಬಯಕೆಯಾಗಿದೆ ಎಂದು ವ್ಯಂಗ್ಯವಾಡಿದರು.
ಆದರೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಶಾಸಕರೊಂದಿಗೆ ನಿರಂತರವಾಗಿ ಸಭೆ ನಡೆಸುತ್ತಿದ್ದಾರೆ. ಕೆಲವು ಶಾಸಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಂತರಿಕ ಕಚ್ಚಾಟದಿಂದ ಸರ್ಕಾರ ಪತನ ನಿಶ್ಚಿತ ಎಂದರು.