ಉಪ್ಪಿನಂಗಡಿ: ಗುರುವಾಯನಕೆರೆ-ಉಪ್ಪಿನಂಗಡಿ ನಡುವಣ ರಸ್ತೆಯ ಹೊಂಡ ಮುಚ್ಚುವ ಕಾಮಗಾರಿಯಲ್ಲಿ ನಿರ್ಲಕ್ಷೃ ವಹಿಸಲಾಗುತ್ತಿದೆ ಎಂದು ಆರೋಪಿಸಿ ಪ್ರತಿಭಟನೆ, ಇಲಾಖಾಧಿಕಾರಿಗಳನ್ನೇ ಸ್ಥಳಕ್ಕೆ ಕರೆಯಿಸಿ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡ ಘಟನೆ ವರದಿಯಾಗಿದೆ.
ಲೋಕೋಪಯೋಗಿ ಇಲಾಖೆಯ ಉಪ್ಪಿನಂಗಡಿ-ಗುರುವಾಯನಕೆರೆ ರಸ್ತೆ ಹೊಂಡಮಯವಾಗಿರುವ ಬಗ್ಗೆ ವ್ಯಾಪಕ ಟೀಕೆ, ಪತ್ರಿಕಾ ವರದಿಗಳು ಪ್ರಕಟವಾದ ಬೆನ್ನಿಗೆ ಸ್ಪಂದಿಸಿದ ಕ್ಷೇತ್ರದ ಶಾಸಕ ಹರೀಶ ಪೂಂಜ ಇಲಾಖಾಧಿಕಾರಿಗಳಿಗೆ ಯಾವುದಾದರೂ ಅನುದಾನ ಬಳಸಿ ಸದ್ಯಕ್ಕೆ ಹೊಂಡ ಮುಚ್ಚುವಂತೆ ಸೂಚಿಸಿದ್ದರು. ಅದರಂತೆ ರಾಜ್ಯ ಹೆದ್ದಾರಿ ವಾರ್ಷಿಕ ನಿರ್ವಹಣಾ ನಿಧಿಯಿಂದ 19 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ಗುತ್ತಿಗೆ ನೀಡಲಾಗಿತ್ತು.
ಕರಾಯ ಕಲ್ಲೇರಿ ನಡುವಣ ಗ್ರಾಮಸ್ಥರು ಭಾರಿ ಮಳೆಗೆ ವಾಹನ ಚಲಿಸಲು ಅಸಾಧ್ಯವಾಗಿದ್ದ ಸಮಯದಲ್ಲಿ ಹೊಂಡಗಳಿಗೆ ಕಲ್ಲು ಮಣ್ಣು ಹಾಕುವ ಮೂಲಕ ತಾತ್ಕಾಲಿಕ ದುರಸ್ತಿ ಮಾಡಿದ್ದರು. ಹೊಂಡ ಮುಚ್ಚುವ ಕಾಮಗಾರಿ ವಹಿಸಿದ್ದ ಗುತ್ತಿಗೆದಾರರು ಈ ಮಣ್ಣು ಹೊರ ತೆಗೆಯದೇ ಅದರ ಮೇಲೆಯೇ ತೇಪೆ ಹಾಕುತ್ತಿದ್ದರು. ಇದನ್ನು ಅರಿತ ಗ್ರಾಮಸ್ಥರಾದ ಜಗದೀಶ ಗೌಡ, ಲಿಂಗಪ್ಪ, ಆನಂದ ಆಚಾರ್ಯ, ಗುತ್ತಿಗೆದಾರರನ್ನು ಮಣ್ಣು ಹೊರ ತೆಗೆದು ಕಾಮಗಾರಿ ಆರಂಭಿಸಿ ಎಂದಾಗ ಮಾತಿನ ಚಕಮಕಿ ನಡೆಯಿತು. ತಕ್ಷಣವೇ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾಕಾರು ಸ್ಥಳದಿಂದಲೇ ಲೋಕೋಪಯೋಗಿ ಇಲಾಖಾ ಕಿರಿಯ ಇಂಜಿನಿಯರ್ ವರ್ಷಾ ಅವರನ್ನು ಸಂಪರ್ಕಿಸಿ ವಿಚಾರವನ್ನು ತಿಳಿಸಿದರು. ಸ್ಥಳಕ್ಕೆ ಬಂದ ಅವರು ಕಾಮಗಾರಿಸಮರ್ಪಕವಾಗಿ ನಿಭಾಯಿಸಿ. ಕಾಟಾಚಾರದ ಕಾಮಗಾರಿ ನಡೆಸಿ ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗಬೇಡಿ ಎಂದು ಮನವರಿಕೆ ಮಾಡಿದರು. ಬಳಿಕ ಸರಿಪಡಿಸಿ ಪರಿಪೂರ್ಣ ಕಾಮಗಾರಿ ನಡೆಸುವುದಾಗಿ ಗುತ್ತಿಗೆದಾರರು ಒಪ್ಪಿಕೊಂಡು ಕೆಲಸ ಮುಂದುವರೆಸಿದರು.