ಗುಂಡ್ಲುಪೇಟೆ: ಜಾತಿಮ ಭೇದ ಹಾಗೂ ಅಸ್ಪೃಶ್ಯತೆ ಆಚರಣೆ ಕಾನೂನುಬಾಹಿರವಾಗಿದ್ದು, ಇಂಥ ಚಟುವಟಿಕೆ ನಡೆಸುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ತೆರಕಣಾಂಬಿ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಕೆ.ಎಂ.ಮಹೇಶ್ ಹೇಳಿದರು.
ತಾಲೂಕಿನ ಕುಂದಕೆರೆ ಗ್ರಾಮದಲ್ಲಿ ತಾಲೂಕು ಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಬುಧವಾರ ಆಯೋಜಿಸಿದ್ದ ಅಸ್ಪೃಶ್ಯತೆ ನಿರ್ಮೂಲನೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂವಿಧಾನ ಎಲ್ಲರಿಗೂ ಸಮಾನ ಹಕ್ಕುಗಳನ್ನು ನೀಡಿದ್ದು, ಜಾತಿನಿಂದನೆ ಹಾಗೂ ಅಸ್ಪೃಶ್ಯತೆ ನಿರ್ಮೂಲನೆಗೆ ಕಠಿಣವಾದ ಕಾನೂನುಗಳನ್ನು ಜಾರಿಗೊಳಿಸಲಾಗಿದೆ. ಸಂತ್ರಸ್ತರಿಂದ ಈ ಬಗ್ಗೆ ಯಾವುದೇ ದೂರುಗಳು ಬಂದರೂ ಪ್ರಕರಣ ದಾಖಲಿಸಲಾಗುವುದು. ಗ್ರಾಮದಲ್ಲಿ ಯಾವುದೇ ರೀತಿಯ ಅಸ್ಪೃಶ್ಯತೆಗೆ ಅವಕಾಶ ನೀಡದೆ ಪ್ರತಿಯೊಬ್ಬರೂ ಪರಸ್ಪರ ಸಹಕಾರದಿಂದ ಶಾಂತಿಯುತ ಬಾಳ್ವೆ ನಡೆಸುವಂತಾಗಬೇಕು ಎಂದು ಹೇಳಿದರು.
ಸಮಾಜಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮೋಹನ್ ಕುಮಾರ್, ವಕೀಲ ಅರವಿಂದ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿದ್ದರಾಜಶೆಟ್ಟಿ, ಕಾರ್ಯದರ್ಶಿ ಶಿವಸ್ವಾಮಿ, ಮುತ್ತಣ್ಣ, ಸುಭಾಷ್ ಮಾಡ್ರಹಳ್ಳಿ, ಸೋಮಣ್ಣ, ಚಿಕ್ಕಣ್ಣ ಇತರರು ಇದ್ದರು.