ಜಿಲ್ಲೆ

ಯಾವತ್ತೂ ಕಡಿಮೆಯಾಗಲ್ಲ ಪವಿತ್ರ ಸ್ಥಳದ ಶಕ್ತಿ

ಮುಂಡಗೋಡ: ಭಗವಂತ ಯಾವಾಗ, ಎಲ್ಲಿ, ಯಾರಿಗೆ ಅನುಗ್ರಹಿಸುತ್ತಾನೆ ಎಂಬುವುದನ್ನು ಹೇಳಲು ಸಾಧ್ಯವಿಲ್ಲ. ಆದರೆ, ಎಲ್ಲಿ ಭಕ್ತಿಯಿಂದ ಅಹ್ವಾನಿಸಿ ಆಮಂತ್ರಿಸಲಾಗುತ್ತದೆಯೊ ಅಲ್ಲಿ ಮಾತ್ರ ಅನುಗ್ರಹಿಸುತ್ತಾನೆ. ಹಾಗೆಯೇ ಶಾರದಮ್ಮನವರ ಭಕ್ತಿಗೆ ಮೆಚ್ಚಿ ಬ್ರಹ್ಮ, ವಿಷ್ಣು, ಮಹೇಶ್ವರರು ದೀಪಗಳ ರೂಪದಲ್ಲಿ ಚಿಗಳ್ಳಿ ಗ್ರಾಮದಲ್ಲಿ ನೆಲೆಸಿ 45 ವರ್ಷಗಳ ಕಾಲ ಸೇವೆ ಸ್ವೀಕರಿಸಿದ್ದಾರೆ ಎಂದು ಹೊನ್ನಾವರ ರ್ಕ ಜ್ಞಾನೇಶ್ವರಿ ಪೀಠದ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ತೀರ್ಥ ಸ್ವಾಮೀಜಿ ಹೇಳಿದರು.

ತಾಲೂಕಿನ ಚಿಗಳ್ಳಿ ಗ್ರಾಮದ ಶ್ರೀ ದೀಪನಾಥೇಶ್ವರ ದೇವಾಲಯ ನೂತನ ಕಟ್ಟಡವನ್ನು ಬುಧವಾರ ಉದ್ಘಾಟಿಸಿ ಅವರು ಆಶಿರ್ವಚನ ನೀಡಿದರು. ಶಾರದಾಬಾಯಿ ದೈವಜ್ಞ ಮಾತೆಯ ಮನಸಿನ ಇಚ್ಛೆ ಹಾಗೂ ಸಂಕಲ್ಪದಂತೆ ಎಣ್ಣೆ ಇಲ್ಲದೆ 45 ವರ್ಷಗಳ ದೀಪ ಉರಿದಿರುವುದು ಸಾಮಾನ್ಯವಲ್ಲ. ಈ ಸ್ಥಳದ ಶಕ್ತಿ ಅಪಾರವಾಗಿದೆ. ದೀಪ ಶಾಂತವಾದರೂ ಕೂಡ ದೀಪಗಳು ಉರಿಯುತ್ತಿದ್ದ ಪವಿತ್ರವಾದ ಸ್ಥಳದ ಶಕ್ತಿ ಯಾವತ್ತೂ ಕಡಿಮೆಯಾಗುವುದಿಲ್ಲ ಎಂದರು.

ದೀಪ ಉರಿಯುತ್ತಿದ್ದಾಗ ಅದರ ಮಹಿಮೆ ಯಾರಿಗೂ ತಿಳಿಯಲಿಲ್ಲ. ಅದನ್ನು ಕಳೆದುಕೊಂಡಾಗ ಅರ್ಥವಾದರೆ ಪ್ರಯೋಜನವಿಲ್ಲ. ಈಗ ದೀಪ ಉರಿಯುವುದು ನಿಂತಿರಬಹುದು. ಆದರೆ, ನಾಳೆ ದೇವಾಲಯದ ಪ್ರಾಣ ಪ್ರತಿಷ್ಠಾಪನೆಯಾದ ಬಳಿಕ ಅದಕ್ಕೊಂದು ರೂಪ ಸಿಗಲಿದ್ದು, ಈ ಕ್ಷೇತ್ರ ಅಭಿವೃದ್ಧಿಯಾಗಲಿದೆ ಎಂದರು.

ದೇವಾಲಯ ಟ್ರಸ್ಟ್ ಕಮಿಟಿ ಅಧ್ಯಕ್ಷ ಕೆ. ಶೇಷಾದ್ರಿ, ಕಾರ್ಯದರ್ಶಿ ಕೆ. ಚಂದ್ರಮೋಹನ, ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಗಣ್ಯರನ್ನು ಸನ್ಮಾನಿಸಲಾಯಿತು.